Sidlaghatta : ಮಣ್ಣನ್ನು ಉಳಿಸುವ (Save Soil) ಕಾರ್ಯ ಎಲ್ಲರಿಂದಲೂ ಆಗಬೇಕಿದೆ. ಈಗಾಗಲೇ ಉತ್ತಮ ಮಣ್ಣಿನ ಕೊರತೆ ಇಡೀ ಜಗತ್ತಿಗೆ ಕಾಡುತ್ತಿದೆ. ಅಲ್ಲದೇ ಸದ್ಯ ಇರುವ ಮಣ್ಣು ಕಡಿಮೆಯಾಗುತ್ತ ಬರುತ್ತಿದ್ದು, ಇದನ್ನು ಉಳಿಸಿಕೊಳ್ಳುವ ಅಗತ್ಯತೆಯ ಜೊತೆ ಉತ್ತಮ ಮಣ್ಣಿನ ಸಂರಕ್ಷಣೆ ದಾರಿ ಹುಡುಕಬೇಕಿದೆ. ಹಾಗಾದ್ರೆ ಮಾತ್ರ ಮುಂದಿನ ದಿನಗಳಲ್ಲಿ ಆಹಾರಕ್ಕೆ ಉಂಟಾಗುವ ಸಮಸ್ಯೆಯನ್ನು ತಡೆಗಟ್ಟಬಹುದು ಎಂದು ಮಣ್ಣು ಉಳಿಸಿ ಆಂದೋಲನದ ಭಾಗವಾಗಿ ಪಾದಯಾತ್ರೆ ಕೈಗೊಂಡಿರುವ ಯುವಕ ಯಶಸ್ (Yashas) ತಿಳಿಸಿದರು.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನಲ್ಲಿರುವ ಊರು ಉಡುಗಣಿಯಿಂದ ಕೊಯಮತ್ತೂರಿನವರೆಗೂ 1008 ಕಿ.ಮೀ ಬರಿಗಾಲಿನಲ್ಲಿ ಪಾದಯಾತ್ರೆ ಕೈಗೊಂಡಿರುವ ಯುವಕ ಯಶಸ್ ಶಿಡ್ಲಘಟ್ಟದ ಮೂಲಕ ಹಾದು ಹೋಗುವ ಸಂದರ್ಭದಲ್ಲಿ ಮಾತನಾಡಿದರು.
ನಾನೊಬ್ಬ ಸ್ವಯಂಸೇವಕ ಮತ್ತು ಈಷಾ ಫೌಂಡೇಷನ್ (Isha Foundation) ಅಭಿಮಾನಿ. ಭೂಮಿಯ ಮತ್ತು ಮಣ್ಣಿನ ಸಂರಕ್ಷಣೆಯ ಸಲುವಾಗಿ ಸದ್ಗುರು ಜಗ್ಗಿ ವಾಸುದೇವ್ (Sadhguru Jaggi Vasudev) ಮಣ್ಣು ಉಳಿಸಿ ಅಭಿಯಾನವನ್ನು ಕೈಗೊಂಡಿದ್ದಾರೆ. ಲಂಡನ್‌ನಿಂದ ಭಾರತಕ್ಕೆ ಸದ್ಗುರುಗಳ ಬೈಕ್ ಪ್ರಯಾಣ ಪ್ರಾರಂಭಗೊಂಡಿದ್ದು, 100 ದಿನಗಳಲ್ಲಿ 30 ಸಾವಿರ ಕಿ.ಮೀ ಏಕಾಂಗಿ ಪ್ರಯಾಣ ಕೈಗೊಂಡಿದ್ದಾರೆ. ಈಷಾ ಫೌಂಡೇಷನ್ ರವರು ಜಾಗತಿಕವಾಗಿ ಹಮ್ಮಿಕೊಂಡಿರುವ ಮಣ್ಣು ಉಳಿಸಿ ಆಂದೋಲನದ ಭಾಗವಾಗಿ ನಾನು 1008 ಕಿ.ಮೀ ಪಾದಯಾತ್ರೆ ಕೈಗೊಂಡಿದ್ದೇನೆ. ಶಿಕಾರಿಪುರದಿಂದ ಪ್ರಾರಂಭವಾದ ನನ್ನ ಯಾತ್ರೆ ಪ್ರಾರಂಭವಾಗಿ 21 ದಿನಗಳಾದವು. ಶಿಕಾರಿಪುರ, ಶಿವಮೊಗ್ಗ, ಬಾಣಾವರ, ಅರಸೀಕೆರೆ, ತರೀಕೆರೆ ಮುಖಾಂತರ ಸಾಗಿ ಬಂದು ಇದೀಗ ಚಿಕ್ಕಬಳ್ಳಾಪುರ ಜಿಲ್ಲೆಯ ಮೂಲಕ ಹಾದು ಹೋಗುತ್ತಿರುವೆ. ಜನರ ಸ್ಪಂದನೆ ಸಕಾರಾತ್ಮಕವಾಗಿದೆ. ಜಗತ್ತಿನ ಭೂಮಿಯ ಸಾರವನ್ನು ಉಳಿಸಿಕೊಳ್ಳಲು ಮಾಡುತ್ತಿರುವ ಪ್ರಯತ್ನವಿದು. ಎಲ್ಲರೂ ಕೈಜೋಡಿಸಿ ಎಂದರು.