
Sidlaghatta : ಶಿಡ್ಲಘಟ್ಟ ನಗರದ ಫಿಲೇಚರ್ ಬಡಾವಣೆಯ ವಾಸಿ ಖಲೀಲ್ ಉಲ್ಲಾ ಮತ್ತು ತೌಹೀದಾ ಆಫ್ರೀನ್ ದಂಪತಿ ಪುತ್ರಿ ಖನ್ಸಾ ಫಾತೀಮಾ ಬಿ ಫಾರ್ಮಸಿಯ ಮೂರನೇ ವರ್ಷದಲ್ಲಿ ಪ್ರಥಮ ರ್ಯಾಂಕ್ ಗಳಿಸಿ ರಾಜ್ಯಕ್ಕೆ ಪ್ರಥಮಳಾಗಿದ್ದಾಳೆ. ಚಿನ್ನದ ಪದಕ ಕೊರಳಿಗೆ ಬಿದ್ದಿದೆ. ಯಲಹಂಕದ ನಿಟ್ಟೆ ಕಾಲೇಜ್ ಆಫ್ ಫಾರ್ಮಸಿಟಿಕಲ್ ಸೈನ್ಸ್ ಕಾಲೇಜಿನಲ್ಲಿ ಖನ್ಸಾ ಫಾತೀಮಾ ಬಿ ಫಾರ್ಮ ವಿದ್ಯಾರ್ಥಿನಿಯಾಗಿದ್ದಾಳೆ.
ಬೆಂಗಳೂರಿನ ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ರಾಜೀವ್‌ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್‌ನ 26 ನೇ ವಾರ್ಷಿಕ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಎಂ.ಕೆ ರಮೇಶ್, ರಾಷ್ಟ್ರೀಯ ವೈದ್ಯಕೀಯ ಆಯೋಗದ ಡಾ.ಬಿ.ಎಂ.ಗಂಗಾಧರ್ ಉಪಸ್ಥಿತಿಯಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾಳೆ.