Home News ಗ್ರಾಮಸ್ಥರು ಸಂರಕ್ಷಿಸಿರುವ ವೀರಗಲ್ಲುಗಳ ಕುರಿತು ವಿದ್ಯಾರ್ಥಿಗಳಿಗೆ ಪಾಠ

ಗ್ರಾಮಸ್ಥರು ಸಂರಕ್ಷಿಸಿರುವ ವೀರಗಲ್ಲುಗಳ ಕುರಿತು ವಿದ್ಯಾರ್ಥಿಗಳಿಗೆ ಪಾಠ

0
Sidlaghatta Cheemangala Veeragallu

Cheemangala, Sidlaghatta : ಯಾವುದೇ ಪ್ರದೇಶದ ಇತಿಹಾಸವನ್ನು ತಿಳಿಯಲು ಆ ಪ್ರದೇಶದ ಶಾಸನಗಳು ಮತ್ತು ವೀರಗಲ್ಲುಗಳ ದಾಖಲೆಗಳು ಮುಖ್ಯವಾಗುತ್ತವೆ. ಯುದ್ಧದಲ್ಲಿ ಮಡಿದ ಯೋಧನ ಶೌರ್ಯ ಮತ್ತು ತ್ಯಾಗವನ್ನು ನೆನಪಿಟ್ಟುಕೊಳ್ಳಲು ಸ್ಥಾಪಿಸಲಾಗುವ ವೀರಗಲ್ಲುಗಳು ಸ್ಥಳೀಯ ಸಂಸ್ಕೃತಿಯ ಪ್ರತಿಬಿಂಬಗಳು ಮತ್ತು ಮುಂದಿನ ಪೀಳಿಗೆ ಸ್ಫೂರ್ತಿಯ ಸೆಲೆಗಳು ಎಂದು ಇತಿಹಾಸ ಅಕಾಡೆಮಿಯ ಸದಸ್ಯ ಕೆ.ಧನಪಾಲ್ ತಿಳಿಸಿದರು.

ತಾಲ್ಲೂಕಿನ ಚೀಮಂಗಲ ಗ್ರಾಮದಲ್ಲಿ ಚೌಡೇಶ್ವರಮ್ಮ ದೇವಸ್ಥಾನದ ಆವರಣದಲ್ಲಿ ಗ್ರಾಮಸ್ಥರು ಸಂರಕ್ಷಿಸಿರುವ ವೀರಗಲ್ಲುಗಳ ಕುರಿತಾಗಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ವಿವರಿಸುತ್ತಾ ಅವರು “ಶಾಸನಗಳು, ವೀರಗಲ್ಲುಗಳ ಮೂಲಕ ಇತಿಹಾಸ ದರ್ಶನ” ಎಂಬ ವಿಚಾರವಾಗಿ ಮಾತನಾಡಿದರು.

ತಮ್ಮ ಗ್ರಾಮಕ್ಕೆ ಕೀರ್ತಿ ತಂದಿರುವ ಆ ವೀರರಂತೆ ಈಗಿನ ಮಕ್ಕಳು ಜಗಮೆಚ್ಚುವ ರೀತಿಯಲ್ಲಿ ಸಾಧಕರಾಗಬೇಕು. ನಿಮ್ಮದೇ ಗ್ರಾಮದ ವೀರ ಸೇನಾನಿ ಯುದ್ಧದಲ್ಲಿ ಹೋರಾಡಿ ವೀರಮರಣವನ್ನಪ್ಪಿದ್ದಾನೆ. ಆತನ ಬಗ್ಗೆ ಹೆಮ್ಮೆ, ಗೌರವ ಮತ್ತು ಕೃತಜ್ಞತೆಯನ್ನು ಹೊಂದಬೇಕು ಎಂದರು.

ಈ ವೀರಗಲ್ಲುಗಳು ಮತ್ತು ಶಾಸನಗಳ ಕೆಳಗೆ ನಿಧಿ ಇರುವುದಿಲ್ಲ. ಈ ಊರಿಗಾಗಿ ಹೋರಾಡಿದ ವೀರರು ಮತ್ತು ಅವರ ಕಾಲದ ದಾಖಲೆಯೇ ಅಪೂರ್ವ ನಿಧಿಯಿದ್ದಂತೆ. ಈ ಶಾಸನ ಮತ್ತು ವೀರಗಲ್ಲುಗಳನ್ನು ಕಾಪಾಡಿಕೊಳ್ಳಬೇಕು. ಈ ರೀತಿಯ ಶಾಸನದ ಬಗ್ಗೆ ಊರಿನ ಐತಿಹ್ಯದ ಬಗ್ಗೆ ತಿಳಿದುಕೊಂಡಲ್ಲಿ ನಮ್ಮ ಗ್ರಾಮ್ಯಪರಂಪರೆಯ ಬಗ್ಗೆ ಹೆಮ್ಮೆ, ಅಭಿಮಾನ ಮೂಡುತ್ತದೆ. ಹಸುಗಳನ್ನು ಕಾಪಾಡಿದ ವೀರರ ವೀರಗಲ್ಲಿಗೆ ತುರುಗೋಳ್ ಎನ್ನುತ್ತಾರೆ. ಶಾಸನದಲ್ಲಿನ ಅಕ್ಷರಗಳ ಬಗ್ಗೆ ಅವರು ವಿವರಿಸಿ ನಮ್ಮ ಕನ್ನಡ ಭಾಷೆಯ ಬೆಳವಣಿಗೆಯ ಬಗ್ಗೆಯೂ ಮಕ್ಕಳಿಗೆ ವಿವರಿಸಿ ಇವುಗಳನ್ನೆಲ್ಲಾ ಸಂರಕ್ಷಿಸುವುದು ನಿಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.

ಚೀಮಂಗಲ ಗ್ರಾಮದಲ್ಲಿ ಚೌಡೇಶ್ವರಮ್ಮ ದೇವಸ್ಥಾನದ ಆವರಣದಲ್ಲಿ ಗ್ರಾಮಸ್ಥರು ವೀರಗಲ್ಲುಗಳನ್ನು ಸಂರಕ್ಷಿಸಿದ್ದಾರೆ. ಈ ರೀತಿಯಾಗಿ ಇತರ ಗ್ರಾಮದವರೂ ತಮ್ಮ ಗ್ರಾಮಗಳಲ್ಲಿ ಅನಾಥವಾಗಿರುವ ಈ ರೀತಿಯ ವೀರಗಲ್ಲು ಅಥವಾ ಶಾಸನಗಳನ್ನು ಸುರಕ್ಷಿತ ಸ್ಥಳದಲ್ಲಿಟ್ಟು ಮುಂದಿನ ಪೀಳಿಗೆಗೆ ಉಳಿಸಬೇಕಿದೆ ಎಂದರು.

ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಎ.ಎಂ.ತ್ಯಾಗರಾಜ್, ಇತಿಹಾಸ ಸಂಶೋಧಕ ಶ್ರೀನಿವಾಸ್, ಚೀಮಂಗಲ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಎಸ್.ಶಿವಶಂಕರ್, ಶಿಕ್ಷಕರಾದ ನವೀನ್ ಕುಮಾರ್, ಶಿವಕುಮಾರ್, ಶ್ರೀನಿವಾಸ್, ಪಲ್ಲವಿ, ಬೀರಪ್ಪ, ಕಮಲ ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version