ಮಾರುತಿ ನಗರದ ವಾಸಿ, ಗಾರೆ ಕೆಲಸದ ಮೇಸ್ತ್ರಿ ಗೋವಿಂದಪ್ಪ(37) ಅವರಿಗೆ ನಾಡ ಬಂದೂಕಿನಿಂದ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಡ್ಲಘಟ್ಟ ನಗರ ಠಾಣೆಯ ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ.
ಆಗಸ್ಟ್ 18ರಂದು ಬೆಳಗಿನ ವೇಳೆ ಗೋವಿಂದಪ್ಪ ಮಾರುತಿ ನಗರದಲ್ಲಿನ ತನ್ನ ಮನೆಯಿಂದ ಕೆಲಸಕ್ಕಾಗಿ ನಗರಕ್ಕೆ ತೆರಳುವಾಗ ನಾಡ ಬಂದೂಕಿನಿಂದ ಗುಂಡು ತಗುಲಿ ಆತನ ಭುಜ ಕೈ ತೋಳಿನಲ್ಲಿ ತೂರಿ ಗಂಭೀರವಾಗಿ ಗಾಯಗೊಂಡಿದ್ದ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಶಿಡ್ಲಘಟ್ಟ ನಗರಠಾಣೆಯ ಪೊಲೀಸರು ಗೋವಿಂದಪ್ಪನ ಪತ್ನಿ ಸುಮಿತ್ರ(28) ಹಾಗೂ ಆಕೆಗೆ ಸಹಕರಿಸಿದ ದೊಡ್ಡದಾಸರಹಳ್ಳಿಯ ಮುನಿಕೃಷ್ಣ(29), ಅದೇ ಗ್ರಾಮದ ಕಿಟ್ಟಿ ಅಲಿಯಾಸ್ ರಾಮಕೃಷ್ಣ(28), ಪ್ರವೀಣ್(25), ಹರೀಶ್(21) ಹಾಗೂ ಡಬರಗಾನಹಳ್ಳಿಯ ಚಿನ್ನಯ್ಯ ಬಂಧಿತರು.
ಸುಮಿತ್ರ ಜತೆಗೆ ಮುನಿಕೃಷ್ಣ ಅಕ್ರಮ ಸಂಬಂಧ ಇರಿಸಿಕೊಂಡಿದ್ದ ಎನ್ನಲಾಗಿದೆ. ಇದರಿಂದ ಗೋವಿಂದಪ್ಪ ಮನೆಯಲ್ಲಿ ಸುಮಿತ್ರಳ ಜತೆ ಜಗಳ ತೆಗೆಯುತ್ತಿದ್ದ. ಇದರಿಂದ ಬೇಸತ್ತ ಸುಮಿತ್ರ ತನ್ನ ಗಂಡನನ್ನೇ ಮುಗಿಸಲು ಸಂಚು ರೂಪಿಸಿದ್ದಾಳೆ.
ತನ್ನ ಗಂಡ ಗೋವಿಂದಪ್ಪನನ್ನ ಕೊಲೆ ಮಾಡುವಂತೆ ಮುನಿಕೃಷ್ಣಗೆ ಹೇಳಿದ್ದಾಳೆ. ಆದರೆ ಮುನಿಕೃಷ್ಣ ಕೊಲೆ ಮಾಡಲು ಒಪ್ಪಿಲ್ಲ. ಆಗ ಮುನಿಕೃಷ್ಣನ ತಮ್ಮ ಕಿಟ್ಟಿ ಅಲಿಯಾಸ್ ರಾಮಕೃಷ್ಣನಿಗೆ ಕೊಲೆ ಮಾಡುವಂತೆ ಪುಸಲಾಯಿಸಿದ್ದು ಕೊಲೆ ಮಾಡಿದರೆ 1.5 ಲಕ್ಷ ರೂ.ಸುಪಾರಿ ನೀಡುವುದಾಗಿಯೂ ಹಾಗೂ ಮನೆ ಮಠ ಜಮೀನು ನಮ್ಮದಾಗುತ್ತದೆ ಎಂದು ಆಸೆ ಹುಟ್ಟಿಸಿದ್ದಾಳೆ.
ಸುಫಾರಿ ಹಣ ಜಮೀನು ಮನೆ ಮಠ ಸಿಗುವ ಆಸೆಯಿಂದ ಕೊಲೆ ಮಾಡಲು ಒಪ್ಪಿದ ಕಿಟ್ಟಿ ಅಲಿಯಾಸ್ ರಾಮಕೃಷ್ಣ ಡಬರಗಾನಹಳ್ಳಿಯ ಚಿನ್ನಪ್ಪನಿಂದ ಡಬಲ್ ಬ್ಯಾರೆಲ್ ನಾಡ ಬಂದೂಕನ್ನು ಪಡೆದುಕೊಂಡಿದ್ದಾನೆ.
ತನ್ನ ಸ್ನೇಹಿತರಾದ ಲಾರಿ ಕ್ಲೀನರ್ ಪ್ರವೀಣ್ ಮತ್ತು ಕೋಲಾರದ ಐಬ ಕಂಪನಿಯಲ್ಲಿ ಲಿಪ್ಟರ್ ಆಗಿ ಕಾರ‍್ಯನಿರ್ವಹಿಸುತ್ತಿದ್ದ ಹರೀಶ್‌ಗೆ ಸುಫಾರಿ ನೀಡಿ ಕೊಲೆ ಮಾಡಲು ಸಂಚು ರೂಪಿಸಿದ್ದಾನೆ.
ಅದರಂತೆ ಆಗಸ್ಟ್ 18 ರಂದು ಮಾರುತಿ ನಗರದಲ್ಲಿನ ತನ್ನ ಮನೆಯಿಂದ ಶಿಡ್ಲಘಟ್ಟ ನಗರಕ್ಕೆ ಹೊರಟಿದ್ದ ಗೋವಿಂದಪ್ಪನನ್ನು ಪ್ರವೀಣ್ ಹಾಗೂ ಹರೀಶ್ ಬೈಕ್‌ನಲ್ಲಿ ಹಿಂಬಾಲಿಸಿದ್ದು ನಾಡ ಬಂದೂಕಿನಿಂದ ಗುಂಡು ಹಾರಿಸಿದ್ದರು.
ಶಿಡ್ಲಘಟ್ಟ ನಗರಠಾಣೆಯ ಪೊಲೀಸರು ಬಂಧಿಸಿದ ಎಲ್ಲ ಆರೋಪಿಗಳ ಆರೋಗ್ಯ ತಪಾಸಣೆ ನಡೆಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi