
Sidlaghatta : ಶಿಡ್ಲಘಟ್ಟ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಸ್.ಸಿ.ಐ ನವಜೀವನ ಸೇವಾ ಸಂಘ, ಎಪಿಡಿ ಸಂಸ್ಥೆ ಬೆಂಗಳೂರು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ವಿಶ್ವ ಬೆನ್ನುಹುರಿ ಅಪಘಾತ ವಿಶೇಷ ಚೇತನರ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಎಸ್.ಸಿ.ಐ ನವಜೀವನ ಸೇವಾ ಸಂಘದ ಅಧ್ಯಕ್ಷ ಮುನಿರಾಜು, ಬೆನ್ನುಹುರಿ ಅಪಘಾತಕ್ಕೆ ಒಳಗಾದ ವಿಶೇಷ ಚೇತನರನ್ನು ರಾಜ್ಯ ಸರ್ಕಾರವು 2016ರ ಕಾಯಿದೆಯ ಅಡಿಯಲ್ಲಿ ಗುರುತಿಸಲಾದ 21 ಅಂಗವಿಕಲತೆಗಳ ಪಟ್ಟಿಗೆ 22ನೇ ಅಂಗವಿಕಲತೆಯಾಗಿ ಸೇರಿಸಬೇಕು ಎಂದು ಒತ್ತಾಯಿಸಿದರು. ಜೊತೆಗೆ ರಾಜ್ಯದ ಎಲ್ಲಾ ವಿಶೇಷ ಚೇತನರ ಮಾಸಿಕ ಪಿಂಚಣಿಯನ್ನು 5 ಸಾವಿರ ರೂಪಾಯಿಗೆ ಹೆಚ್ಚಿಸಬೇಕೆಂದರು. ಅಪಘಾತಕ್ಕೊಳಗಾದವರಿಗೆ ಉಚಿತ ಮೆಡಿಕಲ್ ಕಿಟ್ ಹಾಗೂ ಪುನರ್ವಸತಿ ಕೇಂದ್ರಗಳ ವ್ಯವಸ್ಥೆ ಸರ್ಕಾರದಿಂದಲೇ ಆಗಬೇಕು ಎಂದರು.
ಎಪಿಡಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಶ್ರೀಕಾಂತ್, ರಸ್ತೆ ಅಪಘಾತಗಳು, ಎತ್ತರ ಏರುವುದು, ಅತಿಯಾದ ಭಾರ ಹೊರುವುದರಿಂದ ಬೆನ್ನುಹುರಿ ಅಪಘಾತಗಳು ಸಂಭವಿಸುತ್ತವೆ ಎಂದು ಹೇಳಿ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕೆಂದರು. ಕಾಲೇಜಿನ ಪ್ರಾಂಶುಪಾಲ ಮುರಳಿಆನಂದ್, ವಿದ್ಯಾರ್ಥಿಗಳು ದ್ವಿಚಕ್ರ ವಾಹನ ಓಡಿಸುವಾಗ ವಿಶೇಷ ಜಾಗ್ರತೆ ವಹಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದ ಐವರು ವಿಶೇಷ ಚೇತನರನ್ನು ಅವರ ಸಾಧನೆಗಾಗಿ ಸನ್ಮಾನಿಸಲಾಯಿತು. ಔಷಧಿ ಕಿಟ್ ವಿತರಣೆ ಹಾಗೂ ವಿಶೇಷ ಚೇತನ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಣೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಜ್ಯೋತಿಲಕ್ಷ್ಮಿ, ವಕೀಲ ಜಗದೀಶ್, ಎಂ.ಆರ್.ಡಬ್ಲ್ಯೂ ರಾಮಚಂದ್ರ, ಸಂಘದ ಕಾರ್ಯದರ್ಶಿ ರವಿ, ಉಪಾಧ್ಯಕ್ಷ ಮಂಜುನಾಥ್, ಸಮರ್ಥನಂ ಸಂಸ್ಥೆಯ ಪವಿತ್ರ, ಎಪಿಡಿ ಸಂಸ್ಥೆಯ ಸುಧಾ ಹಾಗೂ ಗಿರಿಜಾ ಉಪಸ್ಥಿತರಿದ್ದರು.