Malamachanahalli, Sidlaghatta, Chikkaballapur : ಶಿಡ್ಲಘಟ್ಟ ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮದಲ್ಲಿ ದಾಸಶ್ರೇಷ್ಠ ಶ್ರೀ ಕನಕದಾಸರ 538ನೇ ಜಯಂತಿಯನ್ನು ಅದ್ದೂರಿಯಾಗಿ, ಗ್ರಾಮಸ್ಥರೆಲ್ಲರೂ ಒಗ್ಗೂಡಿ ಸಂಭ್ರಮದಿಂದ ಆಚರಿಸಿದರು.
ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಿಹಿ ವಿತರಿಸಲಾಯಿತು. ಬಳಿಕ ಗ್ರಾಮದ ಶಿವಪಾರ್ವತಿ ಬ್ಯಾಟರಾಯಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಿ, ಬೆಳ್ಳಿರಥಕ್ಕೆ ಪೂಜೆ ಸಲ್ಲಿಸಿ ಭಕ್ತಿಯಿಂದ ಮೆರವಣಿಗೆ ನಡೆಸಲಾಯಿತು.
ಗ್ರಾಮದ ಯುವ ಮುಖಂಡ ರವಿ ಬಿ. ಗೌಡ ಮಾತನಾಡಿ, “ಉಡುಪಿ ಶ್ರೀಕೃಷ್ಣ ಪರಮಾತ್ಮನ ಕೃಪೆಗೆ ಪಾತ್ರರಾದ ಕನಕದಾಸರು, ತಮ್ಮ ಕೀರ್ತನೆಗಳ ಮೂಲಕ ಜನಜೀವನಕ್ಕೆ ಧಾರ್ಮಿಕತೆ, ಸತ್ಯ ಮತ್ತು ಸಹಿಷ್ಣುತೆಯ ಸಂದೇಶ ನೀಡಿದರು,” ಎಂದರು.
ಜೆಡಿಎಸ್ ಯುವ ಮುಖಂಡ ಎಂ.ಜಿ. ನವೀನ್ ಕುಮಾರ್ ಮಾತನಾಡಿ, “ಕನಕದಾಸರ ಕೀರ್ತನೆಗಳು ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರ ಸಂದೇಶಗಳು ಇಡೀ ಮಾನವಕೊಳಗೆ ಅನ್ವಯಿಸುತ್ತವೆ. ಈ ಕೀರ್ತನೆಗಳು ಹೊಸ ತಲೆಮಾರಿಗೆ ತಲುಪುವಂತೆ ನಾವು ಪ್ರಯತ್ನಿಸಬೇಕು,” ಎಂದರು.
ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಕೆ. ರಾಜಶೇಖರ್ “ಗ್ರಾಮಸ್ಥರೆಲ್ಲರೂ ಒಂದಾಗಿ ಕನಕದಾಸರ ಜಯಂತಿಯನ್ನು ಆಚರಿಸಿರುವುದು ಸಂತೋಷದ ವಿಚಾರ. ಇದು ಸಾಮಾಜಿಕ ಏಕತೆಯ ನಿಜವಾದ ನಿದರ್ಶನ,” ಎಂದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಮಾಂಜಿನಪ್ಪ “ದಾಸಶ್ರೇಷ್ಠ ಕನಕದಾಸರು ಹಾಡಿದ ಕೀರ್ತನೆಗಳು ಇಡೀ ದೇಶಕ್ಕೆ ಮಾದರಿ. ಅವರ ಆಶೀರ್ವಾದದಿಂದ ಗ್ರಾಮದಲ್ಲಿ ಶಾಂತಿ, ನೆಮ್ಮದಿ ಇರಲಿ,” ಎಂದು ಪ್ರಾರ್ಥಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಿ ಮುನಿರಾಜು ಕನಕದಾಸರ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿದರು.
ಜಂಗಮ ಕೋಟೆ ಹೋಬಳಿಯಿಂದ ಸುಮಾರು ಹತ್ತುಕ್ಕೂ ಹೆಚ್ಚು ಕನಕದಾಸರ ಬೆಳ್ಳಿರಥಗಳು ಮೆರವಣಿಗೆ ನಡೆಸಿದವು. ಹಬ್ಬದ ಸಡಗರದ ಮಧ್ಯೆ ಅಂಗನವಾಡಿ, ಸರ್ಕಾರಿ ಶಾಲೆ ಮತ್ತು ಪ್ರೌಢಶಾಲೆಗಳಲ್ಲಿ ಮಕ್ಕಳಿಗೆ ಸಿಹಿ ವಿತರಣೆ ನಡೆಯಿತು.
ಕಾರ್ಯಕ್ರಮದಲ್ಲಿ ಬಿ.ಎನ್. ಕೃಷ್ಣಯ್ಯ, ರಾಮಯ್ಯ, ನಲ್ಲೂರಪ್ಪ, ನಾರಾಯಣಸ್ವಾಮಿ, ತಿಮ್ಮೇಗೌಡ, ಮುಖ್ಯ ಶಿಕ್ಷಕಿ ಅಹಲ್ಯಾ ಮೇಡಂ, ಶಿಕ್ಷಕರು, ಗ್ರಾಮಸ್ಥರು ಹಾಗೂ ಸಜೀವಿನಿ ಒಕ್ಕೂಟದ ಸದಸ್ಯರು ಭಾಗವಹಿಸಿದ್ದರು.
For Daily Updates WhatsApp ‘HI’ to 7406303366
