Sidlaghatta : ತಂಬಾಕು ಸೇವನೆಯಿಂದ ಕ್ಯಾನ್ಸರ್, ಕ್ಷಯರೋಗ ಸೇರಿದಂತೆ ಅಪಾಯಕಾರಿ ಕಾಯಿಲೆಗಳು ಬರುತ್ತವೆ. ತಂಬಾಕು ಮುಕ್ತ ದೇಶವನ್ನಾಗಿಸಲು ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಜೆ.ಎಂ.ಎಫ್.ಸಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಯಮನಪ್ಪ ಕರೆ ಹನುಮಂತಪ್ಪ ತಿಳಿಸಿದರು.
ಶಿಡ್ಲಘಟ್ಟ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬುಧವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ನಗರಸಭೆ, ಹಾಗೂ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ “ವಿಶ್ವ ತಂಬಾಕು ನಿಷೇಧ ದಿನಾಚರಣೆ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಮಾನ್ಯ ಜನರು ತಿಳಿವಳಿಕೆ ಇಲ್ಲದೆ ತಂಬಾಕು ಸೇವನೆ ಹಾಗೂ ತಂಬಾಕು ಪೂರಕ ಉತ್ಪನ್ನಗಳಾದ ಗುಟ್ಕಾ, ಸಿಗರೇಟ್, ಬೀಡಿ ಮುಂತಾದ ಮಾದಕ ವಸ್ತುಗಳನ್ನು ಸೇವಿಸುತ್ತಿದ್ದಾರೆ. ಅದರ ದುಷ್ಪರಿಣಾಮದಿಂದ ಕ್ಯಾನ್ಸರ್ ಎಂಬ ಮಹಾಮಾರಿ ರೋಗಕ್ಕೆ ತುತ್ತಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸಾರ್ವಜನಿಕರು ಈ ಪದಾರ್ಥಗಳ ದುಷ್ಪರಿಣಾಮಗಳನ್ನು ತಿಳಿದುಕೊಳ್ಳಬೇಕು. ತಿಳಿವಳಿಕೆ ಹೇಳಬೇಕಾದ ಜನರು, ಅದರಲ್ಲೂ ಯುವಜನತೆ ಈ ತಂಬಾಕು ಪದಾರ್ಥಗಳಿಗೆ ಬಲಿಯಾಗುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ವಿಷಾದಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, ಸಾರ್ವಜನಿಕ ಆರೋಗ್ಯದ ದೊಡ್ಡ ಬೆದರಿಕೆಗಳಲ್ಲಿ ತಂಬಾಕು ಸೇವನೆ ಪ್ರಮುಖವಾಗಿದೆ. ಇದು ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಕೊಲ್ಲುತ್ತಿದೆ. ಪ್ರತ್ಯಕ್ಷ ಧೂಮಪಾನ ಮಾಡುವುದರಿಂದ ಸುಮಾರು ದಶಲಕ್ಷಗಳಷ್ಟು ಜನರು ಸಾವಿಗೀಡಾದರೆ ಧೂಮಪಾನ ಮಾಡದವರು ಪರೋಕ್ಷ ಧೂಮಪಾನಕ್ಕೆ ಬಲಿಯಾಗಿ ಲಕ್ಷಾಂತರ ಜನರು ಸಾವಿಗೀಡಾಗುತ್ತಿದ್ದಾರೆ. ತಂಬಾಕಿನಿಂದ ದೂರವುಳಿಯಲು ಯುವಜನತೆ ಮುಂದಾಗಬೇಕಿದೆ ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಚಂದ್ರಶೇಖರ್ ಅಲ್ಬೂರ್, ತಹಶೀಲ್ದಾರ್ ಬಿ.ಎಲ್.ಸ್ವಾಮಿ, ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ಟಿ.ವಿ.ಚಂದ್ರಶೇಖರಗೌಡ, ನಗರಸಭೆ ಪೌರಾಯುಕ್ತ ಆರ್.ಶ್ರೀಕಾಂತ್, ಬಿಸಿಎಂ ಇಲಾಖೆಯ ಸಹಾಯಕ ನಿರ್ದೇಶಕ ನಾರಾಯಣಪ್ಪ, ಆರೋಗ್ಯ ನಿರೀಕ್ಷಕರಾದ ದೇವರಾಜ್, ಲೋಕೇಶ್ ಹಾಜರಿದ್ದರು.