ಎಚ್.ಎನ್. ವ್ಯಾಲಿ ನೀರು ಅಕ್ರಮ ಬಳಕೆ: ಬೆಸ್ಕಾಂ ಸಭೆಯಲ್ಲಿ ರೈತರ ಆಕ್ರೋಶ

- Advertisement -
- Advertisement -

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಎಚ್.ಎನ್. ವ್ಯಾಲಿ ಯೋಜನೆಯಡಿ ಕೆರೆಗಳಿಗೆ ಹರಿದುಬರುವ ನೀರನ್ನು ಕೆಲವರು ಮೋಟಾರ್‌ ಗಳ ಮೂಲಕ ಅಕ್ರಮವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಮೋಟಾರ್‌ ಗಳ ಕಾರ್ಯಾಚರಣೆಗೆ ಅಕ್ರಮ ವಿದ್ಯುತ್ ಸಂಪರ್ಕವನ್ನೂ ಪಡೆಯಲಾಗುತ್ತಿದೆ ಎಂದು ರೈತರು ದೂರಿದ್ದು, ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ನಗರದ ಬೆಸ್ಕಾಂ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ನಗರ ಮತ್ತು ಗ್ರಾಮೀಣ ಉಪ ವಿಭಾಗಗಳ ಗ್ರಾಹಕರ ಸಂವಾದ ಹಾಗೂ ವಿದ್ಯುತ್ ಸುರಕ್ಷತಾ ಸಭೆಯಲ್ಲಿ ರೈತರು ಈ ವಿಷಯವನ್ನು ಅಧಿಕಾರಿಗಳ ಗಮನಕ್ಕೆ ತಂದರು.

ಸಭೆಯಲ್ಲಿ ಮಾತನಾಡಿದ ರೈತರಾದ ಶೆಟ್ಟಹಳ್ಳಿ ರವಿಪ್ರಕಾಶ್ ಹಾಗೂ ಜಯಂತಿ ಗ್ರಾಮದ ನಾರಾಯಣಸ್ವಾಮಿ, ಎಚ್.ಎನ್. ವ್ಯಾಲಿ ಯೋಜನೆಯ ನೀರನ್ನು ಕೆರೆಗಳಿಗೆ ತಲುಪಿಸುವ ಪೈಪ್‌ ಲೈನ್‌ ಗಳಿಗೆ ಕೆಲವೆಡೆ ಅಕ್ರಮವಾಗಿ ಮೋಟಾರ್‌ ಗಳನ್ನು ಅಳವಡಿಸಲಾಗಿದೆ ಎಂದು ಆರೋಪಿಸಿದರು.

ಪೈಪ್‌ ಲೈನ್‌ ನಿಂದಲೇ ನೇರವಾಗಿ ನೀರನ್ನು ಪಡೆದು ಖಾಸಗಿ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿರುವುದರಿಂದ ಕೆಳಭಾಗದಲ್ಲಿರುವ ಕೆರೆಗಳಿಗೆ ಸಮರ್ಪಕ ಪ್ರಮಾಣದಲ್ಲಿ ನೀರು ತಲುಪುತ್ತಿಲ್ಲ ಎಂದು ದೂರಿದರು.

ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯ ನೀರನ್ನು ಅಕ್ರಮವಾಗಿ ಬಳಸಿಕೊಳ್ಳುವುದರ ಜತೆಗೆ, ಮೋಟಾರ್‌ ಗಳ ಕಾರ್ಯಾಚರಣೆಗೆ ಅಕ್ರಮ ವಿದ್ಯುತ್ ಸಂಪರ್ಕವನ್ನೂ ಪಡೆಯಲಾಗುತ್ತಿದೆ. ಇದರಿಂದ ಸರ್ಕಾರದ ಆಸ್ತಿ ಹಾಗೂ ಸಾರ್ವಜನಿಕ ಸಂಪನ್ಮೂಲಗಳಿಗೆ ನಷ್ಟ ಉಂಟಾಗುತ್ತಿದ್ದು, ಕೆರೆಗಳಿಗೆ ನೀರು ಸಿಗದೆ ರೈತರು ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಅಮ್ಮನಕೆರೆ, ಗುಡಿಹಳ್ಳಿ ಕೆರೆ, ಶೆಟ್ಟಹಳ್ಳಿ ಕೆರೆ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಎಚ್.ಎನ್. ವ್ಯಾಲಿ ನೀರಿನ ಪೈಪ್‌ ಲೈನ್‌ ಗಳನ್ನು ಪರಿಶೀಲಿಸಬೇಕು ಎಂದು ರೈತರು ಒತ್ತಾಯಿಸಿದರು. ಅಕ್ರಮವಾಗಿ ಮೋಟಾರ್‌ ಗಳನ್ನು ಅಳವಡಿಸಿರುವುದು ಕಂಡುಬಂದರೆ ಅವುಗಳನ್ನು ಕೂಡಲೇ ತೆರವುಗೊಳಿಸಿ, ಅಕ್ರಮ ನೀರಿನ ಬಳಕೆ ಹಾಗೂ ವಿದ್ಯುತ್ ಸಂಪರ್ಕ ಪಡೆದವರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರೈತರ ದೂರಿಗೆ ಪ್ರತಿಕ್ರಿಯಿಸಿದ ಬೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ಸೂರ್ಯಪ್ರಕಾಶ್, ಎಚ್.ಎನ್. ವ್ಯಾಲಿ ನೀರನ್ನು ಮೋಟಾರ್‌ ಗಳ ಮೂಲಕ ಅಕ್ರಮವಾಗಿ ಬಳಸುತ್ತಿರುವ ಕುರಿತು ಬಂದಿರುವ ದೂರುಗಳನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದರು. ಪರಿಶೀಲನೆ ವೇಳೆ ಅಕ್ರಮ ವಿದ್ಯುತ್ ಸಂಪರ್ಕಗಳು ಕಂಡುಬಂದರೆ ಇಲಾಖೆಯ ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಇದೇ ವೇಳೆ, ಶೆಟ್ಟಹಳ್ಳಿ ಹಾಗೂ ಇದ್ಲೂಡು ಗ್ರಾಮಗಳ ವಿದ್ಯುತ್ ಲೈನ್ ಸಮಸ್ಯೆ, ಚೌಡಸಂದ್ರ ಭಾಗದ ವಿದ್ಯುತ್ ಪೂರೈಕೆ ಸಮಸ್ಯೆ ಸೇರಿದಂತೆ ವಿವಿಧ ಅಹವಾಲುಗಳನ್ನು ಗ್ರಾಹಕರು ಮತ್ತು ರೈತರು ಅಧಿಕಾರಿಗಳ ಮುಂದಿಟ್ಟರು. ಪ್ರತಿಯೊಂದು ಸಮಸ್ಯೆಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದರು.

ಗ್ರಾಹಕರ ಸಂವಾದ ಸಭೆಗಳ ಕುರಿತು ಸಾರ್ವಜನಿಕರಿಗೆ ಸಮರ್ಪಕ ಮಾಹಿತಿ ನೀಡಲಾಗುತ್ತಿಲ್ಲ ಎಂಬ ಅಸಮಾಧಾನವೂ ಸಭೆಯಲ್ಲಿ ವ್ಯಕ್ತವಾಯಿತು. ಇಂತಹ ಸಭೆಗಳು ಕೆಲವೇ ಜನರಿಗೆ ಸೀಮಿತವಾಗದೆ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಹೆಚ್ಚಿನ ಸಂಖ್ಯೆಯ ಗ್ರಾಹಕರು ಭಾಗವಹಿಸುವಂತಾಗಬೇಕು ಎಂದು ರೈತರು ಒತ್ತಾಯಿಸಿದರು.

ಸಭೆಗಳ ದಿನಾಂಕ ಮತ್ತು ಸಮಯದ ಕುರಿತು ಗ್ರಾಮೀಣ ಪ್ರದೇಶಗಳಲ್ಲಿ ಮುಂಚಿತವಾಗಿ ವ್ಯಾಪಕ ಪ್ರಚಾರ ನಡೆಸಬೇಕು. ಇದರಿಂದ ಜನರು ತಮ್ಮ ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ನೇರವಾಗಿ ಅಧಿಕಾರಿಗಳ ಗಮನಕ್ಕೆ ತರಲು ಅನುಕೂಲವಾಗಲಿದೆ ಎಂದು ಗ್ರಾಹಕರು ಅಭಿಪ್ರಾಯಪಟ್ಟರು.

ಸಭೆಯಲ್ಲಿ ಬೆಸ್ಕಾಂ ಇಲಾಖೆಯ ಅಧಿಕಾರಿಗಳಾದ ಗೌರಮ್ಮ, ಆನಂತಗೌಡ, ವೇದಕಿರಣ್, ಶಿವಕುಮಾರ್, ಜಯಂತಿ ಗ್ರಾಮದ ನಾರಾಯಣಸ್ವಾಮಿ, ರೈತ ಮುಖಂಡ ರವಿಪ್ರಕಾಶ್, ನಾಗರಾಜ್, ವೆಂಕಟೇಶ್, ಶ್ರೀರಾಮ್ ಸೇರಿದಂತೆ ರೈತರು ಹಾಗೂ ವಿವಿಧ ಭಾಗಗಳ ಗ್ರಾಹಕರು ಉಪಸ್ಥಿತರಿದ್ದರು.

ಎಚ್.ಎನ್. ವ್ಯಾಲಿ ನೀರಿನ ಅಕ್ರಮ ಬಳಕೆ ಕುರಿತ ದೂರುಗಳು ತಾಲ್ಲೂಕಿನಲ್ಲಿ ಈ ಹಿಂದೆಯೂ ಕೇಳಿಬಂದಿದ್ದವು.

In English: Farmers at a BESCOM customer interaction and electrical safety meeting alleged that HN Valley project water meant for tanks across Sidlaghatta taluk is being illegally diverted through motors connected directly to pipelines, using unauthorized power connections, starving downstream lakes like Ammanakere, Gudihalli Kere and Shettahalli Kere of water. BESCOM executive engineer Suryaprakash said the complaints would be examined and appropriate action taken under department rules if illegal connections are found. Residents also raised separate power supply issues from Shettahalli, Idlodu and Chowdasandra areas, and asked for wider publicity of future customer meetings so more rural consumers can attend.

Sidlaghatta WhatsApp Channel Group

For Daily Updates WhatsApp ‘HI’ to 7406303366

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -
Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Silk

Related news

- Advertisement -