ನಗರದ ಪ್ರವಾಸಿ ಮಂದಿರ ರಸ್ತೆಯ ಮಾರಮ್ಮ ವೃತ್ತದ ಬಳಿ ಬುಧವಾರ ಸಮತಾ ಸೈನಿಕ ದಳ ಹಾಗೂ ಆರ್.ಪಿ.ಐ ಪಕ್ಷದ ತಾಲ್ಲೂಕು ಘಟಕದ ಕಚೇರಿಯ ಉದ್ಘಾಟನೆ ನೆರವೇರಿಸಿ ಆರ್‌ಪಿಐ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಮಾತನಾಡಿದರು.
ನಗರದ ಮಿನಿ ವಿಧಾನಸೌಧದ ಮುಂಭಾಗದಲ್ಲಿರುವಂತಹ ಸರ್ಕಾರಿ ಜಾಗದಲ್ಲಿಯೇ ಅಂಬೇಡ್ಕರ್ ಭವನಕ್ಕೆ ಸ್ಥಳ ನೀಡಬೇಕು. ಮುಂಬರುವ ಏಪ್ರಿಲ್ 14 ರ ಒಳಗೆ ಅಂಬೇಡ್ಕರ್ ಭವನ ನಿರ್ಮಾಣ ಮಾಡಿ ಉದ್ಘಾಟನೆ ನೆರವೇರಿಸಬೇಕು ಎಂದು ಅವರು ಒತ್ತಾಯಿಸಿದರು.
ತಾಲ್ಲೂಕು ಕೇಂದ್ರ ಸ್ಥಾನದಲ್ಲಿ ಈವರೆಗೂ ಅಂಬೇಡ್ಕರ್ ಭವನ ನಿರ್ಮಾಣ ಮಾಡದೇ ಇರುವುದು ದುರಂತ. ಕೂಡಲೇ ತಾಲ್ಲೂಕು ಆಡಳಿತ ಅಂಬೇಡ್ಕರ್ ಭವನಕ್ಕೆ ಸ್ಥಳ ಮಂಜೂರು ಮಾಡಬೇಕು ಮತ್ತು ಮುಂಬರುವ ಅಂಬೇಡ್ಕರ್ ಜಯಂತಿಯಂದು ಕಟ್ಟಡ ಉದ್ಘಾಟನೆ ಮಾಡಬೇಕು. ನಿರ್ಲಕ್ಷ್ಯ ವಹಿಸಿದರೆ ಸಮತಾ ಸೈನಿಕ ದಳದ ತಾಲ್ಲೂಕು ಘಟಕ ಸೇರಿದಂತೆ ಎಲ್ಲಾ ದಲಿತ ಸಂಘಟನೆಗಳು ಒಗ್ಗೂಡಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆಯಾದರೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಪೌರ ಕಾರ್ಮಿಕರ ಹಿತ ಕಾಯುವಲ್ಲಿ ಎಡವಿದೆ. ಕೂಡಲೇ ಕೊರೋನಾ ದಿಂದ ಮೃತಪಟ್ಟಂತಹ ಪೌರಕಾರ್ಮಿಕರ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರ ನೀಡಲು ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಸಮತಾ ಸೈನಿಕ ದಳದ ರಾಜ್ಯಪ್ರಧಾನ ಕಾರ್ಯದರ್ಶಿ ಲಯನ್ ಮಂಜುನಾಥ್, ಬೆಂಗಳೂರು ವಿಭಾಗಿಯ ಅಧ್ಯಕ್ಷ ಜಿಗಣಿ ನಾಗರಾಜ್, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಜಿ.ಸಿ ವೆಂಕಟರಮಣಪ್ಪ, ಜಿಲ್ಲಾ ಪ್ರಧಾನಕಾರ್ಯದರ್ಶಿ ಜೆ.ಅಶ್ವಥಪ್ಪ, ಉಪಾಧ್ಯಕ್ಷ ಈಶ್ವರಪ್ಪ, ಸಂಘಟನಾ ಕಾರ್ಯದರ್ಶಿ ವೆಂಕಟೇಶ್, ವಿದ್ಯಾರ್ಥಿ ಒಕ್ಕೂಟ ಅಧ್ಯಕ್ಷ ಹರಿಪ್ರಸಾದ್, ಬಾಗೇಪಲ್ಲಿ ತಾಲ್ಲೂಕು ಅಧ್ಯಕ್ಷ ಆಂಜಿನಪ್ಪ, ಶಿಡ್ಲಘಟ್ಟ ತಾಲ್ಲೂಕು ಅಧ್ಯಕ್ಷ ಈಧರೆ ಪ್ರಕಾಶ್, ಗೌರವಾಧ್ಯಕ್ಷ ಮುನಿಆಂಜಿನಪ್ಪ, ಪ್ರಧಾನಕಾರ್ಯದರ್ಶಿ ವಿಜಯಕುಮಾರ್, ಖಜಾಂಚಿ ವೆಂಕಟೇಶಪ್ಪ ಹಾಜರಿದ್ದರು.







