ಬಳ್ಳಾರಿ ಜಿಲ್ಲೆಯಲ್ಲಿ ನಡೆದ ಪ್ರಥಮ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಈಗ ನೂರರ ಸಂಭ್ರಮ. ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ಕನ್ನಡ ಸಮ್ಮೇಳನ ಚಾರಿತ್ರಿಕ ಮಹತ್ವದ್ದು ಹಾಗೂ ನಮಗೆಲ್ಲರಿಗೂ ಪ್ರೇರಣಾದಾಯಕವಾದದ್ದು ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ತಿಳಿಸಿದರು.
ತಾಲ್ಲೂಕಿನ ಶಿಲೇಮಾಕನಹಳ್ಳಿಯ ಕಸಾಪ ಕಚೇರಿಯಲ್ಲಿ ಬುಧವಾರ ನಡೆದ “ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ನೂರರ ಸಂಭ್ರಮ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
1920ರಲ್ಲಿ ಹೊಸಪೇಟೆಯಲ್ಲಿ ಸಮ್ಮೇಳನ ನಡೆದಿತ್ತು. ಸ್ವಾತಂತ್ರ್ಯ ಸಿಗುವ ಪೂರ್ವದಲ್ಲಿ ಬಳ್ಳಾರಿ ಜಿಲ್ಲೆ ಮದ್ರಾಸ್ ಪ್ರಾಂತ್ಯಕ್ಕೆ ಒಳಪಟ್ಟಿತ್ತು. ತಮಿಳು ಆಡಳಿತ ಭಾಷೆಯಾಗಿತ್ತು. ಶಾಲೆಗಳಲ್ಲಿ ತೆಲುಗು ಕಲಿಕೆಗೆ ಹೆಚ್ಚಿನ ಬೇಡಿಕೆಯಿತ್ತು. ಕನ್ನಡ ಮನೆಯ ಭಾಷೆಯಾಗಿ ಸೀಮಿತವಾಗಿತ್ತು. ಕನ್ನಡ ಭಾಷೆಯ ಅಸ್ತಿತ್ವ ಉಳಿಸಿಕೊಂಡು, ಅದನ್ನು ಬೆಳೆಸುವ ದೃಷ್ಟಿಯಿಂದ ಸಾಹಿತ್ಯ ಸಮ್ಮೇಳನ ಆ ಕಾಲಕ್ಕೆ ಹೆಚ್ಚಿನ ಮಹತ್ವ ಪಡೆದುಕೊಂಡಿತ್ತು. ಸಮ್ಮೇಳನದ ಮೂಲಕ ಅದರ ಅಸ್ತಿತ್ವ ಉಳಿಸಿಕೊಳ್ಳುವ ದೊಡ್ಡ ಪ್ರಯತ್ನ ನಡೆಯಿತು. ಅದರ ಫಲ ಈಗ ನಮ್ಮ ಮುಂದಿದೆ. ತಮಿಳು, ತೆಲುಗು ಭಾಷೆಗಳನ್ನು ಮೀರಿಸಿ ಈಗ ಕನ್ನಡ ಹೆಚ್ಚು ಚಾಲ್ತಿಯಲ್ಲಿದೆ. ಇದು ನಮಗೂ ಅನ್ವಯವಾಗುತ್ತದೆ. ಗಡಿಭಾಗಗಳಲ್ಲಿ ಕನ್ನಡ ಉಳಿಸುವಲ್ಲಿ ನಮ್ಮ ಹಿರಿಯರು ತೋರಿಸಿರುವ ದಾರಿಯನ್ನು ನಾವುಗಳು ಅನುಸರಿಸಬೇಕಿದೆ ಎಂದರು.
ಕಸಾಪ ಪದಾಧಿಕಾರಿಗಳಾದ ಎಂ.ಮಂಜುನಾಥ್, ಮೋಹನ್, ವೆಂಕಟೇಶ್, ಕೃಷ್ಣ, ಎಲ್.ಎನ್.ಮಂಜುನಾಥ್ ಹಾಜರಿದ್ದರು.