
Sidlaghatta : “ನೀವು ಒಬ್ಬಂಟಿಯಲ್ಲ, ನಾವೆಲ್ಲರೂ ನಿಮ್ಮ ಜೊತೆಗಿದ್ದೇವೆ” ಎನ್ನುವ ಭರವಸೆಯೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆಯ ಜಿಲ್ಲಾ ಕಾರ್ಯಕರ್ತರು ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಜಿ.ಅಮೃತಾ ಅವರಿಗೆ ಸಾಂತ್ವನ ಹೇಳಿದರು. ರಾಜಕೀಯ ಮುಖಂಡರ ಬೆದರಿಕೆಯಿಂದ ಕುಗ್ಗಿದ್ದ ಮಹಿಳಾ ಅಧಿಕಾರಿಗೆ ಕನ್ನಡಪರ ಸಂಘಟನೆಗಳು ನೀಡಿದ ಬೆಂಬಲ ಹೊಸ ಚೈತನ್ಯ ನೀಡಿದೆ.
ಕರವೇ ಸಿಂಹ ಸೇನೆ ಅಧ್ಯಕ್ಷ ಶ್ರೀನಿವಾಸಗೌಡ ಹಾಗೂ ಮಹಿಳಾ ಕಾರ್ಯಕರ್ತರು ನಗರಸಭೆ ಕಚೇರಿಗೆ ಆಗಮಿಸಿ, ಪೌರಾಯುಕ್ತರಿಗೆ ಅರಿಶಿನ ಕುಂಕುಮ, ಫಲ ತಾಂಬೂಲ ಹಾಗೂ ರೇಷ್ಮೆ ಸೀರೆ ನೀಡಿ ಗೌರವಿಸಿದರು. ಈ ಮೂಲಕ ಒಬ್ಬ ಮಹಿಳಾ ಅಧಿಕಾರಿಯ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಇಡೀ ನಾಡು ಜೊತೆಗಿರುತ್ತದೆ ಎಂಬ ಸಂದೇಶ ರವಾನಿಸಿದರು.
ಕನ್ನಡ ಸಂಘಟನೆಯ ಕಾರ್ಯಕರ್ತರು ನೀಡಿದ ಈ ಆತ್ಮೀಯ ಗೌರವ ಮತ್ತು ಸಾಂತ್ವನದ ನುಡಿಗಳನ್ನು ಕೇಳಿದ ಅಮೃತಾ ಗೌಡ ಅವರು ಕೆಲ ಕಾಲ ಭಾವೋದ್ವೇಗಕ್ಕೆ ಒಳಗಾದರು. ಅವರ ಕಣ್ಣಂಚಿನಲ್ಲಿ ಕಣ್ಣೀರು ಜಿನುಗಿತು. “ನಿಮ್ಮೆಲ್ಲರ ಸಹಕಾರ ಮತ್ತು ನೀಡುತ್ತಿರುವ ಧೈರ್ಯದಿಂದ ನನಗೆ ಮತ್ತು ನನ್ನ ಸಿಬ್ಬಂದಿಗೆ ಇನ್ನಷ್ಟು ಉತ್ತಮ ಕೆಲಸಗಳನ್ನು ಮಾಡುವ ಮನೋಸ್ಥೈರ್ಯ ಬಂದಿದೆ,” ಎಂದು ಅವರು ಭಾವುಕರಾಗಿ ನುಡಿದರು.