Sidlaghatta : ಹಲವು ವರ್ಷಗಳಿಂದ ಅಭಿವೃದ್ಧಿಯಿಂದ ವಂಚಿತವಾಗಿದ್ದ ನಗರದ ವಾಸವಿ ರಸ್ತೆಗೆ ಸುಮಾರು ಒಂದು ಕೋಟಿ ರೂ ವೆಚ್ಚದಲ್ಲಿ ಸಿಮೆಂಟ್ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಭಾನುವಾರ ಸಂಜೆ “ವಾಸವಿ ರಸ್ತೆ ಹಬ್ಬ” ಆಚರಿಸಿ ಸಂಭ್ರಮಿಸಿದರು.
In English: Residents of Sidlaghatta’s Vasavi Road celebrated a “road festival” after the long-neglected street got a ₹1 crore concrete road and underground drainage upgrade, with MLA B.N. Ravikumar inaugurating the road amid a ceremonial procession, temple pujas, and a community meal.
ವಾಸವಿ ಬೀದಿಯ ನಿವಾಸಿಗಳು ಹಾಗೂ ವ್ಯಾಪಾರಸ್ಥರು ಒಗ್ಗೂಡಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಬಿ.ಎನ್. ರವಿಕುಮಾರ್ ರಸ್ತೆ ಉದ್ಘಾಟಿಸಿದರು. ಮಹಿಳೆಯರು ಆರತಿ ಬೆಳಗಿ, ಮಂಗಳವಾದ್ಯದೊಂದಿಗೆ ಶಾಸಕರನ್ನು ಸ್ವಾಗತಿಸಿದರು. ಬಳಿಕ ಕನ್ನಿಕಾಪರಮೇಶ್ವರಿ ಹಾಗೂ ವೆಂಕಟರಮಣಸ್ವಾಮಿ ದೇವಾಲಯಗಳಲ್ಲಿ ಪೂಜೆ ಸಲ್ಲಿಸಲಾಯಿತು.
ನಂತರ ವಾಸವಿ ಚತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಸ್ತೆ ಅಭಿವೃದ್ಧಿಪಡಿಸಿದ್ದಕ್ಕಾಗಿ ಸ್ಥಳೀಯರು ಕೃತಜ್ಞತೆ ಸಲ್ಲಿಸಿದರು. ಸಾರ್ವಜನಿಕರಿಗೆ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ರಸ್ತೆ ಅಭಿವೃದ್ಧಿ ಕಾಮಗಾರಿಯಡಿ ಸಿಮೆಂಟ್ ಕಾಂಕ್ರೀಟ್ ರಸ್ತೆ ನಿರ್ಮಿಸುವುದರ ಜತೆಗೆ ಒಳಚರಂಡಿ ಪೈಪ್ ಲೈನ್ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಕಾಮಗಾರಿ ಗುಣಮಟ್ಟದಿಂದ ಕೂಡಿರುವುದಕ್ಕೆ ಸ್ಥಳೀಯರು ಸಂತಸ ವ್ಯಕ್ತಪಡಿಸಿದರು.
“ನಗರದ ಅಭಿವೃದ್ಧಿಗೆ ಹಲವು ಯೋಜನೆ”:
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಬಿ.ಎನ್. ರವಿಕುಮಾರ್, ನಗರದ ಸಮಗ್ರ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.
ರಾಮಸಮುದ್ರ ಕೆರೆಯಿಂದ ನಗರಕ್ಕೆ ಕುಡಿಯುವ ನೀರು ಪೂರೈಸುವ ಅಮೃತ್–2 ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ. ಸುಮಾರು ₹93 ಕೋಟಿ ವೆಚ್ಚದ ಯೋಜನೆಯಡಿ ತಾಲ್ಲೂಕಿನ ಸುಮಾರು 56 ಸಾವಿರ ಕುಟುಂಬಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ನಗರದ ಮುಂದಿನ 40 ವರ್ಷಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಸುಮಾರು ₹70 ಕೋಟಿ ವೆಚ್ಚದಲ್ಲಿ ಒಳಚರಂಡಿ (ಯುಜಿಡಿ) ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದರಿಂದ ನಗರದ ಸುಮಾರು 12,650 ಮನೆಗಳಿಗೆ ಯುಜಿಡಿ ಸಂಪರ್ಕ ಕಲ್ಪಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಮುಸ್ಲಿಂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಪ್ರದೇಶಗಳಲ್ಲಿಯೂ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಸುಮಾರು ₹5 ಕೋಟಿ ವೆಚ್ಚದಲ್ಲಿ ನಾಲ್ಕು ರಸ್ತೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. 25, 26 ಹಾಗೂ 28ನೇ ವಾರ್ಡ್ಗಳಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಂದ ದೊರೆತ ಅನುದಾನ ಸೇರಿದಂತೆ ವಿವಿಧ ಅನುದಾನಗಳಡಿ ಸುಮಾರು ₹3 ಕೋಟಿ ಮೊತ್ತದ ಕಾಮಗಾರಿಗಳು ಶೀಘ್ರದಲ್ಲೇ ಆರಂಭವಾಗಲಿವೆ ಎಂದು ಹೇಳಿದರು.
ಚಿಮುಲ್ ನಿರ್ದೇಶಕರಾದ ಬಂಕ್ ಮುನಿಯಪ್ಪ, ಹುಜುಗೂರು ರಾಮಣ್ಣ, ಎಸ್.ಎನ್. ರಮೇಶ್, ಅನಿಲ್ ಕುಮಾರ್, ಲಕ್ಷ್ಮಿನಾರಾಯಣ, ಮನೋಹರ್, ಮಹೇಶ್, ಟಿಎಸ್ಕೆಎಲ್ ಬಾಬು, ಎಸ್.ಎಸ್. ನಾಗರಾಜ್, ವಾಸುದೇವರಾವ್, ಎ.ಎಸ್. ರವಿ, ಶ್ರೀನಿವಾಸ್, ವಿಜಯಕುಮಾರ್, ಗೋಪಾಲ್, ಡಿ.ಎಂ. ಜಗದೀಶ್ವರ್, ಜೆ.ವಿ. ಸುರೇಶ್ ಉಪಸ್ಥಿತರಿದ್ದರು.

