Home News ಶಾಲೆಗಳ ಅಭಿವೃದ್ಧಿಗೆ ಹಿರಿಯ ವಿದ್ಯಾರ್ಥಿಗಳು, ಜನಪ್ರತಿನಿಧಿಗಳು ಮುಂದಾಗಬೇಕೆಂದು

ಶಾಲೆಗಳ ಅಭಿವೃದ್ಧಿಗೆ ಹಿರಿಯ ವಿದ್ಯಾರ್ಥಿಗಳು, ಜನಪ್ರತಿನಿಧಿಗಳು ಮುಂದಾಗಬೇಕೆಂದು

0
Y Hunasenahalli Government School Judge Visit

Y Hunasenahalli, Sidlaghatta : ತಮ್ಮೂರು, ಗ್ರಾಮಗಳಲ್ಲಿನ ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಲು ಇಲ್ಲಿಯೇ ಓದಿದ ಹಿರಿಯ ವಿದ್ಯಾರ್ಥಿಗಳು, ಆರ್ಥಿಕವಾಗಿ ಸಶಕ್ತವಾಗಿರುವವರು, ಜನಪ್ರತಿನಿಧಿಗಳು ಮುಂದಾಗಬೇಕೆಂದು ಜೆ.ಎಂ.ಎಫ್‌.ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ಗ್ರಾಮಸ್ಥರಲ್ಲಿ ಮನವಿ ಮಾಡಿದರು.

ತಾಲ್ಲೂಕಿನ ವೈ.ಹುಣಸೇನಹಳ್ಳಿಯ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ಶಾಲೆಯ ಗೋಡೆಗಳು, ಮೇಲ್ಚಾವಣಿ ಹಾಗೂ ನೆಲ ಹಾಸು ಹಾಳಾಗಿರುವುದರೊಂದಿಗೆ ಸುಣ್ಣ ಬಣ್ಣ ಕಳೆದುಕೊಂಡ ಗೋಡೆಗಳು ಶಾಲೆಯ ವಾತಾವರಣವನ್ನೇ ಕೆಡಸಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಶಾಲೆಯ ಎಸ್‌.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು, ಪೋಷಕರಲ್ಲದೆ ಸ್ಥಳದಲ್ಲಿದ್ದ ಗ್ರಾಮಸ್ಥರೊಂದಿಗೆ ಶಾಲೆಯ ಸ್ಥಿತಿ ಗತಿ ಬಗ್ಗೆ ಚರ್ಚಿಸಿದರು. ಶಾಲೆಗೆ ಮೂಲ ಸೌಕರ್ಯಗಳನ್ನು ಕಲ್ಪಿಸಿ ಅಭಿವೃದ್ದಿಪಡಿಸಿ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸುವುದು ಸರ್ಕಾರದ ಜವಾಬ್ದಾರಿ. ಹಾಗಂತ ಎಲ್ಲದಕ್ಕೂ ಸರ್ಕಾರದ ಮೇಲೆ ಅವಲಂಬನೆ ಸರಿಯಲ್ಲ. ನಾವು ಏನಾದರೂ ಮಾಡಬಹುದಲ್ಲಾ ಎಂದು ಪ್ರಶ್ನಿಸಿದರು.

ಈ ಶಾಲೆಯಲ್ಲಿ ಓದಿದ ಅನೇಕರು ಸಮಾಜದಲ್ಲಿ ಉನ್ನತ ಸ್ಥಾನ ಮಾನದಲ್ಲಿರುತ್ತೀರಿ. ಸರ್ಕಾರಿ ನೌಕರಿ, ಸ್ವಯಂ ಉದ್ಯೋಗ, ಉದ್ದಿಮೆದಾರರಾಗಿರಬಹುದು ಅಥವಾ ರಾಜಕಾರಣಿ, ಸಮಾಜ ಸೇವಕರೂ ಆಗಿರಬಹುದು. ಎಲ್ಲರೂ ಕೈ ಜೋಡಿಸಿದರೆ ಈ ಶಾಲೆಗೆ ಹೊಸ ರೂಪ ನೀಡಬಹುದಲ್ಲವೇ ಎಂದರು. ಸ್ಥಳದಲ್ಲಿದ್ದ ಕೆಲ ಮುಖಂಡರು ಆಯ್ತು ಸ್ವಾಮಿ ಶಾಸಕರ ಗಮನಕ್ಕೆ ತಂದು ಸರಿಪಡಿಸುತ್ತೇವೆ ಎಂದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು ಬೇಡ ಎಲ್ಲ ಭಾರವನ್ನೂ ಶಾಸಕರ ಮೇಲೆ ಹಾಕುವುದು ಬೇಡ. ಅವರು ಸರ್ಕಾರದಿಂದ ಬರುವ ಸವಲತ್ತುಗಳನ್ನು ಒದಗಿಸಿಕೊಡುತ್ತಾರೆ. ನೀವು ಸ್ಥಳೀಯರು ಒಬ್ಬೊಬ್ಬರು ಒಂದೊಂದು ಜವಾಬ್ದಾರಿ ತಗೊಳ್ಳಿ. ಒಂದೊಂದು ಕೊಠಡಿಗೆ ಸುಣ್ಣ ಬಣ್ಣದ ಜವಾಬ್ದಾರಿ ಒಬ್ಬೊಬ್ಬರು ತಗೊಳ್ಳಿ, ನೆಲ ಹಾಸು ಹಾಕಿಸಲು ಇನ್ನೊಬ್ಬರು ಹೀಗೆ ನಿಮ್ಮ ಕೈಲಾದಷ್ಟು ನೆರವು ನೀಡಿ ಎಂದು ಮನವಿ ಮಾಡಿದರು.

ನಾವು ನೀವೆಲ್ಲರೂ ಇಂತಹ ಸರ್ಕಾರಿ ಶಾಲೆಯಲ್ಲೇ ಅಲ್ಲವಾ ಓದಿ ಬೆಳೆದಿದ್ದು. ನಾವೀಗ ಇರುವ ಸ್ಥಾನ ಅಲಂಕರಿಸಿದ್ದು. ನಮ್ಮ ಶಾಲೆಗಳನ್ನು ನಾವೇ ಅಭಿವೃದ್ದಿಪಡಿಸೋಣ, ದೇವಾಲಯಗಳು, ಜಾತ್ರೆ ಹಬ್ಬ ಹರಿದಿನ ಅಂತ ಸಾಕಷ್ಟು ಖರ್ಚು ಮಾಡುತ್ತೇವೆ ಅಲ್ಲವೇ ? ಅದರಲ್ಲಿ ಒಂದಷ್ಟು ಭಾಗವನ್ನು ನಮ್ಮ ಮಕ್ಕಳು ಓದುತ್ತಿರುವ ಶಾಲೆಗೆ ಹಾಕೋಣ, ಮಕ್ಕಳು ಓದಿ ನಮ್ಮ ನೆರವನ್ನು ಸ್ಮರಿಸುತ್ತಾರೆ. ಓದಿಗೆ ಪೂರಕ ವಾತಾವರಣವನ್ನು ಕಲ್ಪಿಸಿದರೆ ಅದರಿಂದ ಅವರಿಗೆ ಅನುಕೂಲ ಆಗುತ್ತದೆ ಎಂದು ಗ್ರಾಮಸ್ಥರಲ್ಲಿ ಕೋರಿದರು.

ನ್ಯಾಯಾಧೀಶರ ಮಾತಿಗೆ ಓಗೂಟ್ಟ ಗ್ರಾಮಸ್ಥರು ಆಯ್ತು ಎರಡು ತಿಂಗಳು ಸಮಯ ಕೊಡಿ ಸ್ವಾಮಿ ನೀವು ಹೇಳಿದಂತೆ ನಾವೆಲ್ಲರೂ ಕೂತು ಮಾತನಾಡಿ ಈ ಶಾಲೆಗೆ ಸುಣ್ಣ ಬಣ್ಣ ಬಳಿದು ನೆಲ ಹಾಸು ಸರಿಪಡಿಸುವಂತ ಕಾರ್ಯವನ್ನು ಮಾಡುತ್ತೇವೆಂದು ಭರವಸೆ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ, ಸ್ಥಳೀಯ ಮುಖಂಡರಾದ ಬೂಸಾ ನಾರಾಯಣಸ್ವಾಮಿ, ಕದಿರಿನಾಯಕನಹಳ್ಳಿ ರವಿಕುಮಾರ್, ಬಸವನಪರ್ತಿ ವೆಂಕಟೇಶ್, ಬೇಕರಿ ಗೌಡ, ಎಸ್‌.ಡಿ.ಎಂ.ಸಿ ಅಧ್ಯಕ್ಷೆ ಚೈತ್ರ, ಬಿಆರ್‌ಪಿ ಮಂಜುನಾಥ್, ಶಿಕ್ಷಕಿ ಹಂಸವೇಣಿ ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version