Sidlaghatta : ಬೇಸಿಗೆಯಲ್ಲಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಸಾಮಾನ್ಯವಾಗಿ ಕಂಡು ಬರುತ್ತದೆ. ಕುಡಿಯುವ ನೀರು ಪೂರೈಕೆ ಕುರಿತಾದ ಏನೇ ಸಮಸ್ಯೆಗಳಿಗೆ ಮೊಬೈಲ್ 8884777235 ಸಂಖ್ಯೆಯ ಸಹಾಯವಾಣಿಗೆ ಕರೆ ಮಾಡುವಂತೆ ತಾಲೂಕು ಪಂಚಾಯಿತಿ ಇಒ ಆರ್.ಹೇಮಾವತಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಬೇಸಿಗೆ ಕಾಲಾವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬರುತ್ತದೆ. ಅದರಲ್ಲೂ ನೀರಿನ ಕೊರತೆ ಮಾತ್ರವಲ್ಲ, ಕುಡಿಯುವ ನೀರಿನ ಪೈಪ್‌ಲೈನ್ ಹೊಡೆದು ಹೋಗಿ ನೀರು ವ್ಯರ್ಥವಾಗಿ ಹರಿದು ಹೋಗುವುದು.
ಕೆಲವು ಕಡೆ ಚರಂಡಿ ಹಾಗೂ ಕೊಚ್ಚೆ ನೀರಿನಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಹಾದು ಹೋಗಿರುವಂತದ್ದಲ್ಲದೆ ಇತರೆ ರೀತಿಯ ಅನೇಕ ಸಮಸ್ಯೆಗಳು ಕಂಡು ಬರುತ್ತವೆ. ಸಂಬಂದಿಸಿದ ಇಲಾಖೆ ಅಧಿಕಾರಿ, ಸಿಬ್ಬಂದಿ ಗಮನಕ್ಕೆ ತಂದಿದ್ದರೂ ಸಮಸ್ಯೆ ನಿವಾರಣೆ ಆಗಿರುವುದಿಲ್ಲ.
ಇದರಿಂದ ಕುಡಿಯುವ ನೀರಿನ ಕೊರತೆಯಷ್ಟೆ ಅಲ್ಲ ಕಲುಷಿತ ನೀರು ಪೂರೈಕೆಯಾಗುವುದು, ಅದರಿಂದ ರೋಗ ರುಜುನುಗಳು ಬರುವುದು, ವಾಂತಿ ಬೇಧಿಯಂತ ಸಮಸ್ಯೆ ಕಾಣಿಸಿಕೊಳ್ಳುವುದು ಸಾಮಾನ್ಯ.
ಹಾಗಾಗಿ ಇಂತಹ ಸಮಸ್ಯೆಗಳು ಕಂಡು ಬಂದಲ್ಲಿ ಕೂಡಲೆ ಮೊಬೈಲ್ 8884777235 ಸಂಖ್ಯೆಯ ಸಹಾಯವಾಣಿಗೆ ಕರೆ ಮಾಡಿ ಅಥವಾ ಫೋಟೋ ತೆಗೆದು ವಾಟ್ಸಾಪ್ ಮಾಡಿ ಸಮಸ್ಯೆ ತಿಳಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಕುಡಿಯುವ ನೀರಿನ ಕೊರತೆ ಮಾತ್ರವಲ್ಲ ವಿಶೇಷವಾಗಿ ಪೈಪ್ ಹೊಡೆದು ಕಲುಷಿತ ನೀರು ಪೂರೈಕೆಯಂತ ಸಮಸ್ಯೆ ನಿವಾರಣೆಗೆ ಜಿಲ್ಲಾ ಪಂಚಾಯಿತಿಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದವರು ಸಾರ್ವಜನಿಕರಿಗಾಗಿ ಸಹಾಯವಾಣಿ ಆರಂಭಿಸಿದೆ. ಇದರ ಸದುಪಯೋಗ ಪಡಿಸಿಕೊಳ್ಳಿ ಎಂದು ಮನವಿ ಮಾಡಿದರು.








