Home News ಅಂಗವಿಕಲರು, ಹಿರಿಯ ನಾಗರಿಕರ ಕುಟುಂಬಗಳಿಗೆ ಆಹಾರ ಕಿಟ್‌ಗಳ ವಿತರಣೆ

ಅಂಗವಿಕಲರು, ಹಿರಿಯ ನಾಗರಿಕರ ಕುಟುಂಬಗಳಿಗೆ ಆಹಾರ ಕಿಟ್‌ಗಳ ವಿತರಣೆ

0
Jangamakote Sidlaghatta Specially Abled Elderly people ration kits distribution

ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಶ್ರೀ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಗ್ರಾಮಾಂತರ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಜಿಲ್ಲಾ ನವಜೀವನ ಸೇವಾಸಂಘ, ಮೇಲೂರು ಮಾತೃಮಡಿಲು ದಿವ್ಯಾಂಗ ಸೇವಾಮಂದಿರ, ವಿಜಯಪುರದ ಏಕದಂತ ಗೆಳೆಯರ ಬಳಗದ ವತಿಯಿಂದ ಅಂಗವಿಕಲ ಮಕ್ಕಳ, ಹಿರಿಯ ನಾಗರಿಕರಿರುವ ಕುಟುಂಬಗಳಿಗೆ ಮೊದಲ ಹಂತದ ಆಹಾರ ದಿನಸಿ ಕಿಟ್‌ಗಳನ್ನು ವಿತರಿಸಲಾಯಿತು.

ಜಿಲ್ಲಾ ನವಜೀವನ ಸೇವಾಸಂಘದ ಅಧ್ಯಕ್ಷ ಬೆಳ್ಳೂಟಿ ಮುನಿರಾಜು ಮಾತನಾಡಿ, ಕೊರೊನಾ ತಡೆಯುವಲ್ಲಿ ಸಾರ್ವಜನಿಕರ ಪಾತ್ರವೂ ಮಹತ್ವದ್ದು, ಕೊರೊನಾ ಬಂದಾಗಿನಿಂದ ಜನರಲ್ಲಿ ಅನೇಕ ಮೌಲ್ಯಗಳು ವೃದ್ಧಿಯಾಗಿದೆ. ಹಂಚಿತಿನ್ನುವ, ಕಷ್ಟಕಾಲದಲ್ಲಿ ಒಬ್ಬರಿಗೊಬ್ಬರು ಸಹಕಾರನೀಡುವ ಗುಣ ಬೆಳೆದಿದೆ. ತಾಲ್ಲೂಕಿನ ಎಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಹಂತಹಂತವಾಗಿ ಕಿಟ್‌ಗಳನ್ನು ವಿತರಿಸಲಾಗುವುದು ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಶರಣಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಕೋವಿಡ್ ಎರಡನೇ ಅಲೆಯಲ್ಲಿ ಅನೇಕ ಸಾವು ನೋವು ಸಂಭವಿಸಿದ್ದು ಅಲೆಯ ವೇಗ ಕ್ಷೀಣಿಸಿದ್ದರೂ ಮುಂದಿನ ಒಂದು ವರ್ಷಗಳ ಕಾಲವಾದರೂ ನಿರಂತರವಾಗಿ ಕೊರೊನಾ ನಿಯಮಗಳನ್ನು ಪಾಲಿಸಲೇಬೇಕು. ಗ್ರಾಮಗಳಿಗೆ ಕೊರೋನಾ ಹರಡದಂತೆ ಕಾಯ್ದುಕೊಳ್ಳುವುದೇ ಎಲ್ಲರ ಆದ್ಯತೆಯ ಕರ್ತವ್ಯವಾಗಬೇಕು ಎಂದರು.

ಮೇಲೂರು ಮಾತೃಮಡಿಲು ದಿವ್ಯಾಂಗ ಸೇವಾಮಂದಿರದ ಸಂಚಾಲಕ ಬಿ.ಎಂ.ಜಗದೀಶ್ ಮಾತನಾಡಿ, ವಿವಿಧ ಸಂಘಗಳ ಆಶ್ರಯದಲ್ಲಿ ಕಳೆದ ಒಂದೂವರೆ ವರ್ಷದಿಂದಲೂ ಅನೇಕ ಸೇವಾಕಾರ್ಯಗಳನ್ನು ನಡೆಸಲಾಗುತ್ತಿದೆ. ಇಂತಹ ಕಠಿಣ ಸನ್ನಿವೇಶದಲ್ಲಿ ಜನರು ಇರುವಾಗ ಉಳ್ಳವರು ಬಡವರ ಸಹಾಯಕ್ಕೆ ಬರಬೇಕು ಎಂದರು.

ಭಕ್ತರಹಳ್ಳಿ, ಮಳಮಾಚನಹಳ್ಳಿ, ಜಂಗಮಕೋಟೆ ಗ್ರಾಮಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿನ ಅಂಗವಿಕಲರು ಮತ್ತು ಹಿರಿಯನಾಗರಿಕರ ಕುಟುಂಬಗಳಿಗೆ ದಿನಸಿ ಕಿಟ್‌ಗಳನ್ನು ವಿತರಿಸಲಾಯಿತು.

ನವಜೀವನ ಸೇವಾಸಂಘದ ಕಾರ್ಯದರ್ಶಿ ರವಿಕುಮಾರ್, ನಿರ್ದೇಶಕ ಮಂಜುನಾಥ್, ಗ್ರಾಮಾಂತರ ಟ್ರಸ್ಟ್‌ನ ಪ್ರತಿನಿಧಿ ಅಭಿಷೇಕ್, ಜಂಗಮಕೋಟೆ ಗ್ರಾಮಪಂಚಾಯಿತಿ ಸದಸ್ಯ ನಾಗರಾಜು, ಸೆವೆನ್‌ಹಿಲ್ಸ್ ಸಂಸ್ಥೆಯ ಅಧ್ಯಕ್ಷ ಕೆ.ಎನ್.ವೆಂಕಟಮೂರ್ತಿ, ವಿಆರ್‌ಡಬ್ಲ್ಯೂ ನಾಗೇಶ್, ನಿರಂಜನ್, ಕಾರ್ತೀಕ್, ಚಂದನ್, ಮದನ್‌ಕುಮಾರ್, ದರ್ಶನ್ ಹಾಜರಿದ್ದರು. 

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version