Jangamakote, Sidlaghatta : ಶಿಡ್ಲಘಟ್ಟ ಸರ್ಕಾರಿ ಪ್ರೌಢಶಾಲೆ ಜಂಗಮಕೋಟೆಯಲ್ಲಿ ಬುಧವಾರ ಜಂಗಮಕೋಟೆ ಹೋಬಳಿ ಮಟ್ಟದ ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ (Pratibha Karanji) ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಜಂಗಮಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಜೆ.ಶ್ರೀನಿವಾಸ್ ಅವರು ಮಾತನಾಡಿದರು.
ಈ ಜಗತ್ತಿನಲ್ಲಿ ಜ್ಞಾನಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ, ಶಿಕ್ಷಕರಿಗಿಂತ ದೊಡ್ಡವರು ಯಾರೂ ಇರುವುದಿಲ್ಲ. ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸಿ ಕೊಳ್ಳಲು ಪ್ರತಿಭಾ ಕಾರಂಜಿಯು ಒಂದು ಉತ್ತಮ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಉತ್ತಮ ಜ್ಞಾನಾರ್ಜನೆಯನ್ನು ಮಾಡಿಕೊಂಡು ಶಿಕ್ಷಕರಿಗೆ ಪೋಷಕರಿಗೆ ಹಾಗೂ ಶಾಲೆಗೆ ಗೌರವವನ್ನು ತರಬೇಕು ಎಂದರು.
ಶಿಕ್ಷಣ ಸಂಯೋಜಕ ಭಾಸ್ಕರ್ ಗೌಡ ಮಾತನಾಡಿ, ಶಿಕ್ಷಣ ಇಲಾಖೆಯ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾದ ಈ ಪ್ರತಿಭಾ ಕಾರಂಜಿ ಸ್ಪರ್ಧೆಯ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಸೋಲು ಗೆಲುವಿನ ಬಗ್ಗೆ ಯೋಚಿಸದೆ ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಈ ಪ್ರತಿಭಾ ಕಾರಂಜಿ ವೇದಿಕೆಯನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.
ಶಿಡ್ಲಘಟ್ಟ ತಾಲ್ಲೂಕಿನ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಲ್.ವಿ.ವೆಂಕಟರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆಯನ್ನು ವ್ಯಕ್ತಪಡಿಸಲು ಇಲಾಖೆಯು ರೂಪಿಸಿರುವ ಈ ಯೋಜನೆಯು ಅತ್ಯಂತ ಉಪಯುಕ್ತವಾಗಿದ್ದು ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆಯಬೇಕೆಂದುದರು.
ಕಾರ್ಯಕ್ರಮದಲ್ಲಿ ಈ ಸಾಲಿನಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿರುವ ನಡಿಪಿನಾಯಕನಹಳ್ಳಿಯ ನವೋದಯ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎನ್.ಕೆ.ಸತ್ಯನಾರಾಯಣ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ರಾಜೇಶ್ವರಿ ಉಜ್ರೇಕರ್, ಶಾಲೆಯ ಸಹಶಿಕ್ಷಕರು ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಕಾರ್ಯದರ್ಶಿ ಸಿ.ಬಿ.ಪ್ರಕಾಶ್, ಪ್ರೌಢಶಾಲಾ ಸಹಶಿಕ್ಷಕರ ಸಂಘದ ತಾಲ್ಲೂಕು ಕಾರ್ಯದರ್ಶಿ ಎಚ್.ಎಸ್.ರುದ್ರೇಶ್ ಮೂರ್ತಿ, ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಮೆಹಬೂಬ್ ಪಾಷಾ, ಸದಸ್ಯರಾದ ಗೌಸ್ ಫೀರ್, ವೆಂಕಟೇಶ್, ಗ್ರಾಮ ಪಂಚಾಯಿತಿ ಸದಸ್ಯೆ ಪ್ರೇಮಾ, ಸಿಆರ್ ಪಿಗಳಾದ ರಮೇಶ್ ಕುಮಾರ್, ಬೆಳ್ಳೂರಪ್ಪ, ಸರಿತಾ, ಶೀಲಾ, ಶಾಲೆಯ ಶಿಕ್ಷಕರಾದ ನಾಗರತ್ನ, ಲತಾ, ವೆಂಕಟಲಕ್ಷಮ್ಮ, ದಿವಾಕರ್ ಹಾಗೂ ಜಂಗಮಕೋಟೆ ಹೋಬಳಿ ವ್ಯಾಪ್ತಿಯ ಎಲ್ಲ ಪ್ರೌಢಶಾಲಾ ಮುಖ್ಯಶಿಕ್ಷಕರು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು .