
Sidlaghatta : ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವೇಳೆ ಸಮುದಾಯದ ಪ್ರತಿಯೊಬ್ಬರೂ ಮನೆಗೆ ಭೇಟಿ ನೀಡುವ ಗಣತಿದಾರರಿಗೆ ಜಾತಿ ಕಾಲಂನಲ್ಲಿ ಕೇವಲ “ಮಡಿವಾಳ” ಎಂದಷ್ಟೇ ನಮೂದಿಸಬೇಕು ಎಂದು ಮಡಿವಾಳ ಸಂಘದ ಅಧ್ಯಕ್ಷ ಕೃಷ್ಣಪ್ಪ ಮನವಿ ಮಾಡಿದ್ದಾರೆ.
ಭಾನುವಾರ ನಗರದಲ್ಲಿನ ಮಡಿವಾಳ ಮಾಚಿದೇವ ಯುವಕರ ಸಂಘದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ದಾಖಲಾತಿಗಳಲ್ಲಿ “ಅಗಸ”, “ಧೋಬಿ” ಮುಂತಾದ ಹಲವು ಹೆಸರುಗಳನ್ನು ಬಳಸಲಾಗುತ್ತಿದ್ದರೂ ಇನ್ನು ಮುಂದೆ ಯಾವುದೇ ಗೊಂದಲ ತಪ್ಪಿಸಲು ಕೇವಲ “ಮಡಿವಾಳ” ಎಂದು ಮಾತ್ರ ನಮೂದಿಸುವುದು ಅತ್ಯಾವಶ್ಯಕ ಎಂದು ತಿಳಿಸಿದರು.
ರಾಜ್ಯಾದ್ಯಂತ ನಡೆಯುತ್ತಿರುವ ಸಮೀಕ್ಷೆಯಲ್ಲಿ ಸಮುದಾಯದವರು ಒಂದೇ ಹೆಸರು ಬಳಸಿದರೆ, ಸರ್ಕಾರದಿಂದ ಸಿಗುವ ಸೌಲಭ್ಯಗಳು ಸಮಗ್ರವಾಗಿ ತಲುಪಲು ಸಹಕಾರಿ ಆಗಲಿದೆ ಎಂದು ಹೇಳಿದರು. ಸಮುದಾಯದ ಪ್ರತಿಯೊಬ್ಬರೂ ಗಣತಿದಾರರಿಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಡಿವಾಳ ಮಾಚಿದೇವ ಯುವಕರ ಸಂಘದ ಉಪಾಧ್ಯಕ್ಷ ಹರೀಶ್, ಕಾರ್ಯದರ್ಶಿ ಎಚ್.ಎಂ. ಮುನಿರಾಜು, ನಿಕಟ ಪೂರ್ವ ಅಧ್ಯಕ್ಷ ಕೊರಿಯರ್ ರಾಜು, ಖಜಾಂಚಿ ಎಂ.ದೇವರಾಜು, ನಿರ್ದೇಶಕರಾದ ಎಚ್.ಸಿ. ರಮೇಶ್, ಕೆ.ಶಂಕರಪ್ಪ, ಟ್ರೈಲರ್ ನಾರಾಯಣಸ್ವಾಮಿ, ಕೆ.ಎಂ. ಮುನಿರಾಜು, ಆಂಜಿನಪ್ಪ, ಎಲ್.ಆನಂದ್, ಗಂಗಾಧರ ಮತ್ತು ಚಂದ್ರಪ್ಪ ಹಾಜರಿದ್ದರು.