Sidlaghatta : ನವದೆಹಲಿಯ ನ್ಯಾಷನಲ್ ಬಾಲಭವನದಲ್ಲಿ ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಅಂಗವಾಗಿ ನಡೆದ “ಉಲ್ಲಾಸ್ ಮೇಳ”ದಲ್ಲಿ ಕರ್ನಾಟಕದ ಸಾಕ್ಷರತಾ ಸಾಧನೆಗಳು ಹಾಗೂ ನವೀನ ಕಲಿಕಾ ಪ್ರಯತ್ನಗಳು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದವು.
In English: A Chikkaballapur district teachers’ team represented Karnataka at the Ullas Mela in New Delhi, where the state’s literacy stall — featuring Sidlaghatta taluk teacher H.S. Rudreshamurthy among the presenters — drew praise from Union Ministry of Education officials for its adult-literacy tools and life-skills approach, with district adult education officer Anjaneya and teacher L.V. Venkatareddy also part of the delegation.
“ಜನತೆಗಾಗಿ, ಭೂಗ್ರಹಕ್ಕಾಗಿ, ಸಮೃದ್ಧಿಗಾಗಿ ಸಾಕ್ಷರತೆ” ಎಂಬ ಧ್ಯೇಯದಡಿ ನಡೆದ ಮೇಳದಲ್ಲಿ ಕರ್ನಾಟಕವನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಕ್ಷಕರ ತಂಡ ಪ್ರತಿನಿಧಿಸಿತು. ದೇಶದ 28 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು, ಎನ್.ಸಿ.ಇ.ಆರ್.ಟಿ, ಎನ್.ಸಿ.ಟಿ.ಇ ಮತ್ತು ಎನ್.ಐ.ಒ.ಎಸ್ ಸಂಸ್ಥೆಗಳು ತಮ್ಮ ಸಾಧನೆಗಳು, ಉತ್ತಮ ಪದ್ಧತಿಗಳು ಹಾಗೂ ಕಲಿಕಾ ಸಾಮಗ್ರಿಗಳನ್ನು ಪ್ರದರ್ಶಿಸಿದವು.
ಕರ್ನಾಟಕದ ಮಳಿಗೆಯಲ್ಲಿ ರಾಜ್ಯದ ಸಾಕ್ಷರತಾ ಪಯಣ, ವಿವಿಧ ಸಾಕ್ಷರತಾ ಅಭಿಯಾನಗಳು, ಯೋಜನೆಗಳ ಅನುಷ್ಠಾನ ಮತ್ತು ಸಾಧನೆಗಳು, ನವಸಾಕ್ಷರರಿಗೆ ಬಳಸುವ ಸರಳ ಹಾಗೂ ಜೀವನಾಧಾರಿತ ಬೋಧನಾ ವಿಧಾನಗಳು, ಕಲಿಕಾ ಸಾಮಗ್ರಿಗಳು ಮತ್ತು ನವಸಾಕ್ಷರ ಸಾಹಿತ್ಯವನ್ನು ಪ್ರದರ್ಶಿಸಲಾಯಿತು.
ಅಕ್ಷರಜ್ಞಾನವನ್ನು ಓದು–ಬರಹಕ್ಕೆ ಸೀಮಿತಗೊಳಿಸದೆ, ಜೀವನ ಕೌಶಲ, ಸಂಖ್ಯಾಜ್ಞಾನ, ಹಣಕಾಸು ವ್ಯವಹಾರ, ಕಾನೂನು ಅರಿವು, ಡಿಜಿಟಲ್ ಜ್ಞಾನ ಹಾಗೂ ನಿರಂತರ ಕಲಿಕೆಯೊಂದಿಗೆ ಜೋಡಿಸುವ ರಾಜ್ಯದ ಪ್ರಯತ್ನಗಳು ಮೇಳದ ಪ್ರಮುಖ ಆಕರ್ಷಣೆಯಾಗಿದ್ದವು.
“ಸಾಕ್ಷರತೆ ಬದುಕಿನ ಶಕ್ತಿ”:
ಮಳಿಗೆಗೆ ಭೇಟಿ ನೀಡಿದ ಕೇಂದ್ರ ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಾರ್ಯದರ್ಶಿ ಟಿ.ಕೆ. ಅನಿಲ್ಕುಮಾರ್ ಅವರು ವಿವಿಧ ವಿಷಯಗಳ ಕುರಿತು ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಶಿಕ್ಷಕ ಎಚ್.ಎಸ್. ರುದ್ರೇಶಮೂರ್ತಿ ಅವರು, “ಸಾಕ್ಷರತೆ ಎಂದರೆ ಕೇವಲ ಅಕ್ಷರಗಳನ್ನು ಗುರುತಿಸುವ ಸಾಮರ್ಥ್ಯವಲ್ಲ. ಬದುಕಿನ ದಾಖಲೆಗಳನ್ನು ಓದಿ ಅರ್ಥಮಾಡಿಕೊಳ್ಳುವುದು, ಮೋಸಕ್ಕೆ ಒಳಗಾಗುವುದನ್ನು ತಡೆಯುವುದು, ಸ್ವತಂತ್ರ ನಿರ್ಧಾರ ಕೈಗೊಳ್ಳುವುದು ಹಾಗೂ ಆತ್ಮವಿಶ್ವಾಸದಿಂದ ಬದುಕುವುದು ಕೂಡ ಸಾಕ್ಷರತೆಯ ಭಾಗ” ಎಂದು ವಿವರಿಸಿದರು.
ಕರ್ನಾಟಕದ ಸಾಕ್ಷರತಾ ಪ್ರಮಾಣವು 2011ರ ಜನಗಣತಿಯ ಪ್ರಕಾರ ಶೇ.75.36ರಷ್ಟಿದ್ದು, ಪಿ.ಎಲ್.ಎಫ್.ಎಸ್ 2023–24ರ ಅಂದಾಜಿನ ಪ್ರಕಾರ ಸುಮಾರು ಶೇ.82.7ಕ್ಕೆ ಏರಿಕೆಯಾಗಿದೆ ಎಂದು ಅವರು ತಿಳಿಸಿದರು.
ನವಸಾಕ್ಷರರನ್ನು ಗುರುತಿಸಿ ಕಲಿಕಾ ಪ್ರಕ್ರಿಯೆಗೆ ಸೇರಿಸುವ ವಿಧಾನ, ಸ್ವಯಂಸೇವಕರ ಪಾತ್ರ, ಶಾಲೆ ಮತ್ತು ಸಮುದಾಯವನ್ನು ಕಲಿಕಾ ಕೇಂದ್ರಗಳಾಗಿ ಬಳಸಿಕೊಳ್ಳುವುದು ಹಾಗೂ ತಂತ್ರಜ್ಞಾನಾಧಾರಿತ ಸಾಕ್ಷರತಾ ಪ್ರಯತ್ನಗಳ ಬಗ್ಗೆಯೂ ಅವರು ಮಾಹಿತಿ ನೀಡಿದರು.
ವಿನೂತನ ಮೌಲ್ಯಮಾಪನ:
ನವಸಾಕ್ಷರರ ಮೌಲ್ಯಮಾಪನ ಮತ್ತು ಪ್ರಮಾಣೀಕರಣ, ಓದು–ಬರಹ–ಸಂಖ್ಯಾಜ್ಞಾನವನ್ನು ದೈನಂದಿನ ಬದುಕಿನೊಂದಿಗೆ ಜೋಡಿಸುವ ವಿಧಾನ ಹಾಗೂ ಕಲಿತ ಜ್ಞಾನವನ್ನು ನಿರಂತರವಾಗಿ ಬಳಸಿಕೊಳ್ಳುವ ಕ್ರಮಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಲಾಯಿತು. ಎಫ್.ಎಲ್.ಎನ್.ಎ.ಟಿ ಮೂಲಕ ಮೂಲಸಾಕ್ಷರತೆ ಮತ್ತು ಸಂಖ್ಯಾಜ್ಞಾನವನ್ನು ಪರೀಕ್ಷಿಸಿ ಕಲಿಕಾರ್ಥಿಗಳ ಓದು, ಬರಹ ಹಾಗೂ ಸಂಖ್ಯಾಜ್ಞಾನವನ್ನು ಮೌಲ್ಯಮಾಪನ ಮಾಡಿ ಪ್ರಮಾಣೀಕರಿಸುವ ವ್ಯವಸ್ಥೆ, ಸರಳ ಭಾಷೆಯ ಕಲಿಕಾ ಸಾಹಿತ್ಯ, ಜೀವನ ಕೌಶಲಾಧಾರಿತ ಚಟುವಟಿಕೆಗಳು ಮತ್ತು ಮುಂದುವರಿದ ಕಲಿಕೆಯ ಅವಕಾಶಗಳನ್ನೂ ಪ್ರದರ್ಶಿಸಲಾಯಿತು.
ಚಿಕ್ಕಬಳ್ಳಾಪುರ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಆಂಜನೇಯ ಮಾತನಾಡಿ, ಜಿಲ್ಲೆಯಲ್ಲಿ ಸಾಕ್ಷರತಾ ಕಾರ್ಯಕ್ರಮಗಳನ್ನು ಜನಸಹಭಾಗಿತ್ವದೊಂದಿಗೆ ಅನುಷ್ಠಾನಗೊಳಿಸಲಾಗುತ್ತಿದೆ. ನವಸಾಕ್ಷರರನ್ನು ಸಾಕ್ಷರರನ್ನಾಗಿಸುವುದರ ಜತೆಗೆ ಅವರು ನಿರಂತರವಾಗಿ ಓದು–ಬರಹದೊಂದಿಗೆ ಸಂಪರ್ಕದಲ್ಲಿರುವಂತೆ ಮಾಡುವುದು, ಮಹಿಳೆಯರು ಮತ್ತು ವಂಚಿತ ಸಮುದಾಯಗಳಿಗೆ ಪ್ರೋತ್ಸಾಹ ನೀಡುವುದು ಹಾಗೂ ಸ್ವಯಂಸೇವಕರ ಸಹಕಾರ ಪಡೆಯುವುದು ಪ್ರಮುಖ ಆದ್ಯತೆಗಳಾಗಿವೆ ಎಂದರು.
ಶಿಕ್ಷಕ ಎಲ್.ವಿ. ವೆಂಕಟರೆಡ್ಡಿ ಮಾತನಾಡಿ, ಗ್ರಾಮೀಣ ಮಹಿಳೆಯರು, ಕಾರ್ಮಿಕರು, ವಂಚಿತರು ಹಾಗೂ ಶಿಕ್ಷಣದಿಂದ ದೂರ ಉಳಿದ ವಯಸ್ಕರನ್ನು ಕಲಿಕೆಯ ಮುಖ್ಯವಾಹಿನಿಗೆ ತರುವ ಪ್ರಯತ್ನಗಳು ನವಸಾಕ್ಷರರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿವೆ ಎಂದರು.
ಕರ್ನಾಟಕ ಮುಂದಿನ ವರ್ಷ ಶೇ.95ಕ್ಕಿಂತ ಹೆಚ್ಚು ಸಾಕ್ಷರತೆ ಸಾಧಿಸಿ ಸಂಪೂರ್ಣ ಸಾಕ್ಷರ ರಾಜ್ಯವಾಗುವ ಗುರಿಯೊಂದಿಗೆ ಶ್ರಮಿಸಬೇಕು ಎಂದು ಟಿ.ಕೆ. ಅನಿಲ್ಕುಮಾರ್ ಹೇಳಿದರು. ಶಿಕ್ಷಣ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಅರ್ಚನಾ ಶರ್ಮಾ ಅವಸ್ಥಿ, ಎನ್.ಸಿ.ಇ.ಆರ್.ಟಿ ನಿರ್ದೇಶಕ ಪ್ರೊ. ದಿನೇಶ್ ಪ್ರಸಾದ್ ಸಕ್ಲಾನಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ನಿರ್ದೇಶಕಿ ಶಾಲಿನಿ ಅಗ್ನಿಹೋತ್ರಿ ಸೇರಿದಂತೆ ಹಲವು ಅಧಿಕಾರಿಗಳು ಕರ್ನಾಟಕದ ಮಳಿಗೆಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯಲ್ಲಿ ಭಾಗಿ:
ಇದಕ್ಕೂ ಮುನ್ನ ಡಾ. ಬಿ.ಆರ್. ಅಂಬೇಡ್ಕರ್ ಅಂತರರಾಷ್ಟ್ರೀಯ ಕೇಂದ್ರದಲ್ಲಿ ನಡೆದ ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮದಲ್ಲಿಯೂ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಕ್ಷಕರ ತಂಡ ಪಾಲ್ಗೊಂಡಿತು.
ಕಾರ್ಯಕ್ರಮದಲ್ಲಿ ಕೇಂದ್ರ ಶಿಕ್ಷಣ, ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವ ಜಯಂತ್ ಚೌಧರಿ, ಟಿ.ಕೆ. ಅನಿಲ್ಕುಮಾರ್, ಅರ್ಚನಾ ಶರ್ಮಾ ಅವಸ್ಥಿ ಸೇರಿದಂತೆ ವಿವಿಧ ರಾಜ್ಯಗಳ ಶಿಕ್ಷಣ ಸಚಿವರು, ಅಧಿಕಾರಿಗಳು, ಸ್ವಯಂಸೇವಕ ಪ್ರೇರಕ ಶಿಕ್ಷಕರು ಹಾಗೂ ನವಸಾಕ್ಷರರು ಭಾಗವಹಿಸಿದ್ದರು.

