Home News ಶಿಡ್ಲಘಟ್ಟ ಕ್ಷೇತ್ರದಲ್ಲಿನ ಸಮಸ್ಯೆಗಳ ಬಗ್ಗೆ ಶಾಸಕರಿಗೆ ಮನವಿ ಸಲ್ಲಿಕೆ

ಶಿಡ್ಲಘಟ್ಟ ಕ್ಷೇತ್ರದಲ್ಲಿನ ಸಮಸ್ಯೆಗಳ ಬಗ್ಗೆ ಶಾಸಕರಿಗೆ ಮನವಿ ಸಲ್ಲಿಕೆ

0
Press Association B N Ravikumar development Plea

Sidlaghatta : ಕ್ಷೇತ್ರದ ಜನ ಸಾಮಾನ್ಯರು ಎದುರಿಸುತ್ತಿರುವ ಅನೇಕ ಸಮಸ್ಯೆಗಳು, ಸರ್ಕಾರಿ ಕಚೇರಿಗಳಲ್ಲಿ ಜನ ಸಾಮಾನ್ಯರನ್ನು ಸುಲಿಗೆ ಮಾಡುವಂತ ಅಧಿಕಾರಿಶಾಹಿ ವ್ಯವಸ್ಥೆಯನ್ನು ನಮ್ಮ ಗಮನಕ್ಕೆ ತರುವಂತ ಸಾಮಾಜಿಕ ಬದ್ಧತೆಯನ್ನು ಮಾಧ್ಯಮದವರು ಪ್ರಾಮಾಣಿಕವಾಗಿ ತೋರಬೇಕೆಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.

ಶಿಡ್ಲಘಟ್ಟ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಗೌರವ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ, ಕ್ಷೇತ್ರದ ಜನರು ಹಾಗೂ ಅಧಿಕಾರಿ, ಜನಪ್ರತಿನಿಧಿಗಳ ನಡುವೆ ಕೊಂಡಿಯಂತೆ ಕಾರ್ಯನಿರ್ವಹಿಸಿ ಆಡಳಿತ ನಡೆಸುವವರನ್ನು ಎಚ್ಚರಿಸುವಂತ ಕೆಲಸವನ್ನು ಪತ್ರಿಕೆಗಳು, ಮಾಧ್ಯಮದವರು ಮಾಡಬೇಕಿದೆ ಎಂದರು.

ಜನಪ್ರತಿನಿಧಿಗಳು, ಅಧಿಕಾರಿಗಳ ನಡುವೆ ಆರೋಗ್ಯಯುತ ಸಾಮಾಜಿಕ ಬದ್ಧತೆಯ ನಂಟನ್ನು ಹೊಂದಿರಬೇಕೆ ಹೊರತು ಅವರ ಹಿಂಬಾಲಕರಾಗಬಾರದು, ಇದರಿಂದ ಆಡಳಿತ ನಡೆಸುವವರು ಸಹ ದಿಕ್ಕು ತಪ್ಪುವಂತ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.

ಕ್ಷೇತ್ರದ ಅಭಿವೃದ್ದಿ ವಿಚಾರದಲ್ಲಿ ಮುಕ್ತವಾಗಿ ಚರ್ಚಿಸಿ ಅವುಗಳ ಜಾರಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಈ ವೇಳೆ ಭರವಸೆ ನೀಡಿದರು.

ಶಾಸಕ ಬಿ.ಎನ್.ರವಿಕುಮಾರ್ ಅವರನ್ನು ಶಾಲು ಹೊದಿಸಿ ಹಣ್ಣು ಹಂಪಲು ನೀಡಿ ಗೌರವ ಸನ್ಮಾನ ನೀಡಲಾಯಿತು.

ಶಿಡ್ಲಘಟ್ಟ ಕ್ಷೇತ್ರದಲ್ಲಿನ ಗಂಭೀರವಾದ, ನೆನೆಗುದಿಗೆ ಬಿದ್ದ ಅಭಿವೃದ್ದಿ ಕಾರ್ಯಗಳು ಹಾಗೂ ಆಗಲೇಬೇಕಾದ ಕಾರ್ಯಗಳ ಬಗ್ಗೆ ಪತ್ರಕರ್ತರ ಸಂಘದಿಂದ ಮನವಿ ಪೂರ್ವಕ ಒತ್ತಾಯವನ್ನು ಮಾಡಲಾಯಿತು.

ಶಿಡ್ಲಘಟ್ಟ ನಗರಕ್ಕೆ ತಲಕಾಯಲಬೆಟ್ಟದ ವೆಂಕಟೇಶ್ವರಸಾಗರ ಕೆರೆಯಿಂದ ಕುಡಿಯುವ ನೀರಿನ ಪೂರೈಕೆ ಮಾಡುವ ಯೋಜನೆ, ಹೈಟೆಕ್ ರೇಷ್ಮೆಗೂಡು ನಿರ್ಮಾಣ, ಎಪಿಎಂಸಿ ಮಾರುಕಟ್ಟೆಗೆ ಜಾಗ ನಿಗಧಿಪಡಿಸಿ ಮಾರುಕಟ್ಟೆ ನಿರ್ಮಾಣದ ಬಗ್ಗೆ ಶಾಸಕರ ಗಮನ ಸೆಳೆಯಲಾಯಿತು.

ಉತ್ತಮ ಗುಣಮಟ್ಟದ ರೇಷ್ಮೆನೂಲು ಶಿಡ್ಲಘಟ್ಟದಲ್ಲಿ ಉತ್ಪಾದನೆಯಾಗುತ್ತಿದ್ದು ಈ ರೇಷ್ಮೆಗೆ ಜಿ.ಐ ಟ್ಯಾಗ್(ಬ್ರಾಂಡ್) ನಿರ್ಮಿಸುವುದು, ಸಿಎಸ್‌ಐ ಆಸ್ಪತ್ರೆ ನಿರ್ಮಾಣ, ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸೀಸ್ ಕೇಂದ್ರ ಸ್ಥಾಪನೆ, ಕಚ್ಚಾ ರೇಷ್ಮೆ ಮಾರಾಟದ ಮಾರುಕಟ್ಟೆ, ಸಾಫ್ಟ್ ವೇರ್ ಪಾರ್ಕ್ ಸೇರಿದಂತೆ ಹಲವು ಬೇಡಿಕೆಗಳನ್ನು ಶಾಸಕರ ಮುಂದಿಡಲಾಯಿತು.

ಪತ್ರಕರ್ತರ ಸಂಘದ ಅಧ್ಯಕ್ಷ ವೀರಾಪುರ ಮಂಜುನಾಥ್, ಕಾರ್ಯದರ್ಶಿ ಛಾಯಾ ರಮೇಶ್, ಖಜಾಂಚಿ ತಮೀಮ್ ಪಾಷ, ಗೌರವಾಧ್ಯಕ್ಷ ಕೆ.ವಿ.ಮುನೇಗೌಡ, ಕೆ.ನಾಗರಾಜ್, ಉಪಾಧ್ಯಕ್ಷರಾದ ಎ.ಶಶಿಕುಮಾರ್, ಕರಗಪ್ಪ, ಕಾನೂನು ಸಲಹೆಗಾರ ಡಿ.ಜಿ.ಮಲ್ಲಿಕಾರ್ಜುನ ಇನ್ನಿತರೆ ಪದಾಧಿಕಾರಿಗಳು ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version