
Sidlaghatta : ಹನ್ನೆರಡನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರು ಹುಟ್ಟುಹಾಕಿದ ಪ್ರಜಾಪ್ರಭುತ್ವದ ಪರಿಕಲ್ಪನೆಯ “ಅನುಭವ ಮಂಟಪ”ವು ಜಾತಿ, ಮತ, ಲಿಂಗ ಮತ್ತು ವರ್ಗದ ಭೇದವಿಲ್ಲದೆ ಎಲ್ಲರಿಗೂ ಮುಕ್ತವಾಗಿದ್ದ ಒಂದು ಚರ್ಚಾ ವೇದಿಕೆಯಾಗಿತ್ತು. ಇಲ್ಲಿ ಸಮಾಜದ ಕೆಳಸ್ತರದ ಕಾಯಕಜೀವಿಗಳಿಂದ ಹಿಡಿದು ಮೇಲ್ವರ್ಗದವರವರೆಗೆ ಎಲ್ಲರೂ ಸಮಾನವಾಗಿ ಕುಳಿತು ಸಾಮಾಜಿಕ, ಧಾರ್ಮಿಕ ಮತ್ತು ದಾರ್ಶನಿಕ ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದರು. ಇದುವೇ ಭಾರತದ ಪ್ರಥಮ ಸಂಸತ್ತು ಅಥವಾ ಆಧ್ಯಾತ್ಮಿಕ ಸಂಸತ್ತು ಎಂದು ಶಾಸಕ ಬಿ.ಎನ್. ರವಿಕುಮಾರ್ ತಿಳಿಸಿದರು.
ತಾಲ್ಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಬಸವೇಶ್ವರ ಸೇವಾ ಅಭಿವೃದ್ಧಿ ಟ್ರಸ್ಟ್ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಸಹಯೋಗದಲ್ಲಿ ಸೋಮವಾರ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಬಸವಣ್ಣನವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ದುಡಿಯಬೇಕು ಮತ್ತು ಆ ದುಡಿಮೆಯಲ್ಲಿ ದೈವತ್ವವನ್ನು ಕಾಣಬೇಕು ಎಂಬ ತತ್ವವನ್ನು ಅವರು ಸಾರಿದರು. ಇದು ಸೋಮಾರಿತನವನ್ನು ವಿರೋಧಿಸಿ, ಆರ್ಥಿಕ ಸಮಾನತೆಗೆ ಅಡಿಪಾಯ ಹಾಕಿತು. ತನ್ನ ದುಡಿಮೆಯ ಫಲವನ್ನು ಸಮಾಜದ ಹಿತಕ್ಕಾಗಿ ಹಂಚಿಕೊಳ್ಳುವ ವ್ಯವಸ್ಥೆಯನ್ನು ಅವರು ಜಾರಿಗೆ ತಂದರು. ಇದು ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸುವ ಹಂಚಿಕೆಯ ಸಂಸ್ಕೃತಿಯಾಗಿತ್ತು. ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಕನ್ನಡ ಭಾಷೆಯಲ್ಲಿ ವಚನಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಿದರು. ಇದು ಜ್ಞಾನದ ಪ್ರಜಾಪ್ರಭುತ್ವೀಕರಣಕ್ಕೆ ದಾರಿಯಾಯಿತು. ಸ್ತ್ರೀಯರಿಗೆ ಪುರುಷರಷ್ಟೇ ಸಮಾನ ಅವಕಾಶಗಳನ್ನು ನೀಡಿ, ಸಮಾಜದಲ್ಲಿದ್ದ ಉಚ್ಚ-ನೀಚ ಭಾವನೆಗಳನ್ನು ತೊಡೆದುಹಾಕಲು ಪ್ರಯತ್ನಿಸಿದರು. ಅಸ್ಪೃಶ್ಯತೆಯನ್ನು ವಿರೋಧಿಸಿ ಜಾತಿರಹಿತ ಸಮಾಜದ ಕನಸು ಕಂಡರು. ಹೀಗಾಗಿ ಬಸವಣ್ಣ ಸಾರ್ವಕಾಲಿಕ ಮಾರ್ಗದರ್ಶಕ ಎಂದು ಬಣ್ಣಿಸಿದರು.
ಪ್ರಧಾನ ಭಾಷಣಕಾರ್ತಿ ಸಿಂಚನ ಸಿ.ಶೇಖರ್ ಮಾತನಾಡಿ, ಜಾತಿ ವ್ಯವಸ್ಥೆಯನ್ನು ಖಂಡಿಸಿದ ಮಹಾನ್ ನಾಯಕ ಬಸವಣ್ಣ. ಹನ್ನೆರಡನೇ ಶತಮಾನದ ಬಸವಣ್ಣನವರ ಕ್ರಾಂತಿಯ ಅತ್ಯಂತ ಮಹತ್ವದ ಅಂಶವೇ ಈ ಲಿಂಗ ಸಮಾನತೆ. ಅಂದು ಅವರು ಕೇವಲ ಘೋಷಣೆ ಮಾಡದೆ, ಆಚರಣೆಯಲ್ಲಿ ತಂದಿದ್ದರು. ಅಕ್ಕಮಹಾದೇವಿ, ಅಕ್ಕಮ್ಮ, ನೀಲಾಂಬಿಕೆ, ಗಂಗಾಂಬಿಕೆಯಂತಹ ನೂರಾರು ಮಹಿಳೆಯರು ಅನುಭವ ಮಂಟಪದ ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದರು. ಇಂದಿನ ಸಂಸತ್ತಿನಂತೆ ಅಂದೇ ಮಹಿಳೆಯರಿಗೆ ಸಮಾನ ವೇದಿಕೆ ಕಲ್ಪಿಸಲಾಗಿತ್ತು. ಶರಣೆಯರು ಸಮಾಜದ ಕೆಳಸ್ತರದಿಂದ ಬಂದವರಾಗಿದ್ದರೂ, ಉದಾಹರಣೆಗೆ ಸತ್ಯಕ್ಕ, ಆಯ್ದಕ್ಕಿ ಲಕ್ಕಮ್ಮ, ಸ್ವತಂತ್ರವಾಗಿ ವಚನಗಳನ್ನು ರಚಿಸುವ ಮೂಲಕ ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಸಿಕೊಂಡರು. ಹೆಣ್ಣುಮಕ್ಕಳು ಕೇವಲ ಮನೆಯ ಕೆಲಸಕ್ಕೆ ಸೀಮಿತವಾಗದೆ, ಸಮಾಜದ ಆರ್ಥಿಕ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸಿದರು ಎಂದು ತಿಳಿಸಿದರು.
2025-26ನೇ ಸಾಲಿನಲ್ಲಿ ಪಿಯುಸಿಯಲ್ಲಿ ಅತ್ಯುತ್ತಮ ದರ್ಜೆಯಲ್ಲಿ ತೇರ್ಗಡೆಯಾದ 17 ವಿದ್ಯಾರ್ಥಿಗಳಿಗೆ ಶಾಸಕ ಬಿ.ಎನ್ ರವಿಕುಮಾರ್ ಸನ್ಮಾನಿಸಿದರು. ತಾಲ್ಲೂಕು ಕಚೇರಿಯಲ್ಲಿ ವೇದಿಕೆ ಕಾರ್ಯಕ್ರಮ ಮಗಿಸಿ ಅರಳೇಪೇಟೆ ಬಸವೇಶ್ವರ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಗಳನ್ನು ಆಯೋಜಿಸಲಾಗಿತ್ತು. ಬಸವೇಶ್ವರ ದೇವರಿಗೆ ವಿಶೇಷ ಅಲಂಕಾರ, ಪೂಜೆ, ರುದ್ರಾಭಿಷೇಕ ಏರ್ಪಡಿಸಲಾಗಿತ್ತು.
ಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ಬಸವೇಶ್ವರ ಸೇವಾ ಮತ್ತು ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಬಿ.ಸಿ. ನಂದೀಶ್, ತಹಶೀಲ್ದಾರ್ ಗಗನ ಸಿಂಧು, ತಾಲ್ಲೂಕು ಪಂಚಾಯಿತಿ ಇಒ ಹೇಮಾವತಿ, ಬಿಇಓ ನರೇಂದ್ರ ಕುಮಾರ್ ತಾಲ್ಲೂಕು ಆರೋಗ್ಯಾಧಿಕಾರಿ ವೆಂಕಟೇಶ್ ಮೂರ್ತಿ, ಸರ್ಕಲ್ ಇನ್ಸ್ ಪೆಕ್ಟರ್ ಆನಂದ್, ಬಿ.ಎನ್ .ಜಗದೀಶ್, ಕಾರ್ಯದರ್ಶಿ ಚಂದ್ರಶೇಖರ್ ಬಾಬು, ಶಿವಕುಮಾರ್, ನಾಗರಾಜ್ ಹಾಜರಿದ್ದರು.