Home News ಶಿಡ್ಲಘಟ್ಟ ಕಸಾಪ ವತಿಯಿಂದ ವಿನೂತನವಾದ ಕಾರ್ಯಕ್ರಮ

ಶಿಡ್ಲಘಟ್ಟ ಕಸಾಪ ವತಿಯಿಂದ ವಿನೂತನವಾದ ಕಾರ್ಯಕ್ರಮ

0

ಮಂಗಳವಾರ ಶಿಡ್ಲಘಟ್ಟ ಕಸಾಪ ವತಿಯಿಂದ ವಿನೂತನವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ನಿವೃತ್ತ ಐಎಎಸ್ ಅಧಿಕಾರಿ ಸುಗಟೂರು ಅಮರನಾರಾಯಣ ಅವರಿಂದ ಗ್ರಾಮಗಳ ಪರಿವೀಕ್ಷಣೆ ಹಾಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಆಯೋಜಿಸಿದ್ದರು.

 ಬೆಳಗ್ಗೆ ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯಿತಿಗೆ ಕಸಾಪ ಸದಸ್ಯರೊಂದಿಗೆ ಭೇಟಿ ನೀಡಿ, ನಲಿಕಲಿ ವಿಭಾಗದಲ್ಲಿನ ಸೇವೆಗಾಗಿ ಪ್ರಶಸ್ತಿ ಪಡೆದಿರುವ ಶಿಕ್ಷಕಿ ತನುಜಾಕ್ಷಿ ಅವರನ್ನು ಸನ್ಮಾಸಿಸಿದ ನಿವೃತ್ತ ಐಎಎಸ್ ಅಧಿಕಾರಿ ಸುಗಟೂರು ಅಮರನಾರಾಯಣ ಅವರು, “ಪ್ರತಿಯೊಬ್ಬರೂ ಹಸಿಕಸ ಒಣಕಸ ಬೇರ್ಪಡಿಸಿ, ಸ್ವಚ್ಛತೆಗೆ ಆದ್ಯತೆ ನೀಡಿದಲ್ಲಿ, ಸ್ವಚ್ಛ ಭಾರತ ಕನಸು ನನಸಾಗಲಿದೆ. ದೇಶದ ಅಭಿವೃದ್ಧಿಗೆ ಗ್ರಾಮ ಹಾಗೂ ಗ್ರಾಮ ಪಂಚಾಯಿತಿಗಳ ಯೋಗದಾನ ಮಹತ್ತರವಾದುದು. ಸ್ವಚ್ಛತೆ ಆರೋಗ್ಯಕ್ಕೆ ಮೂಲ ಸೂತ್ರ. ನೆಲ ಜಲ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ರೈತರು ಪ್ರತಿ ಎಕರೆಗೆ ಇಂಗು ಗುಂಡಿ ಹಾಗೂ ಹಣ್ಣು ನೀಡುವ ಮರಗಿಡಗಳನ್ನು ನೆಟ್ಟಲ್ಲಿ ಈ ಬಯಲು ಸೀಮೆಯ ನದಿ ನಾಲೆ ಇಲ್ಲದ ಈ ಭಾಗಕ್ಕೆ ವರದಾನವಾಗಲಿದೆ” ಎಂದರು.

 ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಎ.ಉಮೇಶ್, ಪಿಡಿಒ ಶಾರದಾ, ಸದಸ್ಯರಾದ ಎಂ.ಕೆ.ರವಿಪ್ರಸಾದ್,ಎಂ.ಜೆ.ಶ್ರೀನಿವಾಸ್, ನಾರಾಯಣಸ್ವಾಮಿ, ಮುಖಂಡರಾದ ಮುನಿಶಾಮಪ್ಪ, ರಾಮಾಂಜಿನಪ್ಪ, ತಿರುಮಳೇಶ್, ರೂಪೇಶ್, ಗಂಗಾದರಪ್ಪ, ಸುಧೀರ್, ಧರ್ಮೇಂದ್ರಕುಮಾರ್ ಹಾಜರಿದ್ದರು.

Kananda Sahitya Parishat Sidlaghatta
ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯಿತಿಯಲ್ಲಿ ನಲಿಕಲಿ ವಿಭಾಗದಲ್ಲಿನ ಸೇವೆಗಾಗಿ ಪ್ರಶಸ್ತಿ ಪಡೆದಿರುವ ಶಿಕ್ಷಕಿ ತನುಜಾಕ್ಷಿ ಅವರನ್ನು ಸನ್ಮಾನಿಸಲಾಯಿತು

 ಸರ್ಕಾರಿ ಶಾಲೆಗೆ ಭೇಟಿ : ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೇಟಿ ಮಕ್ಕಳೊಂದಿಗೆ ಮಾತನಾಡಿ, ಅಲ್ಲಿನ ವರ್ಣರಂಜಿತವಾದ ಶಾಲಾ ಕಟ್ಟಡ, ಆವರಣದಲ್ಲಿನ ಬ್ಯಾಸ್ಕೆಟ್ ಬಾಲ್ ಕೋರ್ಟ್, ಅಂಗನವಾಡಿ ಕಟ್ಟಡಗಳ ಅಂದಚಂದವನ್ನು ಮೆಚ್ಚಿ, ಮಕ್ಕಳೊಂದಿಗೆ ಮಾತನಾಡಿ, ಕನ್ನಡ ಚೆನ್ನಾಗಿ ಕಲಿಯಿರಿ, ಕನ್ನಡಕ್ಕೆ ಆದ್ಯತೆನೀಡಿ, ಹುಟ್ಟಿದ ಹಳ್ಳಿಯನ್ನು ಮರೆಯದಿರಿ ಎಂದರು. ಶಾಲಾ ಆವರಣದಲ್ಲಿ ಮಕ್ಕಳ ಜತೆಗೂಡಿ ಸಸಿ ನೆಟ್ಟರು.

ಆನೂರು ಗ್ರಾಮ ಪಂಚಾಯಿತಿಗೆ ಭೇಟಿ : ಆನೂರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಗ್ರಾಮ ಪಂಚಾಯಿತಿ ಸದಸ್ಯರೊಂದಿಗೆ ಸಂವಾದಿಸಿದರು. ಗ್ರಾಮಾಭಿವೃದ್ಧಿಗೆ ಅವರುಗಳು ಕೈಗೊಂಡ ಯೋಜನೆಗಳ ಬಗ್ಗೆ ಕೇಳಿ ಮಾಹಿತಿ ಪಡೆದು ಸಲಹೆಗಳನ್ನು ನೀಡಿದರು. ಆನೂರು ಗ್ರಾಮದ ವರ್ಣಮಯವಾದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಆವರಣದಲ್ಲಿ ಗಿಡವನ್ನು ನೆಟ್ಟರು.

 ರೈತರೊಂದಿಗೆ ಸಂವಾದ : ಬೋದಗೂರು ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ಹೂಳೆತ್ತಿರುವ ಕೆರೆಯ ಅಂಗಳದಲ್ಲಿ ರೈತರೊಂದಿಗೆ ಅವರು ಸಂವಾದಿಸಿದರು.

 “ನಮ್ಮ ಮುಂದಿನ ಪೀಳಿಗೆಗೆ ನಾವು ನೀರನ್ನು ಉಳಿಸಬೇಕಾದರೆ, ಕುಂಟೆ, ಕಲ್ಯಾಣಿ, ಬಾವಿ ಇವುಗಳಿಗೆಲ್ಲ ನೀರು ಬರಬೇಕಾದಲ್ಲಿ  ಕೆರೆ ಸಂರಕ್ಷಣೆ ಮುಖ್ಯ. ನೀರು ಪವಿತ್ರವಾದುದು. ಅದನ್ನು ನಮ್ಮಿಂದ ತಯಾರು ಮಾಡಲಾಗುವುದಿಲ್ಲ. ಪ್ರಕೃತಿಯಿಂದಲೇ ಅದು ಸಿಗಬೇಕು. ಎಚ್.ಎನ್.ವ್ಯಾಲಿ ನೀರು ಈ ಬಾಗದ ಜಿಲ್ಲೆಯ ಕೆರೆಗಳಿಗೆ ಹರಿಸುತ್ತಿದ್ದು, ಮೂರು ಹಂತದ ಶುದ್ಧೀಕರಿಸಿದ ನೀರು ಬಿಡಬೇಕು. ಇಲ್ಲವಾದಲ್ಲಿ ಮಾರಕ ಕಾಯಿಲೆಗಳಿಗೆ ಬುನಾದಿ” ಎಂದರು.

 “ಐವತ್ತು ವರ್ಷಗಳ ಹಿಂದೆ ಆಸ್ಪತ್ರೆ ತ್ಯಾಜ್ಯ, ಗಾರ್ಮೆಂಟ್ಸ್ ತ್ಯಾಜ್ಯ ಇನ್ನಿತರ ತ್ಯಾಜ್ಯಗಳಿರಲಿಲ್ಲ. ಈಗ ಇವೆಲ್ಲ ಇವೆ. ಈ ಕಾರಣದಿಂದ‌ ಮೂರು ಹಂತದ ಶುದ್ದೀಕರಣದ ನೀರು ಹರಿಸಬೇಕಿದೆ. ಎತ್ತಿನಹೊಳೆ, ಕೃಷ್ಣಾನದಿ ನೀರು, ವೃಷಭಾವತಿ ನೀರು ಮುಂದಿನ ದಿನಗಳಲ್ಲಿ ಬಂದಲ್ಲಿ ಈ ಭಾಗಕ್ಕೆ ಅನುಕೂಲವಾಗುತ್ತದೆ ಎಂದರು.

 ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿ, ಕಸಾಪ ಶಿಡ್ಲಘಟ್ಟ ತಾಲ್ಲೂಕು ಘಟಕದ ವತಿಯಿಂದ “ನಾಡು ನುಡಿ ಸಂಭ್ರಮ 150” ನೇ ಕಾರ್ಯಕ್ರಮದ ಸವಿನೆನಪಿಗಾಗಿ ಎರಡು ದಿನಗಳ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕರ್ನಾಟಕ ರಾಜ್ಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಪರಿಸರ ಪ್ರೇಮಿಯಾದ ನಿವೃತ್ತ ಐ.ಎ.ಎಸ್ ಅಧಿಕಾರಿ ಕೆ.ಅಮರನಾರಾಯಣ ಅವರು ತಮ್ಮ ಅನುಭವದಿಂದ ಮಾರ್ಗದರ್ಶನ ಮಾಡಲು ಬಂದಿದ್ದಾರೆ. ಮೇಲೂರು ಗ್ರಾಮ ಪಂಚಾಯಿತಿ, ಸರ್ಕಾರಿ ಶಾಲೆಗೆ ಭೇಟಿ, ಆನೂರು ಗ್ರಾಮದ ಅಂಗನವಾಡಿಗೆ ಭೇಟಿ, ಗ್ರಾಮ ಪಂಚಾಯತಿ ಕಚೇರಿಯಲ್ಲಿ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯರೊಂದಿಗೆ ” ಸ್ವಚ್ಚತೆ ಮತ್ತು ನೀರಿನ ಸಂರಕ್ಷಣೆ ಕುರಿತು ಸಂವಾದ. ಬೆಳ್ಳೂಟಿ  ಗ್ರಾಮದಲ್ಲಿ ಕಲ್ಯಾಣಿ ವೀಕ್ಷಣೆಮಾಡಿ ಸಸಿ ನೆಟ್ಟು, ಬೊದಗೂರು ಗ್ರಾಮದಲ್ಲಿ ಕೆರೆಯ ಅಂಗಳದಲ್ಲಿ  ಗ್ರಾಮಾಭಿವೃದ್ದಿ ಮತ್ತು ಜಲಸಂಪನ್ಮೂಲಗಳ ರಕ್ಷಣೆ ಕುರಿತು ರೈತರು ಮತ್ತು  ಸಾರ್ವಜನಿಕರೊಂದಿಗೆ ಸಂವಾದ ನಡೆಸಿರುವರು.

 ನಂತರ ಜ್ಞಾನ ಜ್ಯೋತಿ ಶಾಲೆಯಲ್ಲಿ  ಆಯೋಜಿಸಿರುವ ಜಾನಪದ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ವೀಕ್ಷಿಸಿ ಹಿರೇಬಲ್ಲದಲ್ಲಿ ಗ್ರಾಮವಾಸ್ತವ್ಯ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

 ರಾಜ್ಯ ರೈತಸಂಘ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಭೈರೇಗೌಡ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಿಜಯೇಂದ್ರ, ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಜಿಲ್ಲಾ ಯೋಜನಾಧಿಕಾರಿ ಬಿ.ವಸಂತ್, ಪ್ರಕಾಶ್ ಕುಮಾರ್, ಸಂತೋಷ್, ಮಾರಪ್ಪ, ಬೋದಗೂರು ವೆಂಕಟಸ್ವಾಮಿರೆಡ್ಡಿ, ರೈತ ಸಂಘ ತಾಲ್ಲೂಕು ಅಧ್ಯಕ್ಷ ಮಂಜುನಾಥ್, ಹಿತ್ತಲಹಳ್ಳಿ ಗೋಪಾಲಗೌಡ, ಎಚ್.ಕೆ.ಸುರೇಶ್ ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version