Home News ಸರ್ಕಾರಿ ಶಾಲೆಗಳಲ್ಲಿ ಸಂಭ್ರಮದ ಶಾಲಾ ಪ್ರಾರಂಭೋತ್ಸವ

ಸರ್ಕಾರಿ ಶಾಲೆಗಳಲ್ಲಿ ಸಂಭ್ರಮದ ಶಾಲಾ ಪ್ರಾರಂಭೋತ್ಸವ

0

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಶುಕ್ರವಾರ ಸಂಭ್ರಮದಿಂದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ನಡೆಸಲಾಯಿತು.

ಕೆಲ ಗ್ರಾಮಗಳಲ್ಲಿ ಶಾಲೆಯ ವತಿಯಿಂದ ಜಾಥಾ ನಡೆಸಿ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಅಭಿಯಾನ ನಡೆಸಲಾಯಿತು. ಕೆಲವೆಡೆ ಶಿಕ್ಷಕರು ಮನೆಗಳಿಗೆ ತೆರಳಿ ಪೋಷಕರಿಗೆ ಸರ್ಕಾರಿ ಶಾಲೆಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ವಿವರಿಸಿ ಮಕ್ಕಳನ್ನು ಕಳುಹಿಸುವಂತೆ ಕೋರಿದರು. ಕೆಲ ಸರ್ಕಾರಿ ಶಾಲೆಗಳ ಶಿಕ್ಷಕರು ತಮ್ಮ ಶಾಲೆಯ ಕುರಿತಾಗಿ ಭಿತ್ತಿಪತ್ರವನ್ನು ಸಿದ್ಧಪಡಿಸಿದ್ದು, ಪೋಷಕರಿಗೆ ಅದನ್ನು ನೀಡಿದರು.

ಬಹುತೇಕ ಶಾಲೆಗಳಲ್ಲಿ ಸಿಹಿ ವಿತರಿಸಿ, ಮಕ್ಕಳಿಗೆ ಹೂಗುಚ್ಛ ನೀಡಿ, ಪಠ್ಯಪುಸ್ತಕಗಳನ್ನು ಕೊಟ್ಟು ಸ್ವಾಗತಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸರ್ಕಾರಿ ಶಾಲೆಗಳು ಸಿಂಗಾರಗೊಂಡಿದ್ದವು.

ಕೋಟೆ ವೃತ್ತದ ಸರ್ಕಾರಿ ಬಾಲಕಿಯರ ಪ್ರಾಥಮಿಕ ಶಾಲೆಯಲ್ಲಿ ಹೊಸ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವಕ್ಕೆ ಮಕ್ಕಳಿಗೆ ಗುಲಾಬಿ ಹೂವು, ಪೆನ್ಸಿಲ್, ರಬ್ಬರ್, ಚಾಕೋಲೇಟ್ ಹಾಗೂ ನೋಟು ಪುಸ್ತಕಗಳನ್ನು ನೀಡಿ ಸ್ವಾಗತಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಗರಸಭೆಯ ಪೌರಾಯುಕ್ತ ಮೋಹನ್ ಕುಮಾರ್ ಮಾತನಾಡಿ, ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು. ಅವರಿಗೆ ಉತ್ತಮ ಶಿಕ್ಷಣ ದೊರೆತರೆ ಮಾತ್ರ ದೇಶ ಮುನ್ನಡೆಯಬಹುದು. ಶಿಕ್ಷಣದ ಮೂಲವೇ ಸರ್ಕಾರಿ ಶಾಲೆಗಳಲ್ಲಿ ಇದೆ. ಇಲ್ಲಿ ನುರಿತ ಶಿಕ್ಷಕರು, ಉತ್ತಮ ಕಟ್ಟಡ ಸೌಲಭ್ಯ, ಉಚಿತ ಪಾಠಪುಸ್ತಕಗಳು, ಮಧ್ಯಾಹ್ನದ ಊಟದ ಯೋಜನೆ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಸರ್ಕಾರ ನೀಡುತ್ತಿದೆ. ಸಾರ್ವಜನಿಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ದಾಖಲಿಸಿ ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ತಾಲ್ಲೂಕಿನ ಗೌಡನಹಳ್ಳಿ ಸರ್ಕಾರಿ ಶಾಲೆಗೆ ಭೇಟಿ ನೀಡಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರ ಕುಮಾರ್ ಮಾತನಾಡಿ, “ಗೌಡನಹಳ್ಳಿ ಸರ್ಕಾರಿ ಶಾಲೆಗೆ ಪೋಷಕರ, ಗ್ರಾಮಸ್ಥರ ಹಾಗೂ ದಾನಿಗಳ ನೆರವು ಇದೆ. ಈ ಶಾಲೆಯ ಎಸ್.ಡಿ.ಎಂ.ಸಿ ಗೆ ಸಮಗ್ರ ಶಿಕ್ಷಣ “ಪುಷ್ಟಿ” ಪ್ರಶಸ್ತಿ ಮತ್ತು ಒಂದು ಲಕ್ಷ ರೂ ಬಹುಮಾನ (ಅನುದಾನ) ದೊರಕಿದೆ. ಶಿಕ್ಷಕರು ಇನ್ನೂ ಹೆಚ್ಚಿನ ಶ್ರಮವಹಿಸಬೇಕು. ಈ ರೀತಿಯ ಶಾಲೆಗಳು ತಾಲ್ಲೂಕಿಗೆ ಹೆಮ್ಮೆ ಎನಿಸುವಂತಿರಬೇಕು” ಎಂದು ಹೇಳಿದರು.

ನಾಗಮಂಗಲ ಸರ್ಕಾರಿ ಶಾಲೆಯಲ್ಲಿ ಒಬ್ಬಟ್ಟನ್ನು ಮಾಡಿ ಮಕ್ಕಳಿಗೆ ಬಡಿಸಿದರೆ, ಕೆಲವು ಶಾಲೆಗಳಲ್ಲಿ ಪಾಯಸ ಮೊದಲಾದ ಸಿಹಿಯನ್ನು ಮಕ್ಕಳಿಗೆ ನೀಡಲಾಯಿತು.

ಈ ಸಂದರ್ಭದಲ್ಲಿ ಶಾಲೆಯ ಎಲ್ಲಾ ಶಿಕ್ಷಕರು, ಎಸ್‌.ಡಿ.ಎಂ.ಸಿ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಇದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version