Home News ನಗರಸಭೆ ಪರವಾನಗಿ ಪಡೆಯಲು ಅಂಗಡಿಗಳ ಮಾಲೀಕರಿಗೆ ಸೂಚನೆ

ನಗರಸಭೆ ಪರವಾನಗಿ ಪಡೆಯಲು ಅಂಗಡಿಗಳ ಮಾಲೀಕರಿಗೆ ಸೂಚನೆ

0
Sidlaghatta City Municipal Council Licence

ಶಿಡ್ಲಘಟ್ಟ ನಗರದ ವ್ಯಾಪ್ತಿಯಲ್ಲಿ ಸುಮಾರು 3600 ಕ್ಕೂ ಅಧಿಕ ಅಂಗಡಿಗಳಿವೆ. ನಗರಸಭೆಯಿಂದ ಪ್ರತಿಯೊಬ್ಬರೂ ಶುಲ್ಕ ಪಾವತಿಸಿ ವ್ಯಾಪಾರಿ ಪರವಾನಗಿ ಪಡೆದುಕೊಳ್ಳಬೇಕೆಂದು ತಿಳಿಸಿದ್ದೇವೆ. ವ್ಯಾಪಾರಸ್ಥರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ನಗರಸಭೆ ಪೌರಾಯುಕ್ತ ಶ್ರೀಕಾಂತ್ ತಿಳಿಸಿದರು.

 ನಗರದ ಮುಖ್ಯ ರಸ್ತೆಯಲ್ಲಿನ ವಿವಿಧ ಅಂಗಡಿಗಳಿಗೆ ಮಂಗಳವಾರ ತೆರಳಿ ಅಂಗಡಿ ಮಾಲೀಕರಿಗೆ ನಗರಸಭೆಯಿಂದ ಪರವಾನಗಿ ಪಡೆದುಕೊಳ್ಳಲು ತಿಳಿಸಿ ಅವರು ಮಾತನಾಡಿದರು.

ಮನೆಗಳಲ್ಲಿ ರೇಷ್ಮೆ ಉದ್ದಿಮೆಗಳನ್ನು ನಡೆಸುವವರೂ ಸಹ ನಗರಸಭೆಯಿಂದ ಪರವಾನಗಿ ಪಡೆಯಬೇಕು. ನಗರವ್ಯಾಪ್ತಿಯಲ್ಲಿ ಆ ರೀತಿ ರೇಷ್ಮೆ ಉದ್ದಿಮೆ ನಡೆಸುವವರು ಸುಮಾರು ಐದು ಸಾವಿರ ಮಂದಿ ಇರಬಹುದೆಂಬ ಅಂದಾಜಿದೆ. ಅಂಗಡಿ ವ್ಯಾಪಾರಸ್ಥರು ಉದ್ದಿಮೆ ಪರವಾನಿಗೆ ಪಡೆದಿಲ್ಲ. ಕೆಲವರು ಪಡೆದಿದ್ದರೂ ಅದನ್ನು ನವೀಕರಿಸಿಲ್ಲ. ಈ ಬಗ್ಗೆ ದಿನಸಿ ವರ್ತಕರ ಸಂಘದವರಿಗೂ ತಿಳಿಸಲಾಗಿದೆ. ಸಂಘದವರು ಇದರ ಕುರಿತಾಗಿ ಸಭೆ ಕರೆದು ಸಭೆಯಲ್ಲಿ ಎಲ್ಲರಿಗೂ ವಿಷಯ ತಿಳಿಸಿ, ಪರವಾನಗಿ ಪಡೆಯಲಾಗುವುದು ಎಂದು ಒಪ್ಪಿಗೆ ನೀಡಿದ್ದಾರೆ. ನಗರದ ಎಲ್ಲಾ ವ್ಯಾಪಾರಸ್ಥರು ನಿಗದಿಪಡಿಸಿರುವ ಶುಲ್ಕ ಪಾವತಿಸಿ ಪರವಾನಿಗೆಯನ್ನು ಕಡ್ಡಾಯವಾಗಿ ಪಡೆಯಬೇಕು, ಪಡೆಯದೇ ಇದ್ದರೆ ಕರ್ನಾಟಕ ಪುರಸಭೆ ಕಾಯ್ದೆ 1964 ರ ನಿಯಮ ಅನ್ವಯ ಅಂಗಡಿಗಳನ್ನು ಮುಚ್ಚಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದೇವೆ ಎಂದು ಹೇಳಿದರು.

 ನಿನ್ನೆ ಒಂದೇ ದಿನ 6 ರಿಂದ 7 ಲಕ್ಷ ರೂಗಳಷ್ಟು ಕಂದಾಯದ ನೋಟಿಸ್ ನೀಡಿದ್ದೇವೆ. ಎಲ್ಲರೂ ಸಮರ್ಪಕವಾಗಿ ಕಂದಾಯ ಪಾವತಿಸಬೇಕು ಮತ್ತು ಪರವಾನಗಿ ಶುಲ್ಕ ಪಾವತಿಸಬೇಕು. ನಗರದ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲರೂ ಸಹಕಾರ ನೀಡಬೇಕು. ಆಸ್ತಿ ತೆರಿಗೆ, ವಾಣಿಜ್ಯ ಮಳಿಗೆಗಳಿಂದ ಬಾಡಿಗೆ, ಉದ್ದಿಮೆ ಪರವಾನಗಿ ಮುಂತಾದ ಮೂಲಗಳಿಂದ ಸಂಪನ್ಮೂಲ ಕ್ರೂಡೀಕರಿಸುತ್ತಿದ್ದು ನಗರದ ಅಭಿವೃದ್ಧಿಗೆ ಇವುಗಳ ಬಳಕೆಯಾಗುತ್ತದೆ ಎಂದರು.

 ಈ ಸಂದರ್ಭದಲ್ಲಿ ನಗರಸಭೆ ಸಿಬ್ಬಂದಿ ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version