
Sidlaghatta : ಸಚಿವ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ ನಟನೆಯ “ಕಲ್ಟ್” ಸಿನಿಮಾ ಪ್ರಚಾರದ ಫ್ಲೆಕ್ಸ್ ತೆರವುಗೊಳಿಸಿದ ವಿಚಾರವಾಗಿ ದೊಡ್ಡ ರಾದ್ಧಾಂತವೇ ನಡೆದ ಬೆನ್ನಲ್ಲೇ, ಶಿಡ್ಲಘಟ್ಟ ನಗರಸಭೆ ಅಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ನಗರದ ಸೌಂದರ್ಯಕ್ಕೆ ಅಡ್ಡಿಯಾಗಿದ್ದ ಹಾಗೂ ಸಂಚಾರಕ್ಕೆ ತೊಂದರೆ ನೀಡುತ್ತಿದ್ದ ಎಲ್ಲ ಬ್ಯಾನರ್, ಫ್ಲೆಕ್ಸ್ ಮತ್ತು ಬಂಟಿಂಗ್ಸ್‌ಗಳನ್ನು ತೆರವುಗೊಳಿಸುವ ಬೃಹತ್ ಕಾರ್ಯಾಚರಣೆ ಆರಂಭಿಸಿದ್ದಾರೆ.
ಎಲ್ಲೆಲ್ಲಿ ಕಾರ್ಯಾಚರಣೆ? ನಗರದ ಪ್ರಮುಖ ಆಯಕಟ್ಟಿನ ಸ್ಥಳಗಳಾದ ಕೋಟೆ ವೃತ್ತ, ತಾಲ್ಲೂಕು ಕಚೇರಿ ಮುಂಭಾಗ, ಬಸ್ ನಿಲ್ದಾಣ ಮತ್ತು ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕದಲ್ಲಿ ಅಕ್ರಮವಾಗಿ ಅಳವಡಿಸಲಾಗಿದ್ದ ರಾಜಕೀಯ ಬ್ಯಾನರ್‌ಗಳು, ಶುಭಾಶಯದ ಪೋಸ್ಟರ್‌ಗಳು ಮತ್ತು ಶ್ರದ್ಧಾಂಜಲಿಯ ಫೋಟೋಗಳನ್ನು ನಗರಸಭೆ ಸಿಬ್ಬಂದಿ ತೆರವುಗೊಳಿಸಿದರು.
ವಿವಾದದ ಹಿನ್ನೆಲೆ: ಕೋಟೆ ವೃತ್ತದಲ್ಲಿ “ಕಲ್ಟ್” ಸಿನಿಮಾದ ಫ್ಲೆಕ್ಸ್ ತೆರವುಗೊಳಿಸಿದ್ದಕ್ಕೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರು ಪೌರಾಯುಕ್ತೆ ಜಿ. ಅಮೃತಾ ಅವರಿಗೆ ಕರೆ ಮಾಡಿ ಏಕವಚನದಲ್ಲಿ ನಿಂದಿಸಿದ್ದರು. ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಡ್ಲಘಟ್ಟಕ್ಕೆ ಆಗಮಿಸಿದ್ದಾಗ ನಡೆದ ಬ್ಯಾನರ್ ವಿಚಾರವನ್ನು ಪ್ರಸ್ತಾಪಿಸಿ, “ನನ್ನ ತಾಕತ್ತು ಏನೆಂದು ತೋರಿಸಬೇಕಾಗುತ್ತದೆ” ಎಂದು ಧಮ್ಕಿ ಹಾಕಿದ್ದರು.
ತೀವ್ರಗೊಂಡ ಕಾನೂನು ಹೋರಾಟ: ರಾಜೀವ್ ಗೌಡ ಅವರ ಈ ವರ್ತನೆಯು ಕೇವಲ ಸ್ಥಳೀಯ ಪ್ರತಿಭಟನೆಗೆ ಸೀಮಿತವಾಗದೆ, ರಾಜ್ಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಮಹಿಳಾ ಆಯೋಗವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸರಿಗೆ ಕ್ರಮ ಕೈಗೊಳ್ಳಲು ಸೂಚಿಸಿದೆ. ಇತ್ತ ಕೆಪಿಸಿಸಿ (KPCC) ಕೂಡ ರಾಜೀವ್ ಗೌಡ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ಪಕ್ಷಕ್ಕೂ ಈ ಘಟನೆ ಮುಜುಗರ ತಂದಿದೆ. ಈ ಎಲ್ಲ ರಾದ್ಧಾಂತಗಳ ನಡುವೆ ಅಧಿಕಾರಿಗಳು ಈಗ ನಗರವನ್ನು ಬ್ಯಾನರ್ ಮುಕ್ತಗೊಳಿಸಲು ಪಣತೊಟ್ಟಿದ್ದಾರೆ.