Sidlaghatta : ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಬಳಿಕ ಮುಂದಿನ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆಗಳು ನಡೆಯುತ್ತಿರುವ ನಡುವೆಯೇ, ಹಿರಿಯ ನಾಯಕ ಕೆ.ಎಚ್. ಮುನಿಯಪ್ಪ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಜೆಡಿಎಸ್ ಶಾಸಕ ಬಿ.ಎನ್. ರವಿಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿರುವುದು ತಾಲ್ಲೂಕಿನ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
In English: JDS MLA B N Ravikumar said on Monday that senior Congress leader and minister K H Muniyappa should be made Chief Minister if the current CM steps down for any reason — a remark he made at a temple renovation event in Chintadapi village, describing it as the wish of his own gram panchayat constituents. The comment stands out because JDS leaders had earlier projected party chief H D Kumaraswamy for the same role, a factual contrast now drawing attention in local political circles, even as Congress has made no official statement on any leadership change.
ಸೋಮವಾರ ತಾಲ್ಲೂಕಿನ ಚಿಂತಡಪಿ ಗ್ರಾಮದ ವೇಣುಗೋಪಾಲಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಬಿ.ಎನ್.ರವಿಕುಮಾರ್, “ಪ್ರಸ್ತುತ ಮುಖ್ಯಮಂತ್ರಿ ಯಾವುದೇ ಕಾರಣಾಂತರಗಳಿಂದ ರಾಜೀನಾಮೆ ನೀಡುವ ಸಂದರ್ಭ ಎದುರಾದರೆ, ಹಿರಿಯ ನಾಯಕ ಕೆ.ಎಚ್. ಮುನಿಯಪ್ಪ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂಬುದು ತಮ್ಮ ಹಾಗೂ ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರ ಅಭಿಪ್ರಾಯ ಮತ್ತು ಆಶಯ” ಎಂದು ಹೇಳಿದರು.
ಕೆ.ಎಚ್.ಮುನಿಯಪ್ಪ ಅವರ ರಾಜಕೀಯ ಹಿರಿತನವನ್ನು ಪ್ರಸ್ತಾಪಿಸಿದ ಅವರು, ಕೋಲಾರ ಲೋಕಸಭಾ ಕ್ಷೇತ್ರದಿಂದ ಅವರು ಏಳು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಕೇಂದ್ರ ಸಚಿವರಾಗಿಯೂ ಕಾರ್ಯನಿರ್ವಹಿಸಿರುವ ಅವರಿಗೆ ಆಡಳಿತದ ಅಪಾರ ಅನುಭವವಿದೆ. ದೀರ್ಘಕಾಲದ ರಾಜಕೀಯ ಅನುಭವ ಹೊಂದಿರುವ ಇಂತಹ ಹಿರಿಯ ನಾಯಕರಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನ ದೊರೆತರೆ ಅದು ತಮ್ಮ ಭಾಗಕ್ಕೂ ಹೆಮ್ಮೆಯ ಸಂಗತಿ ಎಂದರು.
ಕುಮಾರಸ್ವಾಮಿ ಪರ ಹೇಳಿಕೆಯಿಂದ ಮುನಿಯಪ್ಪ ಪರ ಬ್ಯಾಟಿಂಗ್
ಇತ್ತೀಚಿನ ವರ್ಷಗಳಲ್ಲಿ ಜೆಡಿಎಸ್ ನ ಹಲವು ನಾಯಕರು ಹಾಗೂ ಶಾಸಕರು ಎಚ್.ಡಿ. ಕುಮಾರಸ್ವಾಮಿ ಅವರೇ ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸುತ್ತಿದ್ದ ಹಿನ್ನೆಲೆಯಲ್ಲಿ, ಅದೇ ಪಕ್ಷದ ಶಾಸಕ ಬಿ.ಎನ್.ರವಿಕುಮಾರ್ ಇದೀಗ ಕಾಂಗ್ರೆಸ್ ನ ಹಿರಿಯ ನಾಯಕ ಕೆ.ಎಚ್.ಮುನಿಯಪ್ಪ ಅವರ ಹೆಸರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಸ್ತಾಪಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ.
ನಾಯಕತ್ವ ಬದಲಾವಣೆಯ ಸಂದರ್ಭದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕು ಎಂದು ಹೇಳುತ್ತಿದ್ದವರ ಪೈಕಿ ಒಬ್ಬರಾಗಿದ್ದ ಬಿ.ಎನ್.ರವಿಕುಮಾರ್ ಅವರ ಈ ನಿಲುವು ಬದಲಾವಣೆ ಏಕೆ ಎಂಬ ಪ್ರಶ್ನೆಯೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಕೆ.ಎಚ್.ಮುನಿಯಪ್ಪ ಅವರ ಮೇಲಿನ ಅಭಿಮಾನ ಹಾಗೂ ಕ್ಷೇತ್ರದ ಆಶಯವನ್ನು ಅವರು ವ್ಯಕ್ತಪಡಿಸಿದ್ದಾರೆಯೇ ಅಥವಾ ಬದಲಾಗಿರುವ ರಾಜ್ಯ ರಾಜಕೀಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಹೊಸ ರಾಜಕೀಯ ಲೆಕ್ಕಾಚಾರವೇ ಎಂಬ ಚರ್ಚೆ ನಡೆದಿದೆ.
ಮುಖ್ಯಮಂತ್ರಿ ಬದಲಾವಣೆ ಕುರಿತು ಕಾಂಗ್ರೆಸ್ ಪಕ್ಷದ ಮಟ್ಟದಲ್ಲಿ ಈವರೆಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಸ್ವತಃ ಮುನಿಯಪ್ಪ ಅವರೂ ಪ್ರಸ್ತುತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಮುಂದುವರಿಯಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

