Sidlaghatta : ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿರುವ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ ಭಾರತ್ ಜೋಡೋ (Bharat Jodo Yatra) ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಶಿಡ್ಲಘಟ್ಟ ತಾಲ್ಲೂಕಿನ Congress ಕಾರ್ಯಕರ್ತರು ಚಿಕ್ಕಬಳ್ಳಾಪುರ ಜಿಲ್ಲೆಯ ಕಾಂಗ್ರೆಸ್ ಕೋಆರ್ಡಿನೇಟರ್ ರಾಜೀವ್ ಗೌಡ ನೇತೃತ್ವದಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿ ತುರುವೇಕೆರೆಗೆ ತೆರಳಿದರು.
ನಗರದ ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ಸುಮಾರು 200 ಬಸ್ ಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತೆರಳಿದರು.
ಬಸ್ ಮತ್ತು ಕಾರ್ ಗಳಲ್ಲಿ ತೆರಳಿದ ವಾಹನಗಳಿಗೆ ಚಾಲನೆ ನೀಡಿ ಎಬಿಡಿ ಸಂಸ್ಥೆಯ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಮಾತನಾಡಿ, ಇಡೀ ದೇಶದಲ್ಲಿ ರಾಹುಲ್ ಗಾಂಧಿ ಯವರ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಪಾದಯಾತ್ರೆ ಸಂಚಲನ ಮೂಡಿಸಿದೆ. ರಾಷ್ಟ್ರೀಯ ಭಾವೈಕ್ಯತೆಗಾಗಿ ದೇಶದ ಸಮಗ್ರತೆ ಉಳಿಸಲು ನಡೆಯುತ್ತಿರುವ ಈ ಪಾದಯಾತ್ರೆಯಲ್ಲಿ ತಾಲ್ಲೂಕಿನಿಂದ ಸುಮಾರು ಹತ್ತು ಸಾವಿರ ಕಾರ್ಯಕರ್ತರು ತೆರಳುತ್ತಿದ್ದಾರೆ. ತಾಲ್ಲೂಕಿನ ಪ್ರತಿ ಗ್ರಾಮದಿಂದಲೂ ಕಾರ್ಯಕರ್ತರು ಬಂದಿದ್ದಾರೆ, ಮಹಿಳೆಯರೂ ಸಾಕಷ್ಟು ಸಂಖ್ಯೆಯಲ್ಲಿ ತೆರಳುತ್ತಿದ್ದಾರೆ ಎಂದರು.
ನಗರ ಸಭಾ ಉಪಾಧ್ಯಕ್ಷ ಅಫ್ಸರ್ ಪಾಶ,ಅಬ್ದುಲ್ ಗಫೂರ್, ಮುನೀಂದ್ರ, ಗುಡಿಹಳ್ಳಿ ನಾರಾಯಣಸ್ವಾಮಿ, ಜಂಗಮಕೋಟೆ ಕುಟ್ಟಿ ಮುನಿರಾಜು, ರವಿಗೌಡ ಹಾಗೂ ಮಹಿಳಾ ಘಟಕದ ಮುಖ್ಯಸ್ಥೆ ಸಹನಾ ಗೌಡ ರವರ ನೇತೃತ್ವದಲ್ಲಿ ನೂರಾರು ಮಹಿಳೆಯರು ಕಾರ್ಯಕ್ರಮಕ್ಕೆ ತೆರಳಿದರು.