Appegowdanahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಕೃಷಿ ಇಲಾಖೆ ಮತ್ತು ಕಾಗತಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರ ( ಡಿ.ಎ.ಟಿ.ಸಿ) ಸಹಯೋಗದಲ್ಲಿ ನೈಸರ್ಗಿಕ ಕೃಷಿಯ ಬಗ್ಗೆ ರೈತರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಕಾಗತಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕಿ ಚೇತನಾ ಮಾತನಾಡಿ, ಭೂಮಿಗೆ ಅತಿ ಹೆಚ್ಚು ರಾಸಾಯನಿಕ ಗೊಬ್ಬರಗಳನ್ನು ಸುರಿದು ಭೂಮಿಯ ಫಲವತ್ತತೆಯನ್ನು ಹಾಳು ಮಾಡುವುದಲ್ಲದೆ, ಅದರಿಂದ ಬೆಳೆದ ತರಕಾರಿ, ಹಣ್ಣುಗಳನ್ನು ತಿಂದು ನಾವು ನಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ಹಾಗಾಗಿ ಎಲ್ಲಾ ರೈತರು ನೈಸರ್ಗಿಕ ಕೃಷಿಯನ್ನು ಮಾಡಬೇಕೆಂದು ಮನವಿ ಮಾಡಿದರು.
ಸಂಪನ್ಮೂಲ ವ್ಯಕ್ತಿ ರಾಧಾಕೃಷ್ಣ ಮಾತನಾಡಿ, ರೈತರು ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಿ ಸಾವಯವ ಕೃಷಿಯತ್ತ ಗಮನ ಹರಿಸಿದರೆ ಬೆಳೆಗಳಿಗೆ ತಗುಲಬಹುದಾದ ರೋಗಗಳನ್ನು ತಡೆಗಟ್ಟಬಹುದಲ್ಲದೆ ಭೂಮಿಯ ಫಲವತ್ತತೆಯನ್ನು ಕಾಪಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿ, ನೈಸರ್ಗಿಕ ಕೃಷಿಯಲ್ಲಿ ಪ್ರಮುಖವಾಗಿ ಜೀವಾಮೃತ, ಬೀಜಾಮೃತ, ಪಂಚಗವ್ಯ, ಹಸಿರೆಲೆ ಗೊಬ್ಬರಗಳ ಮಹತ್ವ, ಮಣ್ಣು ಪರೀಕ್ಷೆ, ಪರಿಸರ ಸ್ನೇಹಿ ಕೀಟ ಹಾಗೂ ರೋಗ ನಿರ್ವಹಣೆಯ ಬಗ್ಗೆ ವಿವರಿಸಿದರು.
ಕೃಷಿ ಅಧಿಕಾರಿ ಸುನಿಲ್ ಕುಮಾರ್ ಮಾತನಾಡಿ, ಇಲಾಖೆಯ ಯೋಜನೆಗಳಾದ ಪಿ.ಎಂ.ಕಿಸಾನ್, ಕೃಷಿ ಯಂತ್ರೋಪಕರಣ, ಅಟಲ್ ಭೂಜಲ ಯೋಜನೆ, ಕೃಷಿ ಭಾಗ್ಯ, ಬೆಳೆ ಸಮೀಕ್ಷೆ, ಬೆಳೆ ವಿಮೆ ಮತ್ತಿತರ ಯೋಜನೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. ಡಿ.ಎ.ಪಿ ರಸಗೊಬ್ಬರದ ಬದಲಾಗಿ ಕಾಂಪ್ಲೆಕ್ಸ್ ಗೊಬ್ಬರವನ್ನು ಬಳಸಲು ರೈತರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ರೈತರಾದ ತ್ಯಾಗರಾಜು, ಮುನೀಂದ್ರ, ಗೋವಿಂದರಾಜು, ಬಚ್ಚರೆಡ್ಡಿ, ಶ್ರೀರಾಮ್, ನಾರಾಯಣಸ್ವಾಮಿ, ಹರೀಶ್, ವೆಂಕಟೇಶ್, ಅನಿಲ್, ಡಿ.ಮುನಿನಾರಾಯಣ, ವೇಣುಗೋಪಾಲ್, ಮುನಿಯಪ್ಪ, ರಾಘವೇಂದ್ರ, ಆವಲರೆಡ್ಡಿ, ಗೋವಪ್ಪ ಹಾಜರಿದ್ದರು.