
Sidlaghatta, chikkaballapur District : ಶಿಡ್ಲಘಟ್ಟ ನಗರದಲ್ಲಿ ಅಂಬೇಡ್ಕರ್ ಸೇನೆ ಸದಸ್ಯರು ಭಾರಿ ಪ್ರತಿಭಟನಾ ಮೆರವಣಿಗೆ ನಡೆಸಿ, ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲಿನ ಹಲ್ಲೆ ಯತ್ನ ಮಾಡಿದ ವಕೀಲ ರಾಕೇಶ್ ಕಿಶೋರ್‌ರನ್ನು ದೇಶದ್ರೋಹಿ ಎಂದು ಘೋಷಿಸಿ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನಾಕಾರರು ತಮ್ಮ ಬೇಡಿಕೆಗಳ ಕುರಿತು ಮನವಿಯನ್ನು ಶಿರಸ್ತೆದಾರ್ ಆಸಿಯಾ ಅವರಿಗೆ ಸಲ್ಲಿಸಿದರು.
ಅವರು ಮಾತನಾಡಿ, “ವಕೀಲ ರಾಕೇಶ್ ಕಿಶೋರ್ ನ್ಯಾಯಾಂಗದ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸಿದ್ದು ದೇಶದ್ರೋಹದ ಕೃತ್ಯ. ನ್ಯಾಯಮೂರ್ತಿಯ ಮೇಲೆ ಶೂ ಎಸೆಯುವ ಮೂಲಕ ಇಡೀ ರಾಷ್ಟ್ರದ ನ್ಯಾಯಾಂಗ ವ್ಯವಸ್ಥೆಗೆ ಅವಮಾನ ತಂದಿದ್ದಾನೆ. ಇಂತಹ ಕೃತ್ಯವನ್ನು ಕ್ಷಮಿಸಲಾಗದು, ಸರ್ಕಾರ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು,” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ ಸದಸ್ಯರು, ಶಿಡ್ಲಘಟ್ಟ ತಾಲ್ಲೂಕಿನ ಸರ್ಕಾರಿ ತೋಪು, ಖರಾಬ್ ಜಮೀನು, ಸರ್ಕಾರಿ ಕುಂಟೆ ಹಾಗೂ ಸಾರ್ವಜನಿಕ ಸ್ಮಶಾನ ಪ್ರದೇಶಗಳು ಬಲಾಢ್ಯರಿಂದ ಅಕ್ರಮವಾಗಿ ಕಬಳಿಸಲ್ಪಟ್ಟಿವೆ, ಅವುಗಳನ್ನು ತಕ್ಷಣ ತೆರವುಗೊಳಿಸಿ ಸರ್ಕಾರದ ಆಸ್ತಿಯನ್ನಾಗಿ ಪುನಃ ದಾಖಲಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಅಂಬೇಡ್ಕರ್ ಸೇನೆ ಜಿಲ್ಲಾ ಅಧ್ಯಕ್ಷ ಕೆ.ಎಸ್. ಕೃಷ್ಣಮೂರ್ತಿ, ಜಿಲ್ಲಾ ಕಾರ್ಯಾಧ್ಯಕ್ಷ ಗಂಗಾಧರ್ ಟಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ, ಶ್ರೀನಿವಾಸ್ ಎನ್.ವಿ., ದಲಿತ ಮುಖಂಡ ಕೆ.ಎಸ್. ದ್ಯಾವಕೃಷ್ಣಪ್ಪ, ಹಾಗೂ ತಾಲ್ಲೂಕು ಘಟಕದ ಪುರುಷ ಮತ್ತು ಮಹಿಳಾ ಪದಾಧಿಕಾರಿಗಳು ಭಾಗವಹಿಸಿದ್ದರು.