Sidlaghatta : ಸರಕಾರಿ ಶಾಲೆಗಳ ಬಗ್ಗೆ ಪೋಷಕರಲ್ಲಿ ಇರುವ ಕೀಳರಿಮೆಯನ್ನು ಹೋಗಲಾಡಿಸುವ ಕೆಲಸ ಮೊದಲಿಗೆ ಆಗಬೇಕು, ಅದಕ್ಕೆ ತಕ್ಕಂತೆ ಮೂಲ ಸೌಕರ್ಯಗಳು ಹೆಚ್ಚಬೇಕು ಎಂದು ನಗರಸಭೆ ಸದಸ್ಯ ಅನಿಲ್ ಕುಮಾರ್ ಅಭಿಪ್ರಾಯಪಟ್ಟರು.
ನಗರದ 03 ನೇ ವಾರ್ಡಿನ ಸರಕಾರಿ ಉರ್ದು ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಸಕ ಬಿ.ಎನ್.ರವಿಕುಮಾರ್ ಅವರು ಕೊಡುಗೆಯಾಗಿ ನೀಡಿರುವ ಉಚಿತ ನೋಟ್ ಪುಸ್ತಕಗಳನ್ನು ಅವರ ಪರವಾಗಿ ವಿತರಿಸಿ ಮಾತನಾಡಿದರು.
ಸಾಕಷ್ಟು ಸರಕಾರಿ ಶಾಲೆಗಳಲ್ಲಿ ಶಿಕ್ಷಕರು ಶಾಲೆಯಲ್ಲಿ ಸಿಗುವ ಸವಲತ್ತುಗಳು, ಶಿಕ್ಷಣ, ವ್ಯವಸ್ಥೆಗಳ ಬಗ್ಗೆ ಮಕ್ಕಳಿಗೆ ಮತ್ತು ಮಕ್ಕಳ ಪೋಷಕರಿಗೆ ಮನವರಿಕೆ ಮಾಡಿಕೊಡುವಲ್ಲಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅದಕ್ಕಾಗಿಯೆ ಮಕ್ಕಳ ದಾಖಲಾತಿ ಕಡಿಮೆ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಗರ ಸೇರಿದಂತೆ ಗ್ರಾಮಾಂತರದ ಎಲ್ಲ ಸರಕಾರಿ ಶಾಲೆಗಳ ಮಕ್ಕಳಿಗೂ ಶಾಸಕ ಬಿ.ಎನ್.ರವಿಕುಮಾರ್ ಅವರು ಉಚಿತವಾಗಿ ನೋಟ್ ಪುಸ್ತಕಗಳನ್ನು ನೀಡುತ್ತಿದ್ದು ಎಲ್ಲ ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕು, ಉತ್ತಮ ಅಂಕಗಳನ್ನು ಪಡೆದು ಹೆತ್ತವರು, ಅಕ್ಷರ ಕಲಿಸಿದ ಗುರುಗಳು, ಹುಟ್ಟಿದ ಊರಿಗೂ ಕೀರ್ತಿ ತರಬೇಕೆಂದು ಕೋರಿದರು.
83 ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಲಯನ್ ಕ್ಲಬ್‌ನ ಅಧ್ಯಕ್ಷ ಫುಡ್ ಮನೋಹರ್, ನಗರಸಭೆ ಸದಸ್ಯೆ ಆಯೀಷಾ, ಮುಖಂಡರಾದ ಆಸೀಫ್, ಮುಖ್ಯ ಶಿಕ್ಷಕಿ ಫಸಿಯಾ ಬಾನು, ಶಿಕ್ಷಕಿ ಅಜ್ಮಸುಲ್ತಾನ್, ಅಪ್ಸರ್‌ಪಾಷ, ವಿದ್ಯಾರ್ಥಿಗಳು, ಪೋಷಕರು ಹಾಜರಿದ್ದರು.