Home News ಅಪರಾಧ ತಡೆಯಲು ಗ್ರಾಮಸ್ಥರಿಗೆ ಅರಿವು

ಅಪರಾಧ ತಡೆಯಲು ಗ್ರಾಮಸ್ಥರಿಗೆ ಅರಿವು

0
Sidlaghatta Veerapura Police Crime Awareness Programme

Veerapura, sidlaghatta : ನಿಮ್ಮ ಸುತ್ತ ಮುತ್ತಲಲ್ಲಿ ಏನಾದರೂ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿರುವುದು ಗಮನಕ್ಕೆ ಬಂದಲ್ಲಿ ನಿಮ್ಮ ಗ್ರಾಮದ ಬೀಟ್ ಪೊಲೀಸರಿಗೆ ಅಥವಾ ಸಮೀಪದ ಠಾಣೆಗೆ ಮಾಹಿತಿ ನೀಡಿ. ಇದರಿಂದ ಸಂಭವನೀಯ ಅನಾಹುತ, ಸಮಾಜ ವಿರೋಧಿ ಕೃತ್ಯಗಳನ್ನು ತಡೆಯಬಹುದು ಎಂದು ಗ್ರಾಮಾಂತರ ಠಾಣೆ ಎಸ್‌.ಐ-2 ಜಿ.ನಾಗರಾಜ್ ಅವರು ಗ್ರಾಮಸ್ಥರಿಗೆ ತಿಳಿಸಿದರು.

ತಾಲ್ಲೂಕಿನ ವೀರಾಪುರ ಗ್ರಾಮದಲ್ಲಿ ಸಾಮಾಜಿಕ ಜಾಲ ತಾಣಗಳ ದುರ್ಬಳಕೆ, ಹೆಚ್ಚಿನ ಹಣ, ಬಡ್ಡಿ ಸಂಪಾದನೆಯ ಆಮಿಷಗಳ ಕುರಿತು ಗ್ರಾಮಸ್ಥರಲ್ಲಿ ಅರಿವು ಮೂಡಿಸಿ ಅವರು ಮಾತನಾಡಿದರು.

ನಿಮ್ಮ ಮನೆ, ಊರು ಹಾಗೂ ಸುತ್ತ ಮುತ್ತಲಲ್ಲಿ ಏನಾದರೂ ಸಮಾಜ ವಿರೋಧಿ, ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿರುವುದು ಅಥವಾ ಅನುಮಾನಾಸ್ಪದ ಚಟುವಟಿಕೆಗಳು ನಡೆಯುವುದು ಕಂಡು ಬಂದಲ್ಲಿ ನಮಗೆ ತಿಳಿಸಿ, ನಿಮ್ಮ ಹೆಸರು ವಿಳಾಸವನ್ನು ಗೌಪ್ಯವಾಗಿ ಇಡಲಾಗುವುದು.

ನೀವು ನೀಡುವ ಮಾಹಿತಿಯಿಂದ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಯಬಹುದು. ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿ ಜನ ಸಾಮಾನ್ಯರು ನೆಮ್ಮದಿಯ ಮತ್ತು ಭದ್ರತೆ ಭಾವದಿಂದ ಜೀವನ ನಡೆಸುವ ವಾತಾವರಣ ನಿರ್ಮಾಣವಾಗುತ್ತದೆ. ಅದಕ್ಕೆ ನಿಮ್ಮೆಲ್ಲರ ಸಹಕಾರ ಅತಿ ಅಗತ್ಯ ಎಂದರು.

ಇನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹೆಚ್ಚು ಹಣ ಗಳಿಸುವ ಯೋಜನೆ, ಸೀಮಿತ ಅವಧಿಯಲ್ಲಿ ನಿಮ್ಮ ಹಣ ದುಪ್ಪಟ್ಟು ಆಗಲಿದೆ. ಹೆಚ್ಚಿನ ಬಡ್ಡಿ ಸಿಗಲಿದೆ ಎಂದೆಲ್ಲಾ ನಿಮ್ಮಲ್ಲಿ ಆಸೆಯನ್ನು ಚಿಗುರಿಸಿ ನಿಮ್ಮಿಂದ ಹಣವನ್ನು ವಿವಿಧ ಕಡೆ ಹಾಕಿಸುವ ಜಾಹೀರಾತುಗಳನ್ನು ನಂಬಬೇಡಿ.

ಯಾವುದೆ ಕಾರಣಕ್ಕೂ ನಿಮ್ಮ ಮೊಬೈಲ್‌ ನಲ್ಲಿ ಓಟಿಪಿಯನ್ನು ಯಾರಿಗೂ ಶೇರ್ ಮಾಡಬೇಡಿ, ನಿಮ್ಮ ಖಾಸಗಿ ಮಾಹಿತಿಯನ್ನು ಕೂಡ ಅಪರಿಚತರೊಂದಿಗೆ ಹಂಚಿಕೊಳ್ಳಬೇಡಿ ಎಂದು ಮನವಿ ಮಾಡಿದರು.

ಆನ್‌ ಲೈನ್ ಅಥವಾ ಇನ್ನಾವುದೆ ಸೈಬರ್ ಅಪರಾಧದ ಮಾರ್ಗದಲ್ಲಿ ಒಂದೊಮ್ಮೆ ನಿಮ್ಮ ಹಣ ಆಗುಂತಕರ ಪಾಲಾದಲ್ಲಿ ಒಂದು ಗಂಟೆ ಅವಧಿಯಲ್ಲಿ 1930 ಗೆ ಕಾಲ್ ಮಾಡಿ ವಿವರಿಸಿದರೆ ನಿಮ್ಮ ಹಣ ವಾಪಸ್ ನಿಮ್ಮ ಖಾತೆಗೆ ಬರುವಂತೆ ಮಾಡಲಾಗುವುದು ಎಂದು ಹೇಳಿದರು.

ಈ ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸರೊಂದಿಗೆ ಕೈ ಜೋಡಿಸಿ, ಪೊಲೀಸರು ಮತ್ತು ನಾಗರೀಕರ ನಡುವೆ ಉತ್ತಮ ಬಾಂಧವ್ಯ ಇರಬೇಕು ಎಂದ ಅವರು, ಪೊಲೀಸರ ಬಗ್ಗೆ ವಿನಾಕಾರಣ ಭಯ ಬೇಡ ಎಂದು ವಿವರಿಸಿದರು.

ಪೊಲೀಸ್ ಪೇದೆ ಮಂಜುನಾಥ್, ಗ್ರಾಮ ಪಂಚಾಯಿತಿ ಸದಸ್ಯ ಡಿ.ವೆಂಕಟೇಶ್, ಮುಖಂಡರಾದ ಬಿ.ಮುನಿರೆಡ್ಡಿ, ದ್ಯಾವಪ್ಪ, ನಾಗರಾಜ್, ಗಣೇಶ್, ಶ್ರೀನಿವಾಸ್, ಮುನಿಯಪ್ಪ, ಕೇಶವ, ವೆಂಕಟೇಶ್ ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version