Sidlaghatta, Chikkaballapur : ನಾವು, ನೀವು ಎಲ್ಲರೂ ಕೂಡ ಸಮಾಜದಲ್ಲಿ ಸರ್ವ ಸಮಾನತೆಯಿಂದ ಮತ್ತು ಸ್ವಾಭಿಮಾನದ ಬದುಕನ್ನು ನಡೆಸುತ್ತಿದ್ದೇವೆ. ಬಡವ-ಬಲ್ಲಿದ ಎನ್ನದೆ ಎಲ್ಲರಿಗೂ ಸಮಾನ ಕಾನೂನು ರಕ್ಷಣೆ ಇದೆ ಎಂದಾದರೆ, ಅದು ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ನಮಗೆ ನೀಡಿದ ಸಂವಿಧಾನದಿಂದಾಗಿ ಎಂದು ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್) ಭೀಮ ಮಾರ್ಗದ ರಾಜ್ಯ ಸಂಚಾಲಕ ಬಿ.ಎನ್. ವೆಂಕಟೇಶ್ ಅವರು ತಿಳಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರ ಪರಿನಿರ್ವಾಣ ದಿನಾಚರಣೆ ಅಂಗವಾಗಿ ದಲಿತ ಸಂಘರ್ಷ ಸಮಿತಿ (ಭೀಮ ಮಾರ್ಗ) ಸಂಘಟನೆಯಿಂದ ನಗರದ ಟಿ.ಬಿ. ರಸ್ತೆಯ ಓಟಿ ವೃತ್ತದಿಂದ ರೈಲ್ವೇ ನಿಲ್ದಾಣದವರೆಗೂ ಶನಿವಾರ ಹಮ್ಮಿಕೊಂಡಿದ್ದ ಮೋಂಬತ್ತಿ ಮೆರವಣಿಗೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಂವಿಧಾನದ ಮಹತ್ವ:
ಇಡೀ ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠವಾದ ಮತ್ತು ಸರ್ವ ಸಮಾನತೆಯನ್ನು ಸಾರುವ ಲಿಖಿತ ಸಂವಿಧಾನವನ್ನು ನೀಡಿದ ಮಹಾನ್ ಮಾನವತಾವಾದಿ ಡಾ. ಅಂಬೇಡ್ಕರ್ ಅವರ ಸಂವಿಧಾನದಲ್ಲಿನ ಎಲ್ಲ ಅಂಶಗಳನ್ನು ನಾವು ತಿಳಿದುಕೊಂಡು ಅವುಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ, ನಮ್ಮ ಬದುಕು ಇನ್ನಷ್ಟು ಉತ್ತಮವಾಗಲಿದೆ ಮತ್ತು ಉತ್ತಮ ಸಮಾಜವೂ ನಿರ್ಮಾಣವಾಗಲಿದೆ ಎಂದು ಅವರು ಹೇಳಿದರು.
ಅಸಮಾನತೆಯ ಬಗ್ಗೆ ಬೇಸರ:
ಇನ್ನೂ ಎಲ್ಲೋ ಒಂದು ಕಡೆ ಅಸಮಾನತೆ ಮತ್ತು ಜಾತಿ ಪದ್ಧತಿಯ ವ್ಯವಸ್ಥೆ ಜೀವಂತವಾಗಿದೆ. ಓದಿ ಬುದ್ಧಿವಂತರಾದವರು ಈ ಅಸಮಾನತೆ ಮತ್ತು ಜಾತಿ ಪದ್ಧತಿಯನ್ನು ಪ್ರಶ್ನಿಸುವಂತಾಗಬೇಕು. ಆದರೆ, ಇಂದಿನ ಯುವ ಪೀಳಿಗೆಯಲ್ಲಿ ಪ್ರಶ್ನಿಸುವ ಮನೋಸ್ಥೈರ್ಯ ಕಡಿಮೆಯಾಗುತ್ತಿದೆ ಎಂದು ವೆಂಕಟೇಶ್ ಅವರು ಬೇಸರ ವ್ಯಕ್ತಪಡಿಸಿದರು.
ಮೋಂಬತ್ತಿ ಮೆರವಣಿಗೆ: ಈ ಸಂದರ್ಭದಲ್ಲಿ ಸಂಘಟನೆಯ ಕಾರ್ಯಕರ್ತರು ಡಾ. ಅಂಬೇಡ್ಕರ್ ಅವರ ಭಾವಚಿತ್ರವನ್ನು ಹಿಡಿದು ಮೋಂಬತ್ತಿ ಬೆಳಗಿಸಿಕೊಂಡು ಮೆರವಣಿಗೆ ನಡೆಸಿದರು. ಅಂಬೇಡ್ಕರ್ ಅವರಿಗೆ ಜೈಕಾರಗಳನ್ನು ಕೂಗುತ್ತಾ ಸಾಗಿದರು. ರೈಲ್ವೇ ನಿಲ್ದಾಣದ ಬಳಿ ಡಾ. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ನಮಿಸಿ ಪುಷ್ಪ ನಮನ ಸಲ್ಲಿಸಲಾಯಿತು.
ರಾಜ್ಯ ಸಂಘಟನಾ ಸಂಚಾಲಕಿ ನಾಗವೇಣಿ, ಜಿಲ್ಲಾ ಸಂಚಾಲಕ ನರಸಿಂಹಮೂರ್ತಿ, ಸಂಘಟನಾ ಸಂಚಾಲಕ ಶ್ಯಾಮ್, ಗಾಯಿತ್ರಿ, ತಾಲ್ಲೂಕು ಮುಖಂಡರಾದ ಅಂಬರೀಶ್, ರಾಜೇಶ್, ಪ್ರಭು, ಪ್ರತೀಶ್, ರಾಮದಾಸ್ ಸೇರಿದಂತೆ ಹಲವರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
