ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನ ವಿರೋಧಿ ಧೋರಣೆಯನ್ನು ಖಂಡಿಸಿ ಆಗಸ್ಟ್ 10 ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದು ಸಾರ್ವಜನಿಕರು ಮತ್ತು ಸಂಘ ಸಂಸ್ಥಗಳ ಪದಾಧಿಕಾರಿಗಳು ಬೆಂಬಲಿಸಿ ಸಹರಿಸಬೇಕೆಂದು ಸಿಐಟಿಯು ಸಂಯೋಜಿತ ಗ್ರಾಮ ಪಂಚಾಯಿತಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸುದರ್ಶನ್ ಮನವಿ ಮಾಡಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶ ಆರ್ಥಿಕವಾಗಿ ದಿವಾಳಿಯಾಗಿದೆ. ಜೊತೆಗೆ ದೇಶಾದ್ಯಂತ ಕೊರೊನಾ ಸೋಂಕು ವ್ಯಾಪಕವಾಗಿ ಹರಡಿ ಜನ ಮತ್ತು ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನಲೆಯಲ್ಲಿ ಕಾರ್ಮಿಕರು, ಆಶಾ, ಅಂಗನವಾಡಿ ಕಾರ್ಯಕರ್ತರು ಹಾಗೂ ಗ್ರಾಮ ಪಂಚಾಯಿತಿ ನೌಕರರು ಕೊರೊನಾ ವಾರಿಯರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಸರ್ಕಾರಗಳ ನಿರ್ಲಕ್ಷ್ಯದಿಂದ ಗ್ರಾಮ ಪಂಚಾಯಿತಿಗಳ ನೌಕರರು ವೇತನ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಗ್ರಾಮ ಪಂಚಾಯಿತಿ ನೌಕರರ ಮೇಲೆ ಮಾರಣಾಂತಿಕ ಹಲ್ಲೆಗಳು ನಡೆಯುತ್ತಿದೆ. ಸರ್ಕಾರ ನೌಕರರಿಗೆ ಸೇವಾ ಭದ್ರತೆಯ ಜೊತೆಗೆ ಸೂಕ್ತ ರಕ್ಷಣೆ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸಲು ರೈತರು ಸಹಿತ ಕಾರ್ಮಿಕ ಸಂಘಟನೆಗಳು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಶಿಡ್ಲಘಟ್ಟ ತಾಲೂಕು ಕಚೇರಿಯ ಮುಂದೆ ಆಗಸ್ಟ್ 10ರ ಸೋಮವಾರದಂದು ಪ್ರತಿಭಟನೆ ನಡೆಸಲಿದ್ದೇವೆ ಎಂದರು.
ಗ್ರಾಮ ಪಂಚಾಯಿತಿ ನೌಕರರ ಸಂಘದ ಗೌರವಾಧ್ಯಕ್ಷೆ ಮಧುಲತಾ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ಕ್ವಿಟ್ ಇಂಡಿಯಾ ಚಳುವಳಿ ನಡೆಸಿದ ಮಾದರಿಯಲ್ಲಿ ದೇಶವನ್ನು ಉಳಿಸುವ ಹೋರಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಭೂ ಸುಧಾರಣೆಯ ನೆಪದಲ್ಲಿ ಕಾರ್ಪೋರೇಟ್ ಕಂಪನಿಗಳಿಗೆ ಅನುಕೂಲ ಕಲ್ಪಿಸುವ ಕಾಯ್ದೆಯನ್ನು ಜಾರಿಗೆ ತಂದು ರೈತರಿಂದ ಭೂಮಿ ಕಿತ್ತುಕೊಳ್ಳುವ ಹುನ್ನಾರ ನಡೆಸಿದ್ದಾರೆ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಕೊರೊನಾ ವಾರಿಯರ್ಸ್ ಎಂದು ಪಾದಪೂಜೆ ಮಾಡಿ ಪುಷ್ಟಗಳನ್ನು ಸಮರ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆಯೇ ಹೊರತು ಆಶಾ ಕಾರ್ಯಕರ್ತರು-ಬಿಸಿಯೂಟ ನೌಕರರು, ಅಂಗನವಾಡಿ ಕಾರ್ಯಕರ್ತರು, ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ಸೇವಾ ಭದ್ರತೆ ಒದಗಿಸಲು ಸರ್ಕಾರಗಳು ವಿಫಲವಾಗಿದೆ. ಹೊಟ್ಟೆಗೆ ಊಟ ಇಲ್ಲದಿದ್ದರೆ ಸನ್ಮಾನ ಏತಕ್ಕೆ ಎಂದು ಪ್ರಶ್ನಿಸಿ, ಇದೇ 10 ರಂದು ನಡೆಯುವ ಹೋರಾಟಕ್ಕೆ ಸಾರ್ವಜನಿಕರು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ಮುನಿಲಕ್ಷ್ಮಮ್ಮ ಮಾತನಾಡಿ, ತಾಲ್ಲೂಕಿನಲ್ಲಿ ಬಿಸಿಯೂಟ ನೌಕರರಿಗೆ 7 ತಿಂಗಳಿಂದ ವೇತನವಿಲ್ಲ ಜೊತೆಗೆ ಕೆಲಸ ಸಹ ಇಲ್ಲ. ಸರ್ಕಾರ ನಮ್ಮ ಸಮಸ್ಯೆಗಳನ್ನು ಬಗೆಹರಿಸಲು ಕನಿಷ್ಠ ಸೌಜನ್ಯ ತೋರಿಸುತ್ತಿಲ್ಲ. ಆದರೇ ಬಿಸಿಯೂಟ ಯೋಜನೆಯನ್ನು ಖಾಸಗಿಕರಣ ಮಾಡಲು ಹೊರಟಿದೆ. ಈಗಾಗಲೇ ಜಿಲ್ಲೆಯ ಪೆರೆಸಂದ್ರದಲ್ಲಿ ಖಾಸಗಿಕರಣ ಮಾಡಿದ್ದು ಕೂಡಲೆ ಅದನ್ನು ವಾಪಸ್ಸು ಪಡೆಯಬೇಕು. ಬಿಸಿಯೂಟ ನೌಕರರ ಬೇಡಿಕೆಗಳನ್ನು ಈಡೇರಿಸಲು ಆಗಸ್ಟ್ 11 ರಿಂದ ಅನಿರ್ಧಿಷ್ಠಾವಧಿ ಮುಷ್ಕರ ನಡೆಸಲು ತೀರ್ಮಾನ ಕೈಗೊಂಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಅಂಗನವಾಡಿ ನೌಕರರ ಸಂಘದ ಖಜಾಂಚಿ ಮಂಜುಳಾ, ಮಾಜಿ ಅಧ್ಯಕ್ಷೆ ಸುನಂದಮ್ಮ, ಗ್ರಾಮ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ ಸುಭ್ರಮಣಿ, ಪದಾಧಿಕಾರಿಗಳಾದ ಭಕ್ತರಹಳ್ಳಿ ನಾರಾಯಣಸ್ವಾಮಿ, ಬಶೆಟ್ಟಹಳ್ಳಿ ನರಸಿಂಹಮೂರ್ತಿ, ಕೊತ್ತನೂರು ದೇವೇಂದ್ರ, ಸಾದಲಿ ನಾಗರಾಜ್ ಹಾಜರಿದ್ದರು.
SUBSCRIBE, LIKE & SHARE ನಮ್ಮ ಶಿಡ್ಲಘಟ್ಟ
Facebook 👍🏻
http://www.facebook.com/sidlaghatta
Instagram 📷
http://www.instagram.com/sidlaghatta
Youtube ▶️
https://www.youtube.com/c/sidlaghatta
Website 🌐
http://www.sidlaghatta.com
📱 Join WhatsApp
https://wa.me/917406303366?text=Hi







