Home News ಅಧಿಕಾರಿಗಳು ಯಾವುದೇ ಮುಲಾಜಿಗೆ ಒಳಗಾಗಿ ಕೆಲಸ ಮಾಡಬೇಡಿ – ಶಾಸಕ ಬಿ.ಎನ್.ರವಿಕುಮಾರ್

ಅಧಿಕಾರಿಗಳು ಯಾವುದೇ ಮುಲಾಜಿಗೆ ಒಳಗಾಗಿ ಕೆಲಸ ಮಾಡಬೇಡಿ – ಶಾಸಕ ಬಿ.ಎನ್.ರವಿಕುಮಾರ್

0
Sidlaghatta MLA B N Ravikumar Meeting Departments

Sidlaghatta : ಅಧಿಕಾರಿಗಳು ಯಾವುದೇ ರಾಜಕೀಯ ಮುಖಂಡರ ಅಥವಾ ಬೇರಾವುದೇ ಮುಲಾಜಿಗೆ ಒಳಗಾಗಿ ಕೆಲಸ ಮಾಡಬೇಡಿ. ಜನಸಾಮಾನ್ಯರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿ. ಕ್ಷೇತ್ರದ ಜನರ ಕಷ್ಟಗಳು ಬಗೆಹರಿಯಬೇಕು. ಸರ್ಕಾರದ ಯೋಜನೆಗಳು ಜನರಿಗೆ ತಲುಪಬೇಕು. ಸಾಮಾನ್ಯ ಜನರಿಂದ ಯಾವುದೇ ಇಲಾಖೆಯ ಬಗ್ಗೆ ದೂರು ಬರಬಾರದು ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.

ಶಿಡ್ಲಘಟ್ಟ ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಈ ಹಿಂದೆ ಏನು ನಡೆಯಿತು, ಅಕ್ರಮ ಸಕ್ರಮಗಳ ಬಗ್ಗೆ ನಾನು ಚರ್ಚಿಸುವುದಿಲ್ಲ. ಮುಂದೆ ಆಗಬೇಕಾದ ಕೆಲಸಗಳು ಬಹಳ ಮುಖ್ಯ. ಯಾವುದೇ ಇಲಾಖೆಯಲ್ಲೂ ಅವ್ಯವಹಾರ, ಮಧ್ಯವರ್ತಿಗಳ ಹಾವಳಿ ಇರಬಾರದು. ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಅಧಿಕಾರಿಗಳು ಸಂಪೂರ್ಣವಾಗಿ ಸಹಕರಿಸಬೇಕು. ಚುನಾವಣೆ ಮುಗಿಯುತ್ತಿದ್ದಂತೆ ರಾಜಕೀಯ ಪಕ್ಕಕ್ಕಿಟ್ಟಿದ್ದೇವೆ. ಇನ್ನೇನಿದ್ದರೂ ಅಭಿವೃದ್ಧಿ. ಜನರ ಕೆಲಸಗಳು ತ್ವರಿತವಾಗಿ ನಡೆಯಬೇಕು ಮತ್ತು ಸರ್ಕಾರದ ಸೌಲಭ್ಯಗಳು ಜನರಿಗೆ ತಲುಪಬೇಕು ಎಂದು ಹೇಳಿದರು.

ಪ್ರತಿಯೊಂದು ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆ ನಡೆಸುತ್ತೇನೆ. ಅಧಿಕಾರಿಗಳು ತಮ್ಮ ಇಲಾಖೆಯ ಪ್ರಗತಿ, ಯೋಜನೆ ಹಾಗೂ ಸಂಪೂರ್ಣ ಮಾಹಿತಿ ನೀಡಬೇಕು. ಮುಖ್ಯವಾಗಿ ಇಲಾಖೆಗಳಿಂದ ಜನರಿಗೆ ತಲುಪಿದ ಸೌಲಭ್ಯಗಳ ಮಾಹಿತಿ ತಂದುಕೊಡಿ ಎಂದರು.

ತಾಲ್ಲೂಕು ಕಚೇರಿಯಲ್ಲಿ ಇ.ಸಿ(ಎನ್ಕಂಬರೆನ್ಸ್ ಸರ್ಟಿಫಿಕೇಟ್) ಪಡೆಯಲು ಬರುವ ರೈತರಿಗೆ ತಾಂತ್ರಿಕ ಜ್ಞಾನ ಇರುವುದಿಲ್ಲ, ಆತ ಮಧ್ಯವರ್ತಿಗಳಿಂದ ಹಣ ಕಳೆದುಕೊಳ್ಳದ ಹಾಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಗಂಗಾ ಕಲ್ಯಾಣ ಮುಂತಾದ ಯೋಜನೆಗಳು ಸೂಕ್ತ ಫಲಾನುಭವಿಗಳಿಗೆ ತಲುಪಲಿ. ಒತ್ತಡ ಅಥವಾ ಆಮಿಷಗಳಿಗೆ ಕೆಲಸ ಮಾಡಬೇಡಿ ಎಂದರು.

ಬೈಪಾಸ್ ರಸ್ತೆ :

ಶಿಡ್ಲಘಟ್ಟದಲ್ಲಿ ಕೆರೆ ಏರಿಯಿಂದ ಪ್ರಾರಂಭವಾಗಿ ಬೈಪಾಸ್ ರಸ್ತೆ ಮೂಲಕ ಮಯೂರ ವೃತ್ತದವರೆಗೂ ರಸ್ತೆಯಲ್ಲಿ ಮಳೆ ನೀರು ನಿಲ್ಲದ ಹಾಗೆ ಕ್ರಮ ವಹಿಸಬೇಕು. ತ್ಯಾಜ್ಯಗಳು ಸುರಿಯದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಅಂಗನವಾಡಿ :

ಮಕ್ಕಳಿಗೆ ಯಾವುದೇ ರೀತಿಯಲ್ಲೂ ತೊಂದರೆ ಆಗಬಾರದು. ಅವರಿಗೆ ಉತ್ತಮ ಆಹಾರ, ಸೌಲಭ್ಯ ನೀಡಬೇಕು. ಮಕ್ಕಳು ಮತ್ತು ಶಿಕ್ಷಣದ ವಿಷಯದಲ್ಲಿ ರಾಜಿ ಆಗುವುದಿಲ್ಲ. ಏನಾದರೂ ಸಮಸ್ಯೆಗಳಿದ್ದಲ್ಲಿ ಬಂದು ಹೇಳಿ ಬಗೆಹರಿಸಿಕೊಳ್ಳಿ ಎಂದರು.

ಶಿಕ್ಷಣ :

ಶಿಡ್ಲಘಟ್ಟ ಕ್ಷೇತ್ರವು ಜಿಲ್ಲೆ ಮತ್ತು ರಾಜ್ಯದಲ್ಲಿ ಮೊದಲ ಸ್ಥಾನ ಪಡೆಯಲು ಶಿಕ್ಷಕರು ಮತ್ತು ಅಧಿಕಾರಿಗಳು ಒಗ್ಗೂಡಿ ಕೆಲಸ ಮಾಡಬೇಕು. ನಿಮಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ಸರ್ಕಾರಿ ಶಾಲೆಗಳನ್ನು ಉತ್ತಮಗೊಳಿಸೋಣ. ಮಕ್ಕಳ ಭವಿಷ್ಯ ಉಜ್ವಲವಾಗಬೇಕು ಎಂದರು.

ಆರೋಗ್ಯ :

ಸರ್ಕಾರಿ ಆಸ್ಪತ್ರೆಗಳಿಗೆ ನಾನೇ ಖುದ್ದಾಗಿ ಬಂದು ಅಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸುತ್ತೇನೆ. ತಾಲ್ಲೂಕಿನಲ್ಲಿರುವ ಡೈಯಾಲಿಸಿಸ್ ಪಡೆಯುವವರ ಪಟ್ಟಿ ತಯಾರಿಸಿ. ಜನಸಾಮಾನ್ಯರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಅತ್ಯುತ್ತಮ ಸೇವೆ ಸಿಗಬೇಕು. ಜೊತೆಗೂಡಿ ಆಸ್ಪತ್ರೆಗೆ ಅವಶ್ಯಕತೆಗಳನ್ನು ಪೂರೈಸಿ ಜನರಿಗೆ ಅನುಕೂಲ ಮಾಡಿಕೊಡೋಣ ಎಂದರು.

ಶುದ್ಧ ನೀರಿನ ಘಟಕ :

ಪ್ರತಿಯೊಂದು ಗ್ರಾಮ ಪಂಚಾಯಿತಿಗಳ ಪಿಡಿಒ ಗಳೊಂದಿಗೆ ಸಭೆ ನಡೆಸಿ. ಹಳ್ಳಿಗಳಲ್ಲಿ ಶುದ್ಧ ನೀರಿನ ಘಟಕಗಳು ಸಮರ್ಪಕವಾಗಿ ಕೆಲಸ ಮಾಡುತ್ತಿರಬೇಕು. ಒಳ್ಳೆಯ ನೀರು ಪ್ರತಿಯೊಬ್ಬರಿಗೂ ಸಿಗುವಂತಾಗಬೇಕು ಎಂದರು.

ಕಾರ್ಮಿಕರಿಗೆ ಸೌಲಭ್ಯ :

ಕಾರ್ಮಿಕ ಇಲಾಖೆಯಿಂದ ನಿಜವಾದ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳು ತಲುಪಬೇಕು. ರೇಷ್ಮೆ ಕಾರ್ಖಾನೆಗಳಲ್ಲಿ ದುಡಿಯುವವರು ಅದರಲ್ಲೂ ಹೆಣ್ಣುಮಕ್ಕಳು, ಆಸ್ತಮಾ ಸೇರಿದಂತೆ ಹಲವು ಖಾಯಿಲೆಗಳಿಂದ ನರಳುತ್ತಾರೆ. ಕಾರ್ಮಿಕ ಇಲಾಖೆಯ ಅಧಿಕಾರಿಗಳು ಬಡವರಿಗೆ ಪ್ರಾಮಾಣಿಕವಾಗಿ ನೆರವಾಗಬೇಕು ಎಂದರು.

ಅರಣ್ಯ ಇಲಾಖೆ :

ಅರಣ್ಯ ಇಲಾಖೆಯವರು ಪರಿಸರ ದಿನವೆನ್ನುತ್ತಾ ಕೇವಲ ಗಿಡ ನೆಟ್ಟರೆ ಸಾಲದು, ಎಷ್ಟು ಗಿಡ ಉಳಿದಿವೆ ಎಂಬುದರ ಬಗ್ಗೆ ಗಮನಹರಿಸಬೇಕು. ಗಿಡ ನೆಟ್ಟಿದ್ದನ್ನು ಪೋಷಿಸುವ ಕೆಲಸವಾಗಲಿ. ನೆಡುವ ಗಿಡಗಳ ಸಂಖ್ಯೆ ಮುಖ್ಯವಲ್ಲ, ಮಾಡಿದ ಕೆಲಸ ಪ್ರಯೋಜನವಾಗಬೇಕು ಎಂದರು.

ಬಸ್ ಸೌಲಭ್ಯ :

ಈಗಾಗಲೇ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಿಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸುಮಾರು ಏಳು ಮಾರ್ಗಗಳಲ್ಲಿ ಬಸ್ ಸೌಲಭ್ಯ ಒದಗಿಸಬೇಕೆಂದು ತಿಳಿಸಲಾಗಿದೆ. ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಲ್ಲೂ ಅನಾನುಕೂಲವಾಗಬಾರದು. ಈ ಬಗ್ಗೆ ಮೇಲಧಿಕಾರಿಗಳೊಂದಿಗೆ ಮಾತನಾಡಿ, ವ್ಯವಸ್ಥೆ ಮಾಡಿಕೊಳ್ಳಿ ಎಂದು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಿಗೆ ಹೇಳಿದರು.

ಪೊಲೀಸ್ ಇಲಾಖೆ :

ಜನಸಾಮಾನ್ಯರು ತೊಂದರೆ, ಸಮಸ್ಯೆಗಳಾದಾಗ ಪೊಲೀಸರ ಬಳಿ ಬರುತ್ತಾರೆ. ಅವರೊಂದಿಗೆ ಸೌಜನ್ಯವಾಗಿ ಮಾತನಾಡಿ, ಸಮಸ್ಯೆ ಬಗೆಹರಿಸಿ. ಕೆಟ್ಟ ಸಂಗತಿಗಳು ನಡೆಯದಂತೆ, ತಪ್ಪುಗಳು ಆಗದಂತೆ, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ. ಜನಸಾಮಾನ್ಯರು ನೆಮ್ಮದಿಯಿಂದ ಇರಬೇಕಷ್ಟೇ ಎಂದರು.

ಬೆಸ್ಕಾಂ :

ಹರಳಹಳ್ಳಿಯಲ್ಲಿ ವಿದ್ಯುತ್ ಅವಘಡದಿಂದ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಿ. ವಿದ್ಯುತ್ ತಂತಿಗಳು ಹೋಗಿರುವೆಡೆ ಮರಗಳು ಬೆಳೆದಿದ್ದರೆ, ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿ, ರೆಂಬೆಗಳನ್ನು ತೆಗೆದು ತೊಂದರೆ ಆಗದಂತೆ ನೋಡಿಕೊಳ್ಳಿ. ಕೆಲವೆಡೆ ತುಂಬಾ ಕೆಳಗಡೆ ವಿದ್ಯುತ್ ತಂತಿಗಳು ಹಾಕಿರುವುದನ್ನು ಸರಿಪಡಿಸಿ ಎಂದರು.

ಖಾಲಿ ಹುದ್ದೆ :

ಪಶುಪಾಲನಾ ಇಲಾಖೆ, ರೇಷ್ಮೆ ಇಲಾಖೆ ಸೇರಿದಂತೆ ಕೆಲವು ಇಲಾಖೆಗಳ ಅಧಿಕಾರಿಗಳು ಖಾಲಿ ಹುದ್ದೆಗಳನ್ನು ಭರ್ತಿ ಮಾಡಿದಲ್ಲಿ ತುಂಬಾ ಅನುಕೂಲವಾಗುತ್ತದೆ ಎಂದು ಈ ವಿಷಯದ ಬಗ್ಗೆ ಶಾಸಕರ ಗಮನ ಸೆಳೆದರು. ಹೊರಗುತ್ತಿಗೆ ಆಧಾರದ ಮೇಲೆ ವಿವಿಧ ಇಲಾಖೆಗಳು ಕೆಲಸಕ್ಕೆ ಸೇರಿಸಿಕೊಳ್ಳುವಾಗ ಸ್ಥಳೀಯ ವಿದ್ಯಾವಂತರಿಗೆ ಆದ್ಯತೆ ನೀಡಬೇಕು ಎಂದು ಈ ಸಂದರ್ಭದಲ್ಲಿ ಶಾಸಕ ಬಿ.ಎನ್.ರವಿಕುಮಾರ್ ಸೂಚಿಸಿದರು.

ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಆಶಾಲತಾ, ಇಒ ಮುನಿರಾಜ, ತಹಶೀಲ್ದಾರ್ ಬಿ.ಎನ್.ಸ್ವಾಮಿ, ನಗರಸಭೆ ಪೌರಾಯುಕ್ತ ಆರ್.ಶ್ರೀಕಾಂತ್, ಸರ್ಕಲ್ ಇನ್ಸ್ ಪೆಕ್ಟರ್ ನಂದಕುಮಾರ್, ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕುಮಟ್ಟದ ಅಧಿಕಾರಿಗಳು ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version