Sidlaghatta : ಜೂನ್ 19 ರಂದು ಜಿಲ್ಲೆಯ ನಂದಿಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ತಾಲ್ಲೂಕಿನ ಅಭಿವೃದ್ಧಿಗಾಗಿ ಹೆಚ್ಚಿನ ಸಹಕಾರ ಸಿಗಬಹುದೆಂದು ನಿರೀಕ್ಷೆಯನ್ನು ಇಟ್ಟುಕೊಂಡಿದ್ದು, ಹಲವು ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಲಾಗಿದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ಹೇಳಿದರು.
ಮೇಲೂರು ಗ್ರಾಮದ ನಿವಾಸದಲ್ಲಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ತುರ್ತಾಗಿ 100 ಹಾಸಿಗೆಗಳ ಸಾಮರ್ಥ್ಯದ ಸುಸಜ್ಜಿತ ಆಸ್ಪತ್ರೆ, ರಸ್ತೆಗಳ ನಿರ್ಮಾಣಕ್ಕೆ ಅನುದಾನ ನೀಡಬೇಕು, ಈಗಾಗಲೇ ಎಚ್.ಎನ್.ವ್ಯಾಲಿ ಯೋಜನೆಯಡಿ ಜಿಲ್ಲೆಯ ಕೆರೆಗಳಿಗೆ ಹರಿಯುತ್ತಿರುವ ನೀರನ್ನು ಮೂರನೇ ಹಂತದಲ್ಲಿ ಶುದ್ಧೀಕರಣ ಮಾಡಿ ಹರಿಸಬೇಕು, ಎತ್ತಿನಹೊಳೆ ಯೋಜನೆಯನ್ನು ಶೀಘ್ರವಾಗಿ ಅನುಷ್ಟಾನಗೊಳಿಸಿ, ಬಯಲುಸೀಮೆ ಭಾಗದಲ್ಲಿನ ಕೆರೆಗಳನ್ನು ತುಂಬಿಸುವ ಮೂಲಕ ನೀರಿನ ಕೊರತೆಯನ್ನು ನೀಗಿಸಬೇಕು ಎಂದು ಸರ್ಕಾರಕ್ಕೆ ಮನವಿ ನೀಡಲಾಗಿದೆ.
ಶಿಡ್ಲಘಟ್ಟ ತಾಲ್ಲೂಕು ಹಿಂದುಳಿದ ತಾಲ್ಲೂಕಾಗಿದ್ದು, ಹಿಂದಿನಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಇಂತಹ ಹಿಂದುಳಿದಿರುವ ತಾಲ್ಲೂಕಿಗೆ ಹೆಚ್ಚಿನ ಅನುದಾನ ಸಿಗಬೇಕು ಎನ್ನುವುದು ನನ್ನ ಬೇಡಿಕೆಯಾಗಿದೆ. ಶಿಕ್ಷಣ, ಆರೋಗ್ಯ, ನೀರಾವರಿ, ಕೃಷಿ ಕ್ಷೇತ್ರಗಳು ಗಣನೀಯವಾಗಿ ಅಭಿವೃದ್ಧಿ ಕಾಣಬೇಕು, ರೈತಾಪಿ ವರ್ಗದವರು ಆರ್ಥಿಕವಾಗಿ ಸಬಲರಾಗಬೇಕು, ಎನ್ನುವ ಉದ್ದೇಶದಿಂದ ಕೆಲಸ ಮಾಡಲಾಗುತ್ತಿದೆ. ಬಹಷ್ಟು ಬೇಡಿಕೆಗಳಿದ್ದರೂ, ಬೇರೆ ಕ್ಷೇತ್ರಗಳಿಗೂ ಅನುಕೂಲವಾಗಬೇಕು ಎನ್ನುವ ಉದ್ದೇಶದಿಂದ ತೀರಾ ಅನಿವಾರ್ಯವಾಗಿರುವ ಬೇಡಿಕೆಗಳನ್ನು ಮಾತ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.
For Daily Updates WhatsApp ‘HI’ to 7406303366
