Home News ಮತದಾನದಲ್ಲಿ ಅಕ್ರಮ ಆರೋಪ

ಮತದಾನದಲ್ಲಿ ಅಕ್ರಮ ಆರೋಪ

0
Sidlaghatta Bhaktarahalli Election Fraud Allegation

Bhaktarahalli, sidlaghatta : ಭಕ್ತರಹಳ್ಳಿ ಗ್ರಾಮದ ಮತಗಟ್ಟೆ-2ರಲ್ಲಿ ಡಿಸೆಂಬರ್ 8ರಂದು ನಡೆದ ಮತದಾನದಲ್ಲಿ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪವನ್ನು ಭಕ್ತರಹಳ್ಳಿ ಮತಗಟ್ಟೆ-2 ರ ಪರಾಜಿತ ಅಭ್ಯರ್ಥಿ ಬಿ. ಚಿದಾನಂದಮೂರ್ತಿ ಮಾಡಿದ್ದಾರೆ. ಅವರು ಭಕ್ತರಹಳ್ಳಿಯ ಮಾಜಿ ಶಾಸಕ ದಿ. ವೆಂಕಟರಾಯಪ್ಪ ಅವರ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಬಹಿರಂಗಪಡಿಸಿದರು.

ಚಿದಾನಂದಮೂರ್ತಿ ಅವರ ಪ್ರಕಾರ, ಮತದಾನ ದಿನದಂದು ಭಕ್ತರಹಳ್ಳಿಯ ಮತಗಟ್ಟೆ-2ರಲ್ಲಿ ಒಟ್ಟು 983 ಮತಗಳು ದಾಖಲಾದರೆ, ಡಿಸೆಂಬರ್ 12ರಂದು ನಡೆದ ಮತ ಎಣಿಕೆಯಲ್ಲಿ 980 ಬ್ಯಾಲೆಟ್ ಪೇಪರ್‌ಗಳಷ್ಟೇ ಪತ್ತೆಯಾದವು. ಇದರ ಜೊತೆಗೆ, 18 ಹೆಚ್ಚುವರಿ ಡೂಪ್ಲಿಕೇಟ್ ಬ್ಯಾಲೆಟ್ ಪೇಪರ್‌ಗಳು ಸಹ ಮತಪೆಟ್ಟಿಗೆಯಲ್ಲಿ ಕಂಡುಬಂದಿರುವುದು ಅಕ್ರಮದ ಪ್ರಮಾಣ ಎಂದು ಅವರು ಆರೋಪಿಸಿದರು.

ಮತದಾನ ಸಂದರ್ಭದಲ್ಲಿ ನೀಡಲಾದ 3 ಬ್ಯಾಲೆಟ್ ಪೇಪರ್‌ಗಳು ಮತಪೆಟ್ಟಿಗೆಯಲ್ಲಿ ಕಾಣಿಸದೆ ಎಲ್ಲಿ ಹೋದವು ಎಂಬುದು ಹಾಗೂ ಡೂಪ್ಲಿಕೇಟ್ ಬ್ಯಾಲೆಟ್ ಪೇಪರ್‌ಗಳು ಮತಪೆಟ್ಟಿಗೆಗೆ ಹೇಗೆ ಪ್ರವೇಶಿಸಿದವು ಎಂಬುದರ ಬಗ್ಗೆ ಚಿದಾನಂದಮೂರ್ತಿ ತಹಶೀಲ್ದಾರರು ಮತ್ತು ಮತ ಎಣಿಕೆ ಅಧಿಕಾರಿಗಳನ್ನು ಪ್ರಶ್ನಿಸಿದರು. ಆದರೆ, ಈ ಕುರಿತು ಸ್ಪಷ್ಟ ಉತ್ತರ ನೀಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದು, “ನೀವು ನ್ಯಾಯಕ್ಕಾಗಿ ಕೋರ್ಟ್‌ಗೆ ಹೋಗಬಹುದು” ಎಂಬ ಉತ್ತರ ಮಾತ್ರ ನೀಡಿದರಂತೆ.

ಮತದಾನ ದಿನದಂದು ಸರಿಯಾದ ಬೆಳಕಿನ ವ್ಯವಸ್ಥೆ ಮಾಡದೆ ಕತ್ತಲೆಯಲ್ಲಿ ಮತದಾನ ನಡೆಸಿದ ಪ್ರಕ್ರಿಯೆಯ ಮೇಲೂ ಚಿದಾನಂದಮೂರ್ತಿ ಅನುಮಾನ ವ್ಯಕ್ತಪಡಿಸಿದರು. ಕತ್ತಲೆಯ ಸಮಯದಲ್ಲಿ ಮತಗಟ್ಟೆಯಲ್ಲಿ ಏನೆಲ್ಲಾ ನಡೆದಿದೆ ಎಂಬುದು ಪ್ರಶ್ನಾರ್ಹವಾಗಿದೆ ಎಂದು ಅವರು ತಿಳಿಸಿದರು.

ಚಿದಾನಂದಮೂರ್ತಿ ಅಕ್ರಮ ಮತದಾನದ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ಈ ಬಗ್ಗೆ ವಿವರವಾದ ದಾಖಲೆಗಳನ್ನು ಮತ್ತು ಮಾಹಿತಿಯನ್ನು ಪಡೆಯಲು ತಹಶೀಲ್ದಾರರನ್ನು ಕೇಳಿದಾಗ, ತಹಶೀಲ್ದಾರರು ಮತ್ತು ಚುನಾವಣಾಧಿಕಾರಿಗಳು ಪರಸ್ಪರ ಬೆರಳು ತೋರಿಸುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

ಅಂತಿಮವಾಗಿ, ತಹಶೀಲ್ದಾರರು ಅಗತ್ಯ ದಾಖಲೆಗಳನ್ನು ನೀಡದಿದ್ದರೆ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವೆವು ಎಂದು ಎಚ್ಚರಿಕೆ ನೀಡಿದರು. “ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸುತ್ತೇವೆ, ಅಗತ್ಯವಿದ್ದಲ್ಲಿ ನ್ಯಾಯಾಲಯಕ್ಕೂ ಹೋಗುತ್ತೇವೆ” ಎಂದು ಅವರು ಸ್ಪಷ್ಟಪಡಿಸಿದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version