
Cheemangala, Sidlaghatta : LKG ಮತ್ತು UKG ಗಳನ್ನು ಸರ್ಕಾರಿ ಶಾಲೆಗಳಲ್ಲಿ ಪ್ರಾರಂಭಿಸಿ. ಅದಕ್ಕಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಿ, ವೇತನದ ವೆಚ್ಚವನ್ನು ನಾನು ಭರಿಸುತ್ತೇನೆ. ಪೋಷಕರು ಖಾಸಗಿ ಶಾಲೆಯತ್ತ ತಿರುಗಿ ನೋಡದ ಹಾಗೆ ಸರ್ಕಾರಿ ಶಾಲೆಗಳನ್ನು ಉತ್ತಮಗೊಳಿಸಲು ಶಿಕ್ಷಕರ ಸಹಕಾರವಿರಲಿ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ತಾಲ್ಲೂಕಿನ ಚೀಮಂಗಲ ಗ್ರಾಮದ ಕುವೆಂಪು ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಶಾಲಾ ಪ್ರಾರಂಭೋತ್ಸವದ ಅಂಗವಾಗಿ ತಮ್ಮ “ಎಚ್.ಡಿ.ಡಿ ಮತ್ತು ಜೆ.ಪಿ.ಎನ್”ಟ್ರಸ್ಟ್ ವತಿಯಿಂದ ನೋಟ್ ಪುಸ್ತಕಗಳು ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸಿ ಅವರು ಮಾತನಾಡಿದರು.
ಪೋಷಕರು ತಮ್ಮ ಮಕ್ಕಳು ಇಂಗ್ಲಿಷ್ ಕಲಿಯಬೇಕೆಂದು ಆಸೆ ಪಟ್ಟು ಖಾಸಗಿ ಶಾಲೆಗಳಿಗೆ ಸೇರಿಸುತ್ತಾರೆ. ಸರ್ಕಾರಿ ಶಾಲೆಗಳಲ್ಲಿಯೇ ಎಷ್ಟು ಸಾಧ್ಯವೋ ಅಷ್ಟು ಎಲ್.ಕೆ.ಜಿ ಮತ್ತು ಯು.ಕೆ.ಜಿ ಪ್ರಾರಂಭಿಸಿ. ಅದಕ್ಕೆ ಸಂಪೂರ್ಣ ಸಹಕಾರ ನೀಡುತ್ತೇನೆ. ಖಾಸಗಿ ಶಾಲೆಗಳಿಂದ ಮಕ್ಕಳನ್ನು ಬಿಡಿಸಿ, ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು. ಆ ರೀತಿ ಶಾಲೆಗಳನ್ನು ಉತ್ತಮಪಡಿಸಬೇಕು ಎಂದರು.
ಎಲ್ಲಾ ಸರ್ಕಾರಿ ಶಾಲೆಗಳ ಮುಖ್ಯಶಿಕ್ಷಕರು ತಮ್ಮಲ್ಲಿನ ಕೊರತೆಗಳು, ಸಮಸ್ಯೆಗಳು ಹಾಗೂ ಶಾಲೆಯನ್ನು ಉತ್ತಮಗೊಳಿಸಲು ಬೇಕಾದ ಅಂಶಗಳನ್ನು ಪಟ್ಟಿ ಮಾಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ನನಗೆ ತಲುಪಿಸಿ. ಅತಿ ಅಗತ್ಯತೆಗಳನ್ನು ಮುಖ್ಯ ಆದ್ಯತೆಯನ್ನಾಗಿಸಿಕೊಂಡು ಉತ್ತಮಗೊಳಿಸೋಣ. ಶಿಕ್ಷಣ ಕ್ಷೇತ್ರ ಬಲಗೊಳ್ಳಬೇಕು. ನಮ್ಮ ಕ್ಷೇತ್ರದ ಎಲ್ಲಾ ಮಕ್ಕಳಿಗೂ ಒಳ್ಳೆಯ ಶಿಕ್ಷಣ ಸಿಗಬೇಕು ಎಂದರು.
ಚಿಲಕಲನೇರ್ಪು ಹೋಬಳಿಯ 51 ಶಾಲೆಗಳೂ ಸೇರಿಸಿಕೊಂಡು ತಾಲ್ಲೂಕಿನ ಎಲ್ಲಾ ಸರ್ಕಾರಿ ಶಾಲೆಗಳ ಸುಮಾರು 12 ಸಾವಿರ ವಿದ್ಯಾರ್ಥಿಗಳಿಗೂ ನಮ್ಮ “ಎಚ್.ಡಿ.ಡಿ ಮತ್ತು ಜೆ.ಪಿ.ಎನ್”ಟ್ರಸ್ಟ್” ವತಿಯಿಂದ ನೋಟ್ ಪುಸ್ತಕಗಳು ಹಾಗೂ ಲೇಖನ ಸಾಮಗ್ರಿಗಳನ್ನು ಏಕಕಾಲದಲ್ಲಿ ವಿತರಣೆ ಮಾಡಲಾಗುತ್ತಿದೆ. ಉತ್ತಮ ಫಲಿತಾಂಶ ಪಡೆಯುವುದರ ಜೊತೆಯಲ್ಲಿ ಮಕ್ಕಳ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ಕೆಲಸ ಶಾಲೆಗಳಲ್ಲಿ ಆಗಲಿ ಎಂದು ಹೇಳಿದರು.
ಮನವಿ : ಸುತ್ತಮುತ್ತಲಿನ ಹನ್ನೆರಡು ಹಳ್ಳಿಗಳಿಂದ ಚೀಮಂಗಲದ ಕುವೆಂಪು ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಮಕ್ಕಳು ಬರುತ್ತಾರೆ. ಬಸ್ ಅನುಕೂಲವಿದ್ದರೆ ಇನ್ನಷ್ಟು ಹಳ್ಳಿ ಮಕ್ಕಳು ಶಾಲೆಗೆ ಬರಲು ಅನುಕೂಲವಾಗುತ್ತದೆ. ಬಸ್ ಅನುಕೂಲ ಮಾಡಿಕೊಡುವಂತೆ ಶಾಲೆಯ ಎಸ್.ಡಿ.ಎಂ.ಸಿ ವತಿಯಿಂದ ಮನವಿ ಸಲ್ಲಿಸಲಾಯಿತು. 150 ಮಂದಿ ಮಕ್ಕಳಿರುವ ಶಾಲೆಗೆ ಆಟದ ಮೈದಾನ ಬೇಕು ಎಂದು ಗ್ರಾಮಸ್ಥರು ಶಾಸಕರಿಗೆ ಮನವಿ ಸಲ್ಲಿಸಿದರು.
ತಾಲ್ಲೂಕು ಪಂಚಾಯಿತಿ ಇಒ ಮುನಿರಾಜು ಮಾತನಾಡಿ, ದೇಶದ ಮುಂದಿನ ಭವಿಷ್ಯವನ್ನು ಸರ್ಕಾರ ನಂಬಿಕೆಯಿಟ್ಟು ಶಿಕ್ಷಕರ ಕೈಗೆ ನೀಡಿದೆ. ಸಮಾಜವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಬಹಳಷ್ಟಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರ ಕುಮಾರ್ ಮಾತನಾಡಿ, ಈ ಬಾರಿ ಎಲ್ಲಾ ಮಕ್ಕಳಿಗೂ ಪಠ್ಯಪುಸ್ತಕ ಮತ್ತು ಸಮವಸ್ತ್ರ ಸರ್ಕಾರದಿಂದ ಬಂದಿದ್ದು, ಈ ದಿನ ವಿತರಣೆ ಮಾಡುತ್ತಿದ್ದೇವೆ ಎಂದರು.
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ, ತಾದೂರು ರಘು ಮಾತನಾಡಿದರು. ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ್ ಅವರನ್ನು ಸನ್ಮಾನಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷನಾಗರಾಜ್, ಉಪಾಧ್ಯಕ್ಷೆ ಸುಮಿತ್ರಾ ಮಂಜುನಾಥ್, ಸದಸ್ಯ ಅಯ್ಯಣ್ಣ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸುಬ್ಬಾರೆಡ್ಡಿ, ಮೇಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಎ.ಉಮೇಶ್, ಶ್ರೀನಿವಾಸ್, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮುನಿರಾಜು, ಪಿಡಿಒ ತನ್ವೀರ್ ಅಹಮದ್, ಅಕ್ಷರ ದಾಸೋಹ ಸಹಾಯ ನಿರ್ದೇಶಕ ಆಂಜನೇಯ, ಶಿಕ್ಷಕರಾದ ಶಿವಕುಮಾರ್, ಗಜೇಂದ್ರ ಹಾಜರಿದ್ದರು.