Belluti, Sidlaghatta : ಜಲಜೀವನ್ ಮಿಶನ್ (Jal Jeevan Mission) ಹೇಗೆ ಕೆಲಸ ಮಾಡಿದೆ, ಇದರಲ್ಲಿ ಸಮುದಾಯದ ಭಾಗವಹಿಸುವಿಕೆ, ಹಳ್ಳಿಗಳ ಸ್ಥಿತಿಗತಿ, ಈ ಯೋಜನೆಯ ಸಾಧಕ ಭಾದಕ ಹಾಗೂ ಉಪಯುಕ್ತತೆಗಳನ್ನು ಪರಿಶೀಲಿಸಲೆಂದು ತಾಲ್ಲೂಕಿಗೆ ವಿಶ್ವ ಬ್ಯಾಂಕ್ (World Bank) ತಂಡವು ಶನಿವಾರ ಭೇಟಿ ನೀಡಿದ್ದರು.
ಎಂಟು ಜನರಿದ್ದ ತಂಡದಲ್ಲಿ ಅಮೆರಿಕಾ, ಡೆನ್ಮಾರ್ಕ್, ಸ್ವೀಡನ್, ಲಂಡನ್ ಮತ್ತಿತರ ದೇಶಗಳ ಪ್ರತಿನಿಧಿಗಳಿದ್ದರು. ತಾಲ್ಲುಕಿನ ಬೆಳ್ಳೂಟಿಗೆ ಆಗಮಿಸಿದ ತಂಡ ಗ್ರಾಮಸ್ಥರನ್ನು ಮಾತನಾಡಿಸಿದರು. ಶಿಡ್ಲಘಟ್ಟ ತಾಲ್ಲೂಕಿನ ಬೋದಗೂರು ಹಾಗೂ ಬೆಳ್ಳೂಟಿ ಕೆರೆ ವೀಕ್ಷಿಸಿದರು.
ಜಲಜೀವನ್ ಮಿಶನ್ ಯೋಜನೆಗೆ ಬಹು ಮುಖ್ಯವಾಗಿ ಆರ್ಥಿಕ ನೆರವನ್ನು ಒದಗಿಸುತ್ತಿರುವವರು ವಿಶ್ವ ಬ್ಯಾಂಕ್. ವಿಶ್ವ ಬ್ಯಾಂಕ್ ಹಣದ ನೆರವಿನಿಂದ ಹಲವಾರು ಕೆರೆಗಳನ್ನು ಅಭಿವೃದ್ಧಿ ಹಾಗೂ ಜೀರ್ಣೋದ್ಧಾರ ಮಾಡಲಾಗಿದೆ. ಹಾಗಾಗಿ ಅವರು ಪರಿಶಿಲನೆಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಕೆರೆಗಳ ಹೂಳೆತ್ತಲು ಇನ್ನಷ್ಟು ಹಣವನ್ನು ನೀಡುವಂತೆ ಸ್ಥಳೀಯ ಜನರು ವಿಶ್ವ ಬ್ಯಾಂಕ್ ತಂಡವನ್ನು ವಿನಂತಿಸಿದರು.
ವಿಶ್ವ ಬ್ಯಾಂಕ್ ತಂಡದ ಸದಸ್ಯರು, ನರೇಗಾ ಯೋಜನೆಯಲ್ಲಿಯೇ ಸಾಕಷ್ಟು ಹಣ ಇರುವಾಗ ಅದನ್ನು ಬಳಸಿಕೊಳ್ಳಬಹುದಲ್ವಾ ಎಂದು ಅಧಿಕಾರಿಗಳನ್ನು ಕೇಳಿದರು. ಆಗ ಅಧಿಕಾರಿಗಳು ನರೇಗಾ ಯೋಜನೆಯಲ್ಲಿ ದಿನಗೂಲಿ 309 ರೂ ನೀಡಲಾಗುತ್ತದೆ. ಈ ಕೂಲಿಗೆ ಜನರು ಮುಂದೆ ಬರುತ್ತಿಲ್ಲ. ಅಲ್ಲದೆ ಈ ಯೋಜನೆಯಲ್ಲಿ ದೊಡ್ಡ ಯಂತ್ರಗಳನ್ನು ಬಳಸಿ ಕೆಲಸ ಮಾಡಿಸಲು ಆಗದು ಎಂದು ವಿವರಿಸಿದರು. ಸಮುದಾಯಿಕ ಕೆಲಸಗಳಾದ ಕೆರೆಗಳ ಹೂಳೆತ್ತಲು ವಿಶ್ವ ಬ್ಯಾಂಕ್ ಇನ್ನಷ್ಟು ನೆರವು ನೀಡಿದಲ್ಲಿ ಯಂತ್ರಗಳನ್ನು ಬಳಸಿ ತ್ವರಿತವಾಗಿ ಕಾಮಗಾರಿ ನಡೆಸಬದುದೆಂದು ಜನರು ವಿನಂತಿಸುತ್ತಿರುವರು ಎಂದು ವಿವರಿಸಿದರು.
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶಿವಕುಮಾರ್, ತಾಲ್ಲೂಕು ಪಂಚಾಯಿತಿ ಇಒ ಮುನಿರಾಜು, ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ಪಿಡಿಒ ಕಾತ್ಯಾಯಿನಿ, ಗ್ರಾಮ ಪಂಚಾಯಿತಿ ಸದಸ್ಯರಾದ ವಿಜಯೇಂದ್ರ, ಬೆಳ್ಳೂಟಿ ಸಂತೋಷ್ ಹಾಜರಿದ್ದರು.