ಸಂತ ಕವಿ ಸರ್ವಜ್ಞ ರಾಷ್ಟ್ರ ಕಂಡ ಶ್ರೇಷ್ಠ ತತ್ವಜ್ಞಾನಿ, ತಮ್ಮ ತ್ರಿಪದಿಗಳ ಮೂಲಕ ವಚನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. “ಅನ್ನಕ್ಕೆ ಮಿಗಿಲಾದುದು ಯಾವುದು ಇಲ್ಲ, ಅನ್ನವೇ ಲೋಕಕ್ಕೆ ಪ್ರಾಣ ಸರ್ವಜ್ಞ”ಎಂದು ಅನ್ನದ ಮಹತ್ವ ಸಾರಿದ ಮೊದಲಿಗರು. ಪ್ರತಿಯೊಬ್ಬರು ಅವರ ವಚನಗಳು ಹಾಗೂ ತತ್ತ್ವಗಳು, ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅದನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು ಎಂದು ತಹಶೀಲ್ದಾರ್ ಎಂ.ಎನ್. ಸ್ವಾಮಿ ತಿಳಿಸಿದರು.
ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ತ್ರಿಪದಿ ಕವಿ ಶ್ರೀ ಸರ್ವಜ್ಞರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜನರ ಆಡುಭಾಷೆಯಲ್ಲೇ ತ್ರಿಪದಿಗಳನ್ನು ರಚಿಸಿ ಸಮಾಜದ ಅಂಕುಡೊಂಕುಗಳನ್ನು ತಿದ್ದಿದ ಸಮಾಜ ಸುಧಾರಕರು ಸರ್ವಜ್ಞ. ತ್ರಿಪದಿಗಳ ಮೂಲಕ ಕನ್ನಡ ಸಾಹಿತ್ಯ ಸಿರಿಗೆ ಅಮೂಲ್ಯ ಕೊಡುಗೆಯನ್ನು ನೀಡಿರುವ ಶ್ರೇಷ್ಠ ವಚನಕಾರರು ಅವರು. ಸರ್ವಜ್ಞ ರಚಿಸಿರುವ ತ್ರಿಪದಿಗಳು ತಮ್ಮ ಸರಳತೆ ಮತ್ತು ಪ್ರಾಸಬದ್ಧತೆಯಿಂದ ಜನಪ್ರಿಯವಾಗಿವೆ. ಈ ತ್ರಿಪದಿಗಳು ಮುಖ್ಯವಾಗಿ ನೈತಿಕ, ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳನ್ನು ಕುರಿತವು. ಇವುಗಳನ್ನು ನಾವು ಓದಲೇಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸರಸ್ವತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಆಯ್ದ ಸರ್ವಜ್ಞನ ವಚನಗಳನ್ನು ವಾಚಿಸಿದರು.
ತಾಲ್ಲೂಕು ಆರೋಗ್ಯಧಿಕಾರಿ ಡಾ.ವೆಂಕಟೇಶ್ ಮೂರ್ತಿ, ಗ್ರೇಡ್ -2 ತಹಶೀಲ್ದಾರ್ ಆಶಿಯಾ ಬೇಗ್, ದೈಹಿಕ ಶಿಕ್ಷಣ ಇಲಾಖೆಯ ಸಂಯೋಜಕ ದೇವೇಂದ್ರ, ಸಿಡಿಪಿಒ ನೌತಾಜ್, ಬಿಸಿಎಂ ಇಲಾಖೆಯ ನಾರಾಯಣಪ್ಪ, ಶಿಕ್ಷಕ ನಾರಾಯಣಸ್ವಾಮಿ ಹಾಜರಿದ್ದರು.