Home News ಕೆಚ್ಚೆದೆಯ ಕನ್ನಡತಿ ಅಕ್ಕ ಅನು ತಂಡದಿಂದ ಸ್ವಚ್ಛತೆ ಕಾರ್ಯಕ್ರಮ

ಕೆಚ್ಚೆದೆಯ ಕನ್ನಡತಿ ಅಕ್ಕ ಅನು ತಂಡದಿಂದ ಸ್ವಚ್ಛತೆ ಕಾರ್ಯಕ್ರಮ

0

ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಶಾಲೆಯ ಆವರಣವನ್ನು ಗುರುವಾರ ತಮ್ಮ “ಕೆಚ್ಚೆದೆಯ ಕನ್ನಡಿಗರು” ತಂಡದೊಂದಿಗೆ ಸ್ವಚ್ಛಗೊಳಿಸಿ, ಶಾಲೆಯ ಗೇಟ್ ಹಾಗೂ ಗ್ಯಾಲರಿಗೆ ಬಣ್ಣ ಬಳಿದು ಕೆಚ್ಚೆದೆಯ ಕನ್ನಡತಿ ಅಕ್ಕ ಅನು ಮಾತನಾಡಿದರು.

ಸರ್ಕಾರಿ ಕನ್ನಡ ಶಾಲೆಗಳು ಪ್ರಸ್ತುತ ದಿನಗಳಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿವೆ. ಈ ಕುರಿತು ಜನರಲ್ಲಿ ಅರಿವು ಮೂಡಿಸಿದರೆ ಕನ್ನಡ ಶಾಲೆಗಳು ಮತ್ತೆ ಮುಖ್ಯವಾಹಿನಿಗೆ ಬರುತ್ತವೆ. ಸರ್ಕಾರಿ ಕನ್ನಡ ಶಾಲೆಗಳಿಗೆ ದಾಖಲಾಗುವವರಲ್ಲಿ ಅತಿ ಹೆಚ್ಚಿನವರು ಬಡವರಾಗಿದ್ದರಿಂದ ಅವರಿಗೆ ಶಿಕ್ಷಣದ ಹಕ್ಕು ಕೊಡಿಸುವುದರ ಜತೆಗೆ ಕನ್ನಡ ಭಾಷೆ ಉಳಿಯಬೇಕು ಮತ್ತು ಬೆಳೆಯಬೇಕೆಂಬ ಮಹಾದಾಸೆಯಿಂದ “ಸರ್ಕಾರಿ ಶಾಲೆ ಉಳಿಸಿ” ಆಂದೋಲನ ನಡೆಸುತ್ತಿದ್ದೇವೆ ಎಂದು ಅವರು ತಿಳಿಸಿದರು.

ಕಳೆದ ಮೂರು ವರ್ಷಗಳಿಂದ ರಾಜ್ಯದಾದ್ಯಂತ ನಾವುಗಳು “ಸರ್ಕಾರಿ ಶಾಲೆ ಉಳಿಸಿ, ಸ್ವಚ್ಛತೆಯನ್ನು ಕಾಪಾಡಿ” ಎಂಬ ಅಭಿಯಾನದೊಂದಿಗೆ ಹಲವರು ಸರ್ಕಾರಿ ಶಾಲೆಗಳಿಗೆ ತೆರಳಿ ಬಣ್ಣ ಬಳಿದು, ಸ್ವಚ್ಛತೆಯನ್ನು ಮಾಡಿ ಬಂದಿದ್ದೇವೆ. ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಸರ್ಕಾರಿ ಶಾಲೆ ಸುಂದರವಾದ ಪರಿಸರ ಹೊಂದಿದೆ. ಉತ್ತಮ ಶಿಕ್ಷಕವೃಂದ ಹಾಗೂ ಒಳ್ಳೆಯ ಸಮಾಜದ ಕಳಕಳಿಯುಳ್ಳ ವ್ಯಕ್ತಿಗಳು ಕೂಡ ಇಲ್ಲಿ ಇದ್ದಾರೆ. ಇಲ್ಲಿನ ಗ್ರಾಮಸ್ಥರು ಈ ಊರನ್ನು ಮಾದರಿ ಗ್ರಾಮ ಹಾಗೂ ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಲು ಪಣತೊಟ್ಟಿದ್ದಾರೆ. ಇವರೊಂದಿಗೆ ನಾವು ಕೂಡ ಕೈಜೋಡಿಸುತ್ತ ಇರೋದು ಒಂದು ಖುಷಿಯ ವಿಚಾರ ಕೂಡ ಹೌದು ಎಂದು ಹೇಳಿದರು.

ಕರ್ನಾಟಕ ಜಾನಪದ ಪರಿಷತ್ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿ, ಅನು ಅವರು ಮೂಲತಃ ರಾಯಚೂರಿನ ಸಿಂದನೂರಿನ ಚಿಕ್ಕ ಬೇರಗಿ ಗ್ರಾಮದವರು. ಇವರು ಕೇವಲ ಯುವತಿ ಮಾತ್ರ ಅಲ್ಲ ಕೆಚ್ಚೆದೆಯ ಕನ್ನಡತಿಯು ಹೌದು.  ಇವರು ತಮ್ಮನ್ನು ಸಮಾಜಮುಖೀ ಕಾರ್ಯದಲ್ಲಿ ತೊಡಗಿಸಿಕೊಂಡ ನಂತರ ಜನರು ಇವರನ್ನು ಅಕ್ಕ ಎಂದು ಗೌರವದಿಂದ ಕರೆದರು. ಇವರ ಭಾಗದಲ್ಲಿ ಹೆಣ್ಣುಮಕ್ಕಳಿಗೆ ಬೇಗ ಮದುವೆ ಮಾಡುತ್ತಾರೆ ಅದರಲ್ಲಿ ಹೆಣ್ಣುಮಕ್ಕಳು ಸಮಾಜಸೇವೆ ಸೇವೆಗೆಂದು ಹೊರಗೆ ಬರುವುದು ತುಂಬಾ ಅಪರೂಪ. ಆದರೆ ಇವರು ಅದರಿಂದ ಹೊರಬಂದು ತಮ್ಮನ್ನು ಸಮಾಜಮುಖೀ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಮುಖ್ಯ ಉದ್ದೇಶ ಕನ್ನಡ ಶಾಲೆಗಳನ್ನು ಅಭಿವೃದ್ಧಿಗೊಳಿಸುವುದು. ಕನ್ನಡ ನಾಡು-ನುಡಿ ಉಳಿಯಬೇಕೆಂದರೆ ಮೊದಲು ಕನ್ನಡ ಶಾಲೆಗಳು ಉಳಿಯಬೇಕು ಎಂಬುದು ಇವರ ಅಭಿಪ್ರಾಯ. ಇವರು ಇದುವರೆಗೂ ಸುಮಾರು ಐವತ್ತು ಶಾಲೆಗಳಿಗೆ ಹೊಸರೂಪವನ್ನು ನೀಡಿದ್ದಾರೆ. ಇದರ ಜೊತೆಗೆ ಸ್ವಚ್ಛ ಭಾರತ ಅಭಿಯಾನದಡಿ ಹಳ್ಳಿಗಳಲ್ಲಿ ಕೂಡ ಸ್ವಚ್ಛತೆಯ ಬಗ್ಗೆ ಜಾಗೃತಿಯನ್ನು ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಎಲ್ಲ ಕಡೆಗಳಲ್ಲಿ ಕನ್ನಡ ಬೆಳಗಬೇಕು ಹಿಂದುಳಿದ ಪ್ರದೇಶಗಳಲ್ಲಿ ಇರುವವರಿಗೆ ಉದ್ಯೋಗ ಸಿಗಬೇಕು ಎಂಬುದು ಅವರ ಆಸೆ. ರಾಜಕೀಯವಾಗಿ ಪ್ರೇರಿತವಾಗದೆ ತಮ್ಮ ತಂಡವನ್ನು ಕಟ್ಟಿಕೊಂಡು ಕೆಲಸವನ್ನು ಮಾಡುತ್ತಿದ್ದಾರೆ. ಈ ರೀತಿಯಾಗಿ ಸಮಾಜಮುಖೀ ಕಾರ್ಯದಲ್ಲಿ ತೊಡಗಿಕೊಂಡಿರುವ ಅನು ಅವರ ಕನಸುಗಳು ನನಸಾಗಲಿ ಕನ್ನಡ ಬೆಳೆಸುವ ಅವರ ಗುರಿ ಯಶಸ್ವಿಯಾಗಲಿ ಎಂದು ಹೇಳಿದರು.

 ಕೆಚ್ಚೆದೆಯ ಕನ್ನಡತಿ ಅಕ್ಕ ಅನು ಅವರ ತಂಡದ ರಾಘವೇಂದ್ರ, ಗಣೇಶ್ ಯಲ್ಲಾಪುರ್, ನಾಗರಾಜ್, ಮಲ್ಲಿಕಾರ್ಜುನ್ ಯಲ್ಲಾಪುರ್, ದೊಡ್ಡಪ್ಪಗೌಡ ಸುರೇಶ್, ಪ್ರಕೃತಿ, ವಿಶ್ವನಾಥ, ಶರತ್, ಗ್ರಾಮದ ಎ.ಎಂ.ತ್ಯಾಗರಾಜ್, ಶಾಲಾ ಶಿಕ್ಷಕರು ಹಾಜರಿದ್ದರು. 

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version