Sidlaghatta : ಬಹಳ ವರ್ಷಗಳ ನ್ಯಾಯ ಸಮ್ಮತವಾದ ಬೇಡಿಕೆ, ಸಂವಿಧಾನದಲ್ಲಿ ಹೇಳಿರುವಂತೆ ಜನಸಂಖ್ಯೆಯ ಆಧಾರದಲ್ಲಿ ಮೀಸಲಾತಿ ನೀಡಬೇಕೆಂಬ ಬೇಡಿಕೆಯಂತೆ ಪರಿಶಿಷ್ಟ ಜಾತಿಗೆ (Scheduled Castes) ಶೇ 15 ರಷ್ಟಿದ್ದ ಮೀಸಲಾತಿಯನ್ನು ಶೇ 17 ಕ್ಕೆ ಹಾಗೂ ಪರಿಶಿಷ್ಟ ಪಂಗಡಕ್ಕೆ (Scheduled Tribes) ಶೇ 3 ರಿಂದ ಶೇ 7 ಕ್ಕೆ ಮೀಸಲಾತಿ ಹೆಚ್ಚಿಸಲು ಸರ್ಕಾರ ತೀರ್ಮಾನಿಸಿರುವುದು ಅತ್ಯಂತ ಸಂತಸದ ವಿಷಯ ಎಂದು ಮಾಜಿ ಶಾಸಕ ಎಂ.ರಾಜಣ್ಣ (M Rajanna) ತಿಳಿಸಿದರು.
ರಾಜ್ಯ BJP ಸರ್ಕಾರ SC, ST ಮೀಸಲಾತಿಯಲ್ಲಿ ಹೆಚ್ಚಳ ಮಾಡಿರುವುದನ್ನು ಸ್ವಾಗತಿಸಿ ತಾಲ್ಲೂಕು ಭಾರತೀಯ ಜನತಾ ಪಾರ್ಟಿ ಮತ್ತು ನಗರ ಬಿಜೆಪಿ ವತಿಯಿಂದ ಶನಿವಾರ ಕಾರ್ಯಕರ್ತರು ನಗರದ ಕೋಟೆ ವೃತ್ತ ದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಿಯೋತ್ಸವ ಆಚರಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಮುಂಬರುವ ದಿನಗಳಲ್ಲಿ ಸರ್ಕಾರ ಎಸ್.ಸಿ/ಎಸ್.ಟಿ ಒಳಮೀಸಲಾತಿಗೂ ಕೂಡ ಎಲ್ಲರೊಂದಿಗೆ ಚರ್ಚಿಸಿ, ಯಾವುದೇ ಸಮಾಜಕ್ಕೆ ಅನ್ಯಾಯವಾಗದಂತೆ ಕೈಬಿಡದಂತೆ ಕಾನೂನು ತಜ್ಞರೊಂದಿಗೆ ಸಮಾಲೋಚಿಸಿ ಎಲ್ಲಾ ಪಕ್ಷಗಗಳೊಂದಿಗೆ ಚರ್ಚಿಸಿ ತೀರ್ಮಾನಕ್ಕೆ ಬರಲಾಗುವುದು ಎಂದು ಮುಖ್ಯಮಂತ್ರಿಯವರು ತಿಳಿಸಿದ್ದಾರೆ. ಇದು ಸ್ವಾಗತಾರ್ಹ ವಿಷಯ ಎಂದರು.
ತಾಲ್ಲೂಕು ಬಿಜೆಪಿ ಅಧ್ಯಕ್ಷ ಕಂಬದಹಳ್ಳಿ ಸುರೇಂದ್ರ ಗೌಡ ಮಾತನಾಡಿ, ಭಾರತೀಯ ಜನತಾ ಪಾರ್ಟಿ ದಲಿತರ ಮತ್ತು ಹಿಂದುಳಿದ ವರ್ಗಗಳ ಪರವಾಗಿದ್ದು, ದೇಶದ ಅತ್ಯುನ್ನತ ಸ್ಥಾನ ರಾಷ್ಟ್ರಪತಿ ಸ್ಥಾನವನ್ನು ಹಿಂದುಳಿದ ವರ್ಗಕ್ಕೆ ನೀಡಿದೆ ಎಂದರು.
ರಾಜ್ಯದ ಮೀಸಲಾತಿಯ ಬಗ್ಗೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗ ನೀಡಿದ ವರದಿಯನ್ನು ಅಂಗೀಕರಿಸಿ ಸರ್ವ ಪಕ್ಷಗಳ ಗಮನಕ್ಕೆ ತಂದು ಸರ್ವಾನುಮತದಿಂದ ಅಂಗೀಕರಿಸಿ ಎಸ್ಸಿ ಮೀಸಲಾತಿಯನ್ನು ಮತ್ತು ಎಸ್ ಟಿ ಮೀಸಲಾತಿಯನ್ನು ಏರಿಸಿ ಹಿಂದುಳಿದ ವರ್ಗಗಳ ಯುವಕರ ಪಾಲಿಗೆ ನ್ಯಾಯ ಒದಿಗಿಸಿದೆ ಎಂದರು.
ನಗರ ಮಂಡಲ್ ಅಧ್ಯಕ್ಷ ರಾಘವೇಂದ್ರ, ಡಾ.ಡಿ.ಟಿ.ಸತ್ಯನಾರಾಯಣ ರಾವ್, ರಾಮಚಂದ್ರ, ಕನಕಪ್ರಸಾದ್, ರಮೇಶ್, ನಾಗೇಶ್, ತ್ರಿವೇಣಿ, ರತ್ನಮ್ಮ, ನರೇಶ್, ಮಕ್ಸೂದ್, ಮುಕೇಶ್, ದೊಣ್ಣಹಳ್ಳಿ ರಾಮಣ್ಣ ಹಾಜರಿದ್ದರು.