
ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಶ್ರೀಭಕ್ತ ಆಂಜನೇಯಸ್ವಾಮಿಯ 2ನೇ ವರ್ಷದ ಕರಗ ಮಹೋತ್ಸವ ಹಾಗೂ ಊರ ಜಾತ್ರೆ, ದೀಪೋತ್ಸವವು ಸಡಗರ ಸಂಭ್ರಮದಿಂದ ಹಾಗೂ ಭಕ್ತಿಭಾವದಿಂದಲೂ ನೆರವೇರಿತು.
ಕರಗ ಮತ್ತು ಊರ ಜಾತ್ರಾ ಮಹೋತ್ಸವ ಅಂಗವಾಗಿ ಗ್ರಾಮದ ಶ್ರೀಭಕ್ತಾಂಜನೇಯಸ್ವಾಮಿ, ಶ್ರೀಗಂಗಮಾಂಬಿಕ, ಶ್ರೀದುರ್ಗಾದೇವಿ, ಶ್ರೀಸಪ್ಪಲಮ್ಮದೇವಿ, ಶ್ರೀಸೋಮೇಶ್ವರಸ್ವಾಮಿ, ಶ್ರೀಚೌಡೇಶ್ವರಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಹಾ ಮಂಗಳಾರತಿ ನೆರವೇರಿಸಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ಮಹಿಳೆಯರು ಮತ್ತು ಹೆಣ್ಣು ಮಕ್ಕಳು ತಲೆಯ ಮೇಲೆ ತಂಬಿಟ್ಟು ದೀಪಗಳನ್ನೊತ್ತು ಊರ ಪ್ರದರ್ಶನ ಮಾಡಿ ಶ್ರೀ ಭಕ್ತಾಂಜನೇಯಸ್ವಾಮಿ, ಗಂಗಮಾಂಬಿಕ, ದುರ್ಗಾದೇವಿ, ಸಪ್ಪಲಮ್ಮದೇವಿ, ಶ್ರೀ ಸೋಮೇಶ್ವರಸ್ವಾಮಿ, ಚೌಡೇಶ್ವರಿ ದೇವರುಗಳಿಗೆ ತಂಬಿಟ್ಟು ದೀಪ ಬೆಳಗಿ ಭಕ್ತಿಭಾವದಿಂದ ಕೈ ಮುಗಿದು ಇಷ್ಟಾರ್ಥಗಳನ್ನು ಈಡೇರಿಸುವಂತೆ ಮನವಿ ಮಾಡಿದರು.
ಮೇಲೂರಿನ ಕೆ.ಧರ್ಮೇಂದ್ರ ಅವರು ಸಂಪ್ರದಾಯದಂತೆ ಪೂಜೆ ಪುನಸ್ಕಾರ ಮುಗಿಸಿ ಹೂವಿನ ಕರಗವನ್ನು ತಲೆ ಮೇಲೆ ಹೊತ್ತು ಭಕ್ತಿಭಾವದಿಂದ ಕುಣಿಯುತ್ತಿದ್ದರೆ ನೆರೆದಿದ್ದ ಭಕ್ತರು ನಿಂತಲ್ಲೆ ಕುಣಿದು ಕುಪ್ಪಳಿಸಿದರು. ಭಕ್ತಿಭಾವದ ಪರವಶದಲ್ಲಿ ಮಿಂದೆದ್ದರು. ತಮಟೆಯ ಏಟು, ಹಾಡು, ಸಂಗೀತದ ಲಯಕ್ಕೆ ತಕ್ಕಂತೆ ತಲೆ ಮೇಲೆ ಕರಗದ ನೃತ್ಯವನ್ನು ನೆರೆದಿದ್ದ ಭಕ್ತರು ಕಣ್ತುಂಬಿಕೊಂಡರು.
ಹೂವಿನ ಕರಗ ಮಹೋತ್ಸವ ಅಂಗವಾಗಿ ದೇವಸ್ಥಾನದ ಮುಂಭಾಗದಲ್ಲಿ ರಸ ಮಂಜರಿ ಕಾರ್ಯಕ್ರಮ ಏರ್ಪಡಿಸಿದ್ದು ಕನ್ನಡ ತೆಲುಗು ಹಿಂದಿ ಹಾಡುಗಳ ಗಾಯನ ಮತ್ತು ನೃತ್ಯವು ಸಾವಿರಾರು ಕಲಾ ರಸಿಕರ ಮನ ರಂಜಿಸಿತು.