Sidlaghatta : ಗೌರಿ–ಗಣೇಶ ಹಬ್ಬದ ಸಂಭ್ರಮದ ನಡುವೆ ಸಮಾಜದ ಆರೋಗ್ಯ, ಮಕ್ಕಳ ಬೆಳವಣಿಗೆ ಮತ್ತು ಶಿಕ್ಷಣದ ಜವಾಬ್ದಾರಿಯನ್ನು ಹೊತ್ತು ನಿಸ್ವಾರ್ಥವಾಗಿ ದುಡಿಯುತ್ತಿರುವ ಮಹಿಳಾ ಕಾರ್ಯಕರ್ತೆಯರಿಗೆ ಗೌರವ ಸಲ್ಲಿಸಿದ ಕ್ಷಣ ಭಾನುವಾರ ಭಾವುಕತೆಗೆ ಸಾಕ್ಷಿಯಾಯಿತು.
In English: MLA B.N. Ravikumar honoured Anganwadi workers, ASHA workers and midday-meal cooks from across Sidlaghatta constituency with a “Seva Soubhagya – Baginotsava” at Handiganala’s KV Bhavan for Gowri-Ganesha festival, in an emotional ceremony where taluk panchayat EO Hemavathi moved the hall to tears speaking about the tradition of a daughter’s parental home never growing distant.
ತಾಲ್ಲೂಕಿನ ಹೊರವಲಯದ ಹಂಡಿಗನಾಳದ ಕೆ.ವಿ. ಭವನದಲ್ಲಿ ಶಿಡ್ಲಘಟ್ಟ ಕ್ಷೇತ್ರದ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಅಕ್ಷರದಾಸೋಹ ಅಡುಗೆ ಸಹಾಯಕಿಯರಿಗೆ ಶಾಸಕ ಬಿ.ಎನ್. ರವಿಕುಮಾರ್ ಅವರ ವತಿಯಿಂದ ಗೌರಿ–ಗಣೇಶ ಹಬ್ಬದ ಪ್ರಯುಕ್ತ “ಸೇವಾ ಸೌಭಾಗ್ಯ – ಬಾಗಿನೋತ್ಸವ” ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಬಿ.ಎನ್. ರವಿಕುಮಾರ್, “ಬಾಗಿನ ನೀಡುವ ಕಾರ್ಯಕ್ರಮವನ್ನು ಯಾವುದೇ ರಾಜಕೀಯ ಲಾಭ ಅಥವಾ ಸ್ವಾರ್ಥದ ಉದ್ದೇಶದಿಂದ ಆಯೋಜಿಸಿಲ್ಲ. ಸಮಾಜದ ಒಳಿತಿಗಾಗಿ ಪ್ರತಿನಿತ್ಯ ನಿಸ್ವಾರ್ಥವಾಗಿ ದುಡಿಯುತ್ತಿರುವ ತಾಯಂದಿರ ಸೇವೆಯನ್ನು ಗುರುತಿಸಿ ಗೌರವಿಸುವುದು ಇದರ ಉದ್ದೇಶ” ಎಂದು ಹೇಳಿದರು.
“ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳ ಆರೋಗ್ಯ ಮತ್ತು ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ. ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಆರೋಗ್ಯ ಇಲಾಖೆಗೆ ಅಗತ್ಯ ಮಾಹಿತಿಯನ್ನು ತಲುಪಿಸುತ್ತಿದ್ದಾರೆ. ಅಕ್ಷರದಾಸೋಹದ ಅಡುಗೆ ಸಹಾಯಕಿಯರು ಪ್ರತಿದಿನ ಶಾಲಾ ಮಕ್ಕಳಿಗೆ ಬಿಸಿಯೂಟ ಸಿದ್ಧಪಡಿಸಿ ನೀಡುತ್ತಿದ್ದಾರೆ. ಇವರ ಸೇವೆ ಸಮಾಜದ ಮುಂದಿನ ಪೀಳಿಗೆಯ ಆರೋಗ್ಯ ಮತ್ತು ಭವಿಷ್ಯಕ್ಕೆ ಮಹತ್ವದ್ದಾಗಿದೆ” ಎಂದು ಶ್ಲಾಘಿಸಿದರು.
“ತಾಲ್ಲೂಕಿನ ಅಭಿವೃದ್ಧಿಗಾಗಿ ಸದಾ ನಿಮ್ಮೊಂದಿಗೆ ಇರುತ್ತೇನೆ. ಜನರ ಸಮಸ್ಯೆಗಳನ್ನು ಕೇವಲ ಅಧಿಕಾರಿಗಳ ಮೂಲಕ ತಿಳಿದುಕೊಳ್ಳುವುದಲ್ಲದೆ, ಸಾಧ್ಯವಾದಷ್ಟು ನೇರವಾಗಿ ಆಲಿಸಿ ಪರಿಹರಿಸಲು ಪ್ರಯತ್ನಿಸುತ್ತೇನೆ. ಗ್ರಾಮೀಣ ಪ್ರದೇಶಗಳಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆ ಹಾಗೂ ಬರದ ಸಂಕಷ್ಟವನ್ನು ಆದಷ್ಟು ಬೇಗ ನಿವಾರಿಸಲು ಶ್ರಮಿಸಲಾಗುವುದು” ಎಂದರು.
“ತವರು ಎಂದಿಗೂ ದೂರವಾಗುವುದಿಲ್ಲ…”:
ತಾಲ್ಲೂಕು ಪಂಚಾಯಿತಿ ಇಒ ಆರ್.ಹೇಮಾವತಿ ಅವರು ಮಾತನಾಡುವಾಗ ಗದ್ಗದಿತರಾದರು, “ಮದುವೆಯಾಗಿ ಗಂಡನ ಮನೆ ಸೇರಿದ ಹೆಣ್ಣುಮಕ್ಕಳಿಗೂ ತವರು ಮನೆಯ ಪ್ರೀತಿ, ಆಸರೆ ಮತ್ತು ಸಂಬಂಧ ಸದಾ ಉಳಿಯಬೇಕು ಎಂಬ ಸಂದೇಶವನ್ನು ಗೌರಿ ಹಬ್ಬ ಸಾರುತ್ತದೆ. ವರ್ಷಕ್ಕೊಮ್ಮೆ ತವರು ಮನೆಯವರು ಮಗಳನ್ನು ಹುಡುಕಿಕೊಂಡು ಬಂದು, “ನಾವು ನಿನ್ನೊಂದಿಗೆ ಇದ್ದೇವೆ” ಎಂಬ ಧೈರ್ಯ ತುಂಬುತ್ತಾರೆ. ಅರಿಶಿನ, ಕುಂಕುಮ, ಸೀರೆ, ಬಳೆ ಸೇರಿದಂತೆ ಮುತ್ತೈದೆಗೆ ಅಗತ್ಯವಾದ ಮಂಗಳಕರ ವಸ್ತುಗಳನ್ನು ಬಾಗಿನವಾಗಿ ನೀಡಿ ಹರಸುವುದು ನಮ್ಮ ಸಂಪ್ರದಾಯ” ಎಂದು ಭಾವುಕವಾಗಿ ನುಡಿದರು.
ಸೇವಾ ಕಾರ್ಯಕರ್ತೆಯರ ನಿಸ್ವಾರ್ಥ ಸೇವೆ, ಗೌರಿ ಹಬ್ಬದ ಸಂದರ್ಭದಲ್ಲಿ ತವರು ಮನೆಯವರು ಹೆಣ್ಣುಮಕ್ಕಳಿಗೆ ನೀಡುವ ಪ್ರೀತಿ ಹಾಗೂ ಕಾರ್ಯಕ್ರಮದ ಹಿಂದಿನ ಮಾನವೀಯ ಕಾಳಜಿಯನ್ನು ನೆನಪಿಸಿಕೊಂಡ ಅವರು ಭಾವುಕರಾಗಿ ಕಣ್ಣೀರಿಟ್ಟರು. ಅವರ ಕಣ್ಣುಗಳಿಂದ ಜಾರಿದ ಕಣ್ಣೀರ ಹನಿಗಳು ವೇದಿಕೆಯ ಮೇಲಿದ್ದವರನ್ನಷ್ಟೇ ಅಲ್ಲ, ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಹಿಳೆಯರನ್ನೂ ಭಾವುಕರನ್ನಾಗಿಸಿದವು. ಕೆಲಕಾಲ ಸಭಾಂಗಣದಲ್ಲಿ ಮೌನ ಆವರಿಸಿತು.
“ಅಧಿಕಾರಿಯಾಗಿ ಹಲವು ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಆದರೆ ಮಹಿಳೆಯರ ಸೇವೆಯನ್ನು ಗುರುತಿಸಿ, ಅವರನ್ನು ಕುಟುಂಬದ ಸದಸ್ಯರಂತೆ ಗೌರವಿಸುವ ಇಂತಹ ಕಾರ್ಯಕ್ರಮ ಅಪರೂಪ. ಇದು ಕೇವಲ ಬಾಗಿನ ನೀಡುವ ಕಾರ್ಯಕ್ರಮವಲ್ಲ; ಸಮಾಜಕ್ಕಾಗಿ ದುಡಿಯುತ್ತಿರುವ ಮಹಿಳೆಯರಿಗೆ ನೀಡುತ್ತಿರುವ ಗೌರವ” ಎಂದು ಹೇಮಾವತಿ ಹೇಳಿದರು.
ತಹಶೀಲ್ದಾರ್ ಗಗನಸಿಂಧು, ನಗರಸಭೆ ಪೌರಾಯುಕ್ತೆ ಅಮೃತ, ಸಿ.ಡಿ.ಪಿ.ಒ ವಿದ್ಯಾ ವಸ್ತ್ರದ್, ಚಿಮುಲ್ ನಿರ್ದೇಶಕರಾದ ಬಂಕ್ ಮುನಿಯಪ್ಪ, ಹುಜಗೂರು ರಾಮಣ್ಣ, ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಕೆ.ಎನ್.ಸುಬ್ಬಾರೆಡ್ಡಿ, ಕೆ.ಲಕ್ಷ್ಮೀನಾರಾಯಣರೆಡ್ಡಿ, ಮೇಲೂರು ಮಂಜುನಾಥ್, ತಾದೂರು ರಘು ಹಾಜರಿದ್ದರು.

