Kundalagurki, sidlaghatta : ಈ ಜಗತ್ತಿನಲ್ಲಿ ಜಾತಿ ಧರ್ಮ ಭಾಷೆ ಗಡಿಯ ತಾರತಮ್ಯ ಇಲ್ಲದೆ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಕ್ರೀಡೆಗೆ ಮಾತ್ರ ಇದೆ. ಕ್ರೀಡೆಗಳು ನಮ್ಮೆಲ್ಲರ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಕೆಪಿಸಿಸಿ ಸಂಯೋಜಕ ಬಿ.ವಿ.ರಾಜೀವ್‌ಗೌಡ ತಿಳಿಸಿದರು.
ತಾಲ್ಲೂಕಿನ ಕುಂದಲಗುರ್ಕಿ ಗ್ರಾಮದಲ್ಲಿ ಎಬಿಡಿ ಟ್ರಸ್ಟ್ ಹಾಗೂ ಕುಂದಲಗುರ್ಕಿ ಕ್ರಿಕೆಟ್ ಬಾಯ್ಸ್ ನ ಆಶ್ರಯದಲ್ಲಿ ಹಮ್ಮಿಕೊಂಡಿದ್ದ “ರಾಜೀವ್‌ಗೌಡ ಟೆನ್ನೀಸ್ ಬಾಲ್ ಕ್ರಿಕೆಟ್ ಟೂರ್ನಿಮೆಂಟ್” ತಾಲ್ಲೂಕು ಮಟ್ಟದ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಯಾವುದೇ ಕ್ಷೇತ್ರದಲ್ಲಾಗಲಿ ಯಶಸ್ಸು ಎಂಬುದು ಯಾರಿಗೂ ಕೂಡ ಸುಲಭವಾಗಿ ಸಿಗುವುದಿಲ್ಲ. ಸತತ ಪರಿಶ್ರಮ, ಗುರಿ ಮುಟ್ಟುವ ಛಲ, ಚಂಚಲತೆಯ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವ ಶಕ್ತಿ ಇದ್ದಾಗ ಮಾತ್ರ ಬದುಕಿನಲ್ಲಿ ಅಂದುಕೊಂಡಿದ್ದೆಲ್ಲವನ್ನೂ ಸಾಧಿಸಬಹುದು.
ಯುವಜನತೆಯು ತಮಗಿಷ್ಟವಾದ ಕ್ಷೇತ್ರದಲ್ಲಿ ಸಾಧನೆ ಮಾಡಲು, ಸಮಾಜ ಮುಖಿ ಬದುಕು ನಡೆಸಲು ಸಾಕಷ್ಟು ಅವಕಾಶಗಳು ಇವೆ. ಸರ್ಕಾರ ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದು ಅವುಗಳನ್ನು ಸದುಪಯೋಗಪಡಿಸಿಕೊಂಡು ಬದುಕಿನ ಗುರಿ ಮುಟ್ಟಿ ಎಂದು ಹೇಳಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಾಮಾನ್ಯವಾಗಿ ಇಂಗ್ಲೀಷ್, ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ಸ್ವಲ್ಪ ಹಿಂದೆ ಬಿದ್ದಿದ್ದು ಅವರಲ್ಲಿ ಹಿಂಜರಿಕೆಯ ಸ್ವಭಾವವು ಅವರು ಅವಕಾಶಗಳನ್ನು ಕೈ ಬಿಡುವಂತಾಗುತ್ತಿವೆ. ಇದನ್ನು ಅರಿತು ನಮ್ಮ ಎಬಿಡಿ ಟ್ರಸ್ಟ್ ನಿಂದಲೂ ಐಎಎಸ್, ಕೆಎಎಸ್, ಬ್ಯಾಂಕಿಂಗ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಉಚಿತವಾಗಿ ಹಮ್ಮಿಕೊಂಡಿದೆ. ಈ ಉಚಿತ ಕೋಚಿಂಗ್ ಕೇಂದ್ರದಲ್ಲಿ ನೂರಾರು ವಿದ್ಯಾರ್ಥಿಗಳು ಉಚಿತ ಸ್ಪರ್ಧಾತ್ಮಕ ತರಬೇತಿ ಪಡೆಯುತ್ತಿರುವುದು ನನಗೆ ಖುಷಿ ತಂದಿದೆ. ಅದರಲ್ಲಿ ಒಂದಿಬ್ಬರಾದರೂ ಉನ್ನತ ಸ್ಥಾನ ಗಳಿಸಿದರೂ ನಮ್ಮೆಲ್ಲ ಪ್ರಯತ್ನ ಸಾರ್ಥಕವಾಗಲಿದೆ ಎಂದು ಆಶಿಸಿದರು.
ವಿವಿಧ ಕಡೆಯಿಂದ ಆಗಮಿಸಿದ್ದ 30ಕ್ಕೂ ಹೆಚ್ಚು ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು. ಪ್ರಥಮ ಸ್ಥಾನ ಪಡೆದ ಉಲಪನಹಳ್ಳಿ ತಂಡಕ್ಕೆ 40 ಸಾವಿರ ರೂ.ನಗದು, ಟ್ರೋಫಿ, ದ್ವಿತೀಯ ಸ್ಥಾನ ಪಡೆದ ಕುಂದಲಗುರ್ಕಿ ಕ್ರಿಕೆಟ್ ತಂಡಕ್ಕೆ 30 ಸಾವಿರ ರೂ.ನಗದು, ಟ್ರೋಫಿ ಹಾಗೂ ತೃತೀಯ ಸ್ಥಾನ ಪಡೆದ ಆದಿಗೆರೆ ತಂಡಕ್ಕೆ 10 ಸಾವಿರ ನಗದು ಮತ್ತು ಟ್ರೋಫಿಯನ್ನು ನೀಡಲಾಯಿತು.
ಗ್ರಾಮದ ಹಿರಿಯ ಮುಖಂಡರಾದ ಕೆ.ಎಂ.ವೆಂಕಟೇಶಪ್ಪ, ಕುಂದಲಗುರ್ಕಿ ಮುನಿಂದ್ರ, ವೆಂಕಟೇಶ್, ಕೃಷ್ಣಾರೆಡ್ಡಿ ಸೇರಿದಂತೆ ಸ್ಥಳೀಯ ಪಂಚಾಯಿತಿ ಸದಸ್ಯರು, ಕ್ರಿಕೆಟ್ ಪ್ರೇಮಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.