
Sidlaghatta : “ಪೌರಾಯುಕ್ತರ ವಿರುದ್ಧ ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ ನಡೆದುಕೊಂಡಿರುವ ರೀತಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಮುಜುಗುರ ತಂದಿದೆ. ಇಂತಹ ವ್ಯಕ್ತಿಯನ್ನು ಕ್ಷೇತ್ರಕ್ಕೆ ಪರಿಚಯಿಸಿ ತಪ್ಪು ಮಾಡಿದೆವು ಎಂದು ನನಗೂ ಮತ್ತು ನನ್ನ ತಂದೆಯವರಿಗೂ ಈಗ ಅನಿಸುತ್ತಿದೆ,” ಎಂದು ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಮುನಿಯಪ್ಪ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ತಾಲ್ಲೂಕಿನ ಹಂಡಿಗನಾಳದ ಮಾಜಿ ಸಚಿವ ವಿ. ಮುನಿಯಪ್ಪ ಅವರ ನಿವಾಸದಲ್ಲಿ ಗುರುವಾರ ನಡೆದ ಚೀಮುಲ್ ಚುನಾವಣಾ ಪೂರ್ವಭಾವಿ ಸಭೆಯ ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ಸಂಸ್ಕಾರವಿಲ್ಲದ ರಾಜಕಾರಣ:
“ನನ್ನ ತಂದೆ ವಿ. ಮುನಿಯಪ್ಪ ಅವರು 45 ವರ್ಷಗಳ ಕಾಲ ಸುದೀರ್ಘ ರಾಜಕಾರಣ ಮಾಡಿದ್ದಾರೆ. ಅವರು ಎಂದಿಗೂ ಅಧಿಕಾರಿಗಳನ್ನು ಅಥವಾ ಜನಸಾಮಾನ್ಯರನ್ನು ಅಗೌರವದಿಂದ ಕಂಡವರಲ್ಲ. ನಮಗೂ ಅದನ್ನೇ ಕಲಿಸಿದ್ದರು. ಆದರೆ ರಾಜೀವ್ ಗೌಡ ಅವರು ಅಧಿಕಾರಿಗಳನ್ನು ನಿಂದಿಸಿರುವುದು ಮಾತ್ರವಲ್ಲದೆ, ಶಾಸಕರ ಬಗ್ಗೆಯೂ ಕೀಳುಮಟ್ಟದ ಪದಬಳಕೆ ಮಾಡಿ ಕ್ಷೇತ್ರದ ಶಾಂತಿಯುತ ವಾತಾವರಣವನ್ನು ಹಾಳು ಮಾಡಿದ್ದಾರೆ,” ಎಂದು ಕಿಡಿಕಾರಿದರು.
ಹೈಕಮಾಂಡ್ ಗಮನಕ್ಕೆ ದೂರು:
ಈ ಆಡಿಯೋ ಕೇಳಿ ಮಾಜಿ ಸಚಿವ ವಿ. ಮುನಿಯಪ್ಪ ಅವರು ತೀವ್ರವಾಗಿ ನೊಂದಿದ್ದಾರೆ ಎಂದು ತಿಳಿಸಿದ ಶಶಿಧರ್, “ಜನರ ಮುಂದೆ ನಾವು ತಲೆತಗ್ಗಿಸುವಂತಾಗಿದೆ. ಕಾರ್ಯಕರ್ತರು ಕೂಡ ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ರಾಜೀವ್ ಗೌಡ ಅವರ ಕಾರ್ಯವೈಖರಿ ತಿದ್ದುಕೊಳ್ಳುವಂತೆ ಹಲವು ಬಾರಿ ಹೇಳಿದರೂ ಅವರು ಕೇಳಲಿಲ್ಲ. ಈ ಎಲ್ಲ ಬೆಳವಣಿಗೆಗಳನ್ನು ಕಾಂಗ್ರೆಸ್ ಹೈಕಮಾಂಡ್ ಗಮನಕ್ಕೆ ತರಲಾಗಿದೆ. ಪಕ್ಷವು ಯಾವ ನಿರ್ಧಾರ ಕೈಗೊಳ್ಳುತ್ತದೆಯೋ ಅದಕ್ಕೆ ನಾವು ಬದ್ಧರಿದ್ದೇವೆ,” ಎಂದು ಸ್ಪಷ್ಟಪಡಿಸಿದರು.
ರಾಜೀವ್ ಗೌಡ ಗೆ ಕೆ.ಪಿ.ಸಿ.ಸಿ ಯಿಂದ ನೋಟಿಸ್
ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಜಿ.ಅಮೃತಾ ಅವರಿಗೆ ದೂರವಾಣಿ ಸಂಭಾಷಣೆ ನಡೆಸುವಾಗ ವ್ಯಕ್ತಿಗತ ನಿಂದನೆ ಮಾಡಿ, ಕೆಟ್ಟ ಪದಗಳನ್ನು ಉಪಯೋಗಿಸಿ ನಿಂದನೆ ಮಾಡಿರುವ ವಿಷಯ ಮಾಧ್ಯಮಗಳಲ್ಲಿ ಬಿತ್ತರಗೊಂಡಿವೆ. ತಮ್ಮ ವರ್ತನೆಯು ಪಕ್ಷಕ್ಕೆ ಮುಜುಗರ ತಂದಿದ್ದು, ತಾವು ಶಿಸ್ತನ್ನು ಉಲ್ಲಂಘನೆ ಮಾಡಿರುವುದರಿಂದ ಕಾರಣ ಕೇಳಿ ನೋಟಿಸ್ ನೀಡಿದ್ದೇವೆ. ಒಂದು ವಾರದ ಒಳಗೆ ಸೂಕ್ತ ಸಮಜಾಯಿಷಿ ನೀಡಬೇಕು. ಇಲ್ಲವಾದಲ್ಲಿ ಶಿಸ್ತು ಸಮಿತಿಯು ಕ್ರಮ ಕೈಗೊಳ್ಳಲಿದೆ ಎಂದು ಕೆ.ಪಿ.ಸಿ.ಸಿ ಕಾರ್ಯಧ್ಯಕ್ಷ ಜಿ.ಸಿ.ಚಂದ್ರಶೇಖರ್ ನೋಟಿಸ್ ನೀಡಿದ್ದಾರೆ.