Sidlaghatta : ಕೇಂದ್ರ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ನಿರ್ದೇಶನದಂತೆ ಏಳನೇ ಸಣ್ಣ ನೀರಾವರಿ ಗಣತಿಯನ್ನು ತಾಲ್ಲೂಕಿನಲ್ಲಿ ಮೊಬೈಲ್ ಆಪ್ ಮೂಲಕ ಹಮ್ಮಿಕೊಳ್ಳಲಾಗಿದ್ದು, ಅಧಿಕಾರಿಗಳು ನಿಖರವಾದ ಅಂಕಿ-ಅಂಶಗಳನ್ನು ಸಂಗ್ರಹಿಸಬೇಕು,” ಎಂದು ತಹಶೀಲ್ದಾರ್ ಎನ್.ಗಗನಸಿಂಧು ತಿಳಿಸಿದರು.
ತಾಲ್ಲೂಕಿನ ಚಿಕ್ಕದಾಸರಹಳ್ಳಿಯ ಕುಂಟೆಯ ಬಳಿ ಏಳನೇ ಸಣ್ಣ ನೀರಾವರಿ ಗಣತಿ ಕಾರ್ಯಕ್ಕೆ ಅಧಿಕೃತವಾಗಿ ಚಾಲನೆ ನೀಡಿ ಅವರು ಮಾತನಾಡಿದರು. ಈ ಗಣತಿಯು ಜಲಮೂಲಗಳ ಸಂರಕ್ಷಣೆ ಮತ್ತು ಭವಿಷ್ಯದ ನೀರಾವರಿ ಯೋಜನೆಗಳ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ಗಣತಿಯ ಉದ್ದೇಶ ಮತ್ತು ಪ್ರಯೋಜನಗಳು: ತಹಶೀಲ್ದಾರ್ ಅವರು ಗಣತಿಯ ಮಹತ್ವದ ಬಗ್ಗೆ ವಿವರಿಸುತ್ತಾ, “ನೀರಿನಾಸರೆಗಳ ಸಮಗ್ರ ಅಂಕಿ-ಅಂಶ ಸಂಗ್ರಹಣೆಯಿಂದ ನೀರಿನ ಸದ್ಬಳಕೆ, ಅಂತರ್ಜಲ ಪ್ರಮಾಣದ ಅಂದಾಜು ಮತ್ತು ಹೊಸ ನೀತಿ ನಿರೂಪಣೆ ಮಾಡಲು ಸಾಧ್ಯವಾಗುತ್ತದೆ. ಮುಖ್ಯವಾಗಿ ಒತ್ತುವರಿಯಾಗಿರುವ ಕೆರೆ-ಕುಂಟೆಗಳನ್ನು ಗುರುತಿಸಿ, ಅವುಗಳನ್ನು ತೆರವುಗೊಳಿಸಲು ಈ ಗಣತಿ ಸಹಕಾರಿಯಾಗಲಿದೆ, ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತದೆ,” ಎಂದರು.

ಡಿಜಿಟಲ್ ಗಣತಿ: ಈ ಬಾರಿ ಗಣತಿ ಕಾರ್ಯವು ಸಂಪೂರ್ಣ ಡಿಜಿಟಲ್ ಆಗಿದ್ದು, ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಕಂದಾಯ ನಿರೀಕ್ಷಕರು ಸ್ಥಳದಲ್ಲೇ ಮೊಬೈಲ್ ಆಪ್ ಮೂಲಕ ಮಾಹಿತಿ ಅಪ್‌ಲೋಡ್ ಮಾಡಲಿದ್ದಾರೆ. ಇದಕ್ಕಾಗಿ ಸಿಬ್ಬಂದಿಗೆ ಈಗಾಗಲೇ ಸೂಕ್ತ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜಸ್ವ ನಿರೀಕ್ಷಕರಾದ ಶಶಿಕುಮಾರ್, ವೇಣುಗೋಪಾಲ್, ಗ್ರಾಮ ಲೆಕ್ಕಿಗರಾದ ರೇವಣ್ಣಸಿದ್ದಪ್ಪ, ನಗದಾರ್, ತ್ರಿಮೂರ್ತಿ, ದೇವರಾಜ್ ಸೇರಿದಂತೆ ಹಲವು ಕಂದಾಯ ಅಧಿಕಾರಿಗಳು ಹಾಜರಿದ್ದರು.








