
Sidlaghatta : ಶಿಡ್ಲಘಟ್ಟ ತಾಲ್ಲೂಕಿನಲ್ಲಿ ರೇಷ್ಮೆ ಮತ್ತು ಹೈನುಗಾರಿಕೆಯ ಜೊತೆಗೆ ನಾಟಿ ಕೋಳಿ ಸಾಕಾಣಿಕೆ ಕೈಗೊಳ್ಳುವುದರಿಂದ ಗ್ರಾಮೀಣ ರೈತರು ಆರ್ಥಿಕವಾಗಿ ಸ್ಥಿರತೆ ಸಾಧಿಸಬಹುದು ಎಂದು ಪಶುವೈದ್ಯಾಧಿಕಾರಿ ಡಾ. ಶ್ರೀನಾಥ್ ರೆಡ್ಡಿ ಹೇಳಿದರು.
ನಗರದ ಪಶು ಆಸ್ಪತ್ರೆ ಆವರಣದಲ್ಲಿ ಶನಿವಾರ ಪಶುಪಾಲನಾ ಮತ್ತು ಸೇವಾ ಇಲಾಖೆಯ ವತಿಯಿಂದ ಮಹಿಳಾ ರೈತರಿಗೆ ಉಚಿತವಾಗಿ ಮೈಸೂರು ತಳಿಯ ನಾಟಿ ಕೋಳಿ ಮರಿಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕ್ಷೇತ್ರದ ಶಾಸಕ ಬಿ.ಎನ್. ರವಿಕುಮಾರ್ ಅವರ ಮಾರ್ಗದರ್ಶನದಲ್ಲಿ ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಸಾಮಾನ್ಯ ವರ್ಗದ ರೈತರಿಗೆ ನಾಟಿ ಕೋಳಿ ವಿತರಣಾ ಯೋಜನೆಯನ್ನು ಜಾರಿಗೊಳಿಸಿರುವುದಾಗಿ ತಿಳಿಸಿದರು.
ನಾಟಿ ಕೋಳಿ ಮತ್ತು ಅದರ ಮೊಟ್ಟೆಯ ಬೇಡಿಕೆ ದಿನೇ ದಿನೇ ಹೆಚ್ಚುತ್ತಿದ್ದು, ರೈತರು ಈ ಯೋಜನೆಯನ್ನು ಸದುಪಯೋಗಪಡಿಸಿಕೊಂಡು ಕುಟುಂಬದ ಆರ್ಥಿಕ ಸ್ಥಿತಿ ಬಲಪಡಿಸಬೇಕೆಂದು ಅವರು ಸಲಹೆ ನೀಡಿದರು. ಚಿಕ್ಕಬಳ್ಳಾಪುರ ಜಿಲ್ಲೆ ಈಗಾಗಲೇ ರೇಷ್ಮೆ, ಹೈನುಗಾರಿಕೆ, ಹೂವು, ಹಣ್ಣು ಹಾಗೂ ತರಕಾರಿ ಉತ್ಪಾದನೆಯಲ್ಲಿ ಅಂತರಾಷ್ಟ್ರೀಯ ಖ್ಯಾತಿ ಗಳಿಸಿದ್ದು, ನಾಟಿ ಕೋಳಿ ಸಾಕಾಣಿಕೆಯಿಂದ ರೈತರ ಆದಾಯದ ಮೂಲಗಳು ಮತ್ತಷ್ಟು ವಿಸ್ತರಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ಪಶು ವೈದ್ಯಾಧಿಕಾರಿಗಳಾದ ಡಾ. ನಿತಿನ್ ಕುಮಾರ್, ಡಾ. ಪ್ರಶಾಂತ್, ಡಾ. ಸೌಮ್ಯ, ಜಾನುವಾರು ಅಧಿಕಾರಿ ವೀರೇಶ್, ಶಾಸಕರ ಆಪ್ತ ಸಹಾಯಕ ಕುಮಾರ್ ಹಾಗೂ ಸಿಬ್ಬಂದಿಗಳಾದ ಪುಷ್ಪ, ಅನಿಲ್, ಮಂಜು, ಮೂರ್ತಿ, ಅಬ್ಲೂಡು ಮಂಜು, ಬಸವರಾಜ್, ಅಶೋಕ್ ಮತ್ತು ಸ್ಥಳೀಯ ರೈತರು ಉಪಸ್ಥಿತರಿದ್ದರು.