
Sidlaghatta : ಜಂಗಮಕೋಟೆ ಹೋಬಳಿಯಲ್ಲಿ ಕೆಐಎಡಿಬಿಯಿಂದ ಕೈಗಾರಿಕೆ ಪ್ರದೇಶ ಅಭಿವೃದ್ದಿಯ ಯೋಜನೆಯನ್ನು ಕೈ ಬಿಡಬೇಕು. ಭೂ ಸ್ವಾಧೀನದ ವಿರುದ್ದ ನಮ್ಮ ಹೋರಾಟ ಮುಂದುವರೆದಿದ್ದು ಜುಲೈ 1 ರಂದು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಗೆ ರೈತರು ಟ್ರ್ಯಾಕ್ಟರ್ ಗಳ ಮೂಲಕ ತೆರಳಿ ಪ್ರತಿಭಟನೆ ನಡೆಸಲಾಗುವುದು ಎಂದು ಕೆಐಎಡಿಬಿ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಹೀರೆಬಲ್ಲ ಕೃಷ್ಣಪ್ಪ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಟ್ರ್ಯಾಕ್ಟರ್ ಗಳ ಮೂಲಕ ಪ್ರತಿಭಟನೆ ನಡೆಸುವ ಹಿನ್ನಲೆ ಶಿಡ್ಲಘಟ್ಟದ ರೈತರ ಕಚೇರಿಯಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಪ್ರತಿಭಟನೆಯ ವಿವರ ನೀಡಿ ಮಾತನಾಡಿದರು.
ಜಂಗಮಕೋಟೆ ಹೋಬಳಿಯಲ್ಲಿ ಕೆಐಎಡಿಬಿಯು ಭೂ ಸ್ವಾನ ಪ್ರಕ್ರಿಯೆ ಆರಂಭಿಸಿದಾಗಿನಿಂದಲೂ ಇದುವರೆಗೂ ನಾವು ಹಲವು ರೀತಿಯ ಪ್ರತಿಭಟನೆ ನಡೆಸಿದ್ದು ಭೂಮಿಯ ಸ್ವಾಧೀನವನ್ನು ವಿರೋಧಿಸುತ್ತಲೆ ಬಂದಿದ್ದೇವೆ. ಯಾವುದೆ ಕಾರಣಕ್ಕೂ ನಾವು ಕೃಷಿ ಭೂಮಿಯನ್ನು ಕೆಐಎಡಿಬಿಗೆ ಬಿಟ್ಟುಕೊಡುವ ಪ್ರಶ್ನೆಯೆ ಇಲ್ಲ ಎಂದರು.
ಭೂ ಸ್ವಾನ ವಿಚಾರದಲ್ಲೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಶಾಸಕ ಬಿ.ಎನ್.ರವಿಕುಮಾರ್ ಅವರು ರೈತರ ಪರ ನಿಂತಿಲ್ಲ. ರೈತರಿಂದ ಭೂಮಿಯನ್ನ ಕಿತ್ತುಕೊಂಡು ಕೈಗಾರಿಕೆಗಳನ್ನು ಆರಂಭಿಸುವತ್ತಲೆ ಅವರು ನಿಂತಿದ್ದಾರೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಇದುವರೆಗೂ ನಾನಾ ಹಂತದ ಪ್ರತಿಭಟನೆ, ಹೋರಾಟದ ಮೂಲಕ ಕೆಐಎಡಿಬಿಯ ಭೂ ಸ್ವಾಧೀನ ವಿರುದ್ದ ನಿಂತಿರುವ ನಾವು ಇದೀಗ ಜಿಲ್ಲಾಧಿಕಾರಿಗಳ ಕಚೇರಿಗೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದಲೂ ಟ್ರ್ಯಾಕ್ಟರ್ ಗಳ ಮೂಲಕ ಆಗಮಿಸಿ ಅಲ್ಲಿ ಪ್ರತಿಭಟನೆ ನಡೆಸುವ ಮೂಲಕ ಜಂಗಮಕೋಟೆಯಲ್ಲಿ ಭೂ ಸ್ವಾಧೀನದ ವಿರುದ್ದ ಇರುವ ರೈತರಿಗೆ ಬೆಂಬಲ ನೀಡಲಿದ್ದಾರೆ ಎಂದರು.
ಈ ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಮಾಜಿ ಕೇಂದ್ರ ಸಚಿವ ಇಬ್ರಾಹಿಂ ಇನ್ನಿತರೆ ಅನೇಕ ರಾಜ್ಯ, ರಾಷ್ಟ್ರೀಯ ನಾಯಕರು ಭಾಗವಹಿಸಿ ರೈತರ ಹೋರಾಟಕ್ಕೆ ಬೆಂಬಲ ನೀಡಲಿದ್ದಾರೆ ಎಂದು ವಿವರಿಸಿದರು.
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ವೇಣುಗೋಪಾಲ್, ಮುನಿನಂಜಪ್ಪ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ನಡಿಪಿನಾಯಕನಹಳ್ಳಿ ಅಜಿತ್, ಅಶ್ವತ್ಥಪ್ಪ ಇನ್ನಿತರೆ ರೈತ ಮುಖಂಡರು ಹಾಜರಿದ್ದರು.