Home News ಶಿಡ್ಲಘಟ್ಟ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಗೂಡು ಮಾರಾಟ

ಶಿಡ್ಲಘಟ್ಟ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಗೂಡು ಮಾರಾಟ

0

Sidlaghatta : ಹವಾಮಾನದ ವೈಪರೀತ್ಯದ ನಡುವೆ ಶಿಡ್ಲಘಟ್ಟದ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆ ಗಮನ ಸೆಳೆದಿದ್ದು, ರೇಷ್ಮೆ ಬೆಳೆಗಾರರಿಗೆ ಭರವಸೆ ಮೂಡಿಸಿದೆ. ತಾಲ್ಲೂಕಿನ ಕನ್ನಮಂಗಲದ ಶ್ರೀನಿವಾಸ್ ಅವರ ಬೆಳೆದ ದ್ವಿತಳಿ (ಬೈವೋಲ್ಟೀನ್) ರೇಷ್ಮೆ ಗೂಡು ಪ್ರತಿ ಕೆ.ಜಿಗೆ 778 ರೂ ಧಾರಣೆ ಸಾಧಿಸಿ ಈ ವರ್ಷ ಅತ್ಯಧಿಕ ದರದ ದಾಖಲೆ ಬರೆದಿದೆ.

ಶ್ರೀನಿವಾಸ್ ಅವರು ಕೋಲಾರದ ಗಿಡ್ಡಪ್ಪನಳ್ಳಿಯ ಚಾಕಿ ಕೇಂದ್ರದಲ್ಲಿ 150 ಮೊಟ್ಟೆಗಳನ್ನು ಬಳಸಿಕೊಂಡು 140 ಕೆ.ಜಿ ರೇಷ್ಮೆ ಗೂಡು ಉತ್ಪಾದನೆ ಮಾಡಿದ್ದರು. ಈ ಗೂಡಿಗೆ ಮಾರುಕಟ್ಟೆಯಲ್ಲಿ ಅತ್ಯಧಿಕ ಬೆಲೆ ಸಿಕ್ಕಿದ್ದು, ಬೇರೆ ಬೆಳೆಗಾರರಿಗೂ ಉತ್ಸಾಹ ನೀಡಿದೆ. ದೇವನಹಳ್ಳಿ ತಾಲ್ಲೂಕಿನ ಹೊಸೂರಿನ ಆನಂದ್ ಅವರು ಇದೇ ಮಾರುಕಟ್ಟೆಯಲ್ಲಿ ಗೂಡನ್ನು 777 ರೂ ಗೆ ಮಾರಾಟ ಮಾಡಿದ್ದಾರೆ.

ಶ್ರೀನಿವಾಸ್ ಅವರು ವೈಜ್ಞಾನಿಕ ತಂತ್ರಗಳನ್ನು ಬಳಸಿ ಹಿಪ್ಪುನೇರಳೆ ಸೊಪ್ಪು ಬೆಳೆಯಲು ಕಡ್ಡಿಯನ್ನು ಸಮರ್ಪಕ ಅಂತರದಲ್ಲಿ ನೆಟ್ಟು, ಕೊಟ್ಟಿಗೆ ಗೊಬ್ಬರದ ಬಳಸಿಕೊಂಡು ಬೆಳೆ ಉತ್ತಮಗೊಳಿಸಿದ್ದಾರೆ. ಇವರ ಈ ಸಾಧನೆ ರೈತರಿಗೆ ಮಾದರಿಯಾಗಿದೆ.

ಶಿಡ್ಲಘಟ್ಟ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಅತ್ಯಧಿಕ ಬೆಲೆಗೆ ರೇಷ್ಮೆ ಗೂಡನ್ನು ಕೊಂಡ ರೀಲರ್ ಅಲ್ತಾಫ್ ಹುಸೇನ್ ಅವರಿಗೆ ಸಹಾಯಕ ನಿರ್ದೇಶಕ ತಿಮ್ಮರಾಜು ಪ್ರಮಾಣಪತ್ರ ನೀಡಿದರು.

ಇತ್ತೀಚಿಗೆ ರೇಷ್ಮೆ ಬೆಳೆಗಾರರು ಉತ್ಪಾದನೆಗೆ ಬೇಕಾದ ಬಂಡವಾಳದ ತೀವ್ರ ಕೊರತೆಯಿಂದ ಅಸಮಾಧಾನ ವ್ಯಕ್ತಪಡಿಸಿದ್ದರು. ಬೆಂಬಲ ಬೆಲೆ ನೀಡುವಂತೆ ಸರ್ಕಾರದ ಬಳಿ ಬೇಡಿಕೆ ಕೇಳಿ ಬಂದಿತ್ತು.

ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಅಕ್ಮಲ್ ಪಾಷ ಅವರು, “ಶ್ರೀನಿವಾಸ್ ಅವರಂತಹ ಬೆಳೆಗಾರರು ಬೈವೋಲ್ಟೀನ್ ಬೆಳೆಯುವುದು ಆರ್ಥಿಕತೆಯನ್ನು ಉತ್ತೇಜಿಸಲು ಮಾದರಿಯಾಗಿದೆ. ಇಲಾಖೆಯಿಂದ ಅವರಿಗೆ ಹುಳು ಸಾಕಾಣಿಕೆ ಮನೆ ನಿರ್ಮಾಣಕ್ಕೆ ಸಹಾಯಧನ ನೀಡಲಾಗಿದೆ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

“ಕನ್ನಮಂಗಲದ ಶ್ರೀನಿವಾಸ್ ಅವರು 778 ರೂ ಗಳಿಗೆ ಗೂಡು ಮಾರಾಟ ಮಾಡಿ ಅತ್ಯಧಿಕ ದರ ಸಾಧಿಸಿದ್ದಾರೆ. ಈ ಗೂಡನ್ನು ಫಕ್ರುದ್ದೀನ್ ಎಂಬ ರೇಷ್ಮೆ ನೂಲು ಬಿಚ್ಚಾಣಿಕೆದಾರ ಖರೀದಿ ಮಾಡಿದ್ದಾರೆ. ಉತ್ತಮ ದರಗಳನ್ನು ಪಡೆಯಲು ರೈತರು ಮಾರುಕಟ್ಟೆ ಬಳಸಬೇಕು,” ಎಂದು ಉಪನಿರ್ದೇಶಕ ಎನ್. ಮಹದೇವಯ್ಯ ಹೇಳಿದ್ದಾರೆ.

ಮಾರಾಟ ಮಾಡಿದ ರೈತರಿಗೆ ಮತ್ತು ಖರೀದಿದಾರರಿಗೆ ಪ್ರಮಾಣಪತ್ರಗಳನ್ನು ವಿತರಣೆ ಮಾಡಲಾಗಿದ್ದು, ಈ ಪ್ರಕ್ರಿಯೆ ರೈತರಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version