Varadanayakanahalli, Sidlaghatta : ರಾಜ್ಯದ ಕಂದಾಯ ಇಲಾಖೆಯು “ಲ್ಯಾಂಡ್ ಬೀಟ್” ಎನ್ನುವ ನೂತನ ಯೋಜನೆಯನ್ನು ಜಾರಿ ಮಾಡಿದ್ದು ಸರ್ಕಾರಿ ಜಮೀನಿನ ಒತ್ತುವರಿ ತೆರವು ಮಾಡಿ ಅದರ ಭಾವಚಿತ್ರ ಮತ್ತು ಇನ್ನಿತರೆ ವಿವರಗಳನ್ನು ಲ್ಯಾಂಡ್ ಬೀಟ್ ಆಪ್ ನಲ್ಲೇ ಅಪ್‌ಲೋಡ್ ಮಾಡಲಾಗುತ್ತದೆ ಎಂದು ತಹಶೀಲ್ಧಾರ್ ಬಿ.ಎನ್.ಸ್ವಾಮಿ ತಿಳಿಸಿದರು.
ಕಂದಾಯ ಇಲಾಖೆಯಿಂದ ನೂತನವಾಗಿ ಬಿಡುಗಡೆ ಮಾಡಿದ ಲ್ಯಾಂಡ್ ಬೀಟ್ ಆಪ್ ಕಾರ್ಯವೈಖರಿ, ಅವುಗಳಲ್ಲಿ ಸಂಬಂಧಿಸಿದ ದಾಖಲೆಗಳನ್ನು ಅಪ್‌ಲೋಡ್ ಮಾಡುವ ಬಗ್ಗೆ ಶನಿವಾರ ಗ್ರಾಮ ಆಡಳಿತಾಧಿಕಾರಿಗಳಿಗೆ ಹಮ್ಮಿಕೊಂಡಿದ್ದ ತರಬೇತಿಯಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನ ವರದನಾಯಕನಹಳ್ಳಿ ಗ್ರಾಮದ ಹೊರವಲಯದಲ್ಲಿ ಪ್ರಾಯೋಗಿಕವಾಗಿ ಲ್ಯಾಂಡ್ ಬೀಟ್ ಆಪ್ ಮೂಲಕ ಜಮೀನೊಂದರ ಸರ್ವೆ ಮಾಡಿ ಒತ್ತುವರಿಯನ್ನು ಗುರ್ತಿಸುವ ಮೂಲಕ ಲ್ಯಾಂಡ್ ಬೀಟ್ ಆಪ್ ನ ಕಾರ್ಯವೈಖರಿ ಬಗ್ಗೆ ಗ್ರಾಮ ಆಡಳಿತಾಧಿಕಾರಿಗಳಿಗೆ ತರಬೇತಿ ನೀಡಲಾಯಿತು.
ಲ್ಯಾಂಡ್ ಬೀಟ್ ಆಪ್ ನಲ್ಲಿ ಆಯಾ ಕಂದಾಯ ವೃತ್ತದ ಜಮೀನುಗಳ ನಕ್ಷೆಯನ್ನು ಅಪ್ ಲೋಡ್ ಮಾಡಿದ್ದು ಸಂಬಂಧಿಸಿದ ಕಂದಾಯ ವೃತ್ತ ಗ್ರಾಮ ಆಡಳಿತಾಧಿಕಾರಿಗಳು ಸದರಿ ಜಮೀನಿನಲ್ಲಿ ನಿಂತು ಜಮೀನಿನ ಬದುಗಳಲ್ಲಿ ಓಡಾಡಿ ಚಕ್ಕು ಬಂದಿಯನ್ನು ಗುರ್ತಿಸಬಹುದು.
ಆಗ ಒತ್ತುವರಿ ಆಗಿದ್ದಲ್ಲಿ ಅಲ್ಲಿ ತಿಳಿದು ಬರುತ್ತದೆ. ಸದರಿ ಒತ್ತುವರಿದಾರರಿಗೆ ಆ ಮಾಹಿತಿ ಕೊಟ್ಟು ಒತ್ತುವರಿ ತೆರವಿಗೆ ಒಂದಷ್ಟು ಕಾಲಾವಕಾಶ ಕೊಟ್ಟು ಒತ್ತುವರಿ ತೆರವು ಆದ ಮೇಲೆ ಫೋಟೋ ತೆಗೆದು ಅಪ್ ಲೋಡ್ ಮಾಡಬೇಕಾಗುತ್ತದೆ ಎಂದರು.
ಇದರಿಂದ ಸರ್ವೇಯರ್ ಗಳನ್ನು ಕರೆಸಿ ಅಳತೆ ಮಾಡಿಸುವ ತಾಪತ್ರಯ ಇಲ್ಲದೆ ಸಮಯದ ವ್ಯರ್ಥವೂ ಇಲ್ಲವಾಗುತ್ತದೆ ಎಂದು ಲ್ಯಾಂಡ್ ಬೀಟ್ ನ ಕಾರ್ಯವೈಖರಿ ಬಗ್ಗೆ ವಿವರಿಸಿದರು.
ಹಾಗೆಯೆ ಪಹಣಿಗಳಲ್ಲಿ ಸಂಬಂಧಿಸಿದ ರೈತರ ಆಧಾರ್ ನಂಬರ್, ಮೊಬೈಲ್ ನಂಬರ್ ಮತ್ತು ಭಾವಚಿತ್ರವನ್ನು ಅಪ್ ಲೋಡ್ ಮಾಡುವ ಕೆಲಸವೂ ಆಗಲಿದ್ದು ಅದಕ್ಕಾಗಿ ಅಗತ್ಯ ಮಾಹಿತಿಯನ್ನು ಸಂಗ್ರಹಿಸುವ ಕಾರ್ಯವನ್ನು ಎಲ್ಲ ಕಂದಾಯ ವೃತ್ತಗಳಲ್ಲೂ ಇಂದಿನಿಂದ ಆರಂಭಿಸಲಾಗುವುದು ಎಂದರು.
ಎಲ್ಲ ದತ್ತಾಂಶಗಳ ಸಂಗ್ರಹಿಸಿದ ನಂತರ ಪಹಣಿಯಲ್ಲಿ ಆಧಾರ್ ಗೆ ಲಿಂಕ್ ಕೊಡಲಾಗುವುದು, ಭಾವಚಿತ್ರವನ್ನು ಮುದ್ರಿಸಲಾಗುವುದು, ಮೊಬೈಲ್ ನಂಬರ್‌ಗೆ ಲಿಂಕ್ ಕೊಡುವ ಕೆಲಸಕ್ಕೆ ಸಾಕಷ್ಟು ಸಮಯ ತೆಗೆದುಕೊಳ್ಳಲಿದ್ದು ಮುಂದಿನ ದಿನಗಳಲ್ಲಿ ಇವೆಲ್ಲವೂ ಆಗಲಿದೆ ಎಂದು ತಿಳಿಸಿದರು.
ಹಾಗೆಯೆ ದರಕಾಸ್ತು ಜಮೀನು ಮಂಜೂರು ಆಗಿದ್ದಲ್ಲಿ ಸ್ಥಳಕ್ಕೆ ತೆರಳಿ ಸದರಿ ಜಮೀನಿನ ನಕ್ಷೆ ತಯಾರಿಸಿ, ಮಂಜೂರಾತಿ ಮಾಡಿಸಿಕೊಂಡ ರೈತರ ಭಾವಚಿತ್ರ, ವಿಡಿಯೋ ಹೇಳಿಕೆಯನ್ನು ದಾಖಲಿಸುವ ಕೆಲಸವೂ ಮುಂದಿನ ದಿನಗಳಲ್ಲಿ ಆಗಲಿದೆ ಎಂದು ವಿವರಿಸಿದರು.
ಭೂಮಿ ವಿಭಾಗದ ಜಿಲ್ಲಾ ತಾಂತ್ರಿಕ ಸಂಯೋಜಕ ಮಧು ಅವರು ಲ್ಯಾಂಡ್ ಬೀಟ್ ಆಪ್ ಕಾರ್ಯವೈಖರಿ ಬಗ್ಗೆ ತರಬೇತಿ ನೀಡಿದರು. ವರದನಾಯಕನಹಳ್ಳಿಯ ಸರ್ಕಾರಿ ಗುಂಡು ತೋಪಿನ ಸರ್ವೆಯನ್ನು ಲ್ಯಾಂಡ್ ಬೀಟ್ ಆಪ್ ಮೂಲಕವೇ ಮಾಡಲಾಯಿತು. ತಾಲ್ಲೂಕಿನ 28 ಕಂದಾಯ ವೃತ್ತಗಳ ಗ್ರಾಮ ಆಡಳಿತಾಧಿಕಾರಿಗಳು, ಕಂದಾಯ ಅಧಿಕಾರಿಗಳು ಭಾಗವಹಿಸಿದ್ದರು.