Sidlaghatta : H N ವ್ಯಾಲಿ ನೀರು ಹರಿಯುವ ಕಾಲುವೆಗೆ ಅಕ್ರಮವಾಗಿ ಮೋಟಾರ್ ಅಳವಡಿಸಿ ನೀರನ್ನು ಹರಿಸಿಕೊಳ್ಳುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅದಕ್ಕಾಗಿ ಶೀಘ್ರದಲ್ಲೆ ಅಧಿಕಾರಿಗಳ ತಂಡ ರಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.
ಎಚ್.ಎನ್ ವ್ಯಾಲಿ ನೀರು ಹರಿಯುವ ಕಾಲುವೆಯ ಅಕ್ಕಪಕ್ಕದಲ್ಲಿನ ರೈತರು ಹಾಗೂ ರೈತರಲ್ಲದವರೂ ಸಹ ಮೋಟಾರ್‌ಗಳನ್ನು ಅಳವಡಿಸಿಕೊಂಡು ಅಕ್ರಮವಾಗಿ ನೀರನ್ನು ತಮ್ಮ ತೋಟಗಳಿಗೆ ಹಾಗೂ ಬೃಹತ್ ಪ್ರಮಾಣದ ಹೊಂಡಗಳಿಗೆ ತುಂಬಿಸಿಕೊಳ್ಳುತ್ತಿದ್ದಾರೆ.
ಇದರಿಂದಾಗಿ ಕೆರೆಗಳಿಗೆ ನೀರು ಹರಿಯುತ್ತಿಲ್ಲ ಎಂದು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ನೇತೃತ್ವದಲ್ಲಿನ ರೈತರ ನಿಯೋಗವು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಅಧಿಕಾರಿಗಳ ಸಭೆಗೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಗುರುವಾರ ನಡೆದ ಅಧಿಕಾರಿಗಳ ಹಾಗೂ ರೈತ ಸಂಘದ ಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಎಚ್.ಎನ್ ವ್ಯಾಲಿಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯ 44 ಕೆರೆಗಳಿಗೆ ನೀರನ್ನು ತುಂಬಿಸಿ ಅದರಿಂದ ಅಂತರ್ಜಲ ಮಟ್ಟ ಹಾಗೂ ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಹೆಚ್ಚಿಸಿ ಆ ನೀರನ್ನು ಕೃಷಿಗೆ ಬಳಸಿಕೊಳ್ಳುವುದು ಯೋಜನೆಯ ಉದ್ದೇಶ.
ನೇರವಾಗಿ ಎಚ್.ಎನ್ ವ್ಯಾಲಿ ನೀರನ್ನು ತೋಟಗಳಿಗೆ ಹರಿಸಲು ಅವಕಾಶವಿಲ್ಲ. ಆದರೂ ನೀರು ಹರಿಯುವ ಕಾಲುವೆಯ ಅಕ್ಕಪಕ್ಕದಲ್ಲಿನ ಕೆಲ ರೈತರು ಮೋಟಾರ್ ಅಳವಡಿಸಿ ನೇರವಾಗಿ ಎಚ್.ಎನ್ ವ್ಯಾಲಿ ನೀರನ್ನು ತೋಟಗಳಿಗೆ ಹರಿಸಿಕೊಳ್ಳುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಬಂದಿವೆ.
ಈ ಯೋಜನೆಗೆ ಸಂಬಂಧಿಸಿದ ನಾನಾ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಿ ಅಕ್ರಮವಾಗಿ ಮೋಟಾರ್ ಅಳವಡಿಸಿ ನೀರು ಹರಿಸುತ್ತಿರುವುದಕ್ಕೆ ಕಡಿವಾಣ ಹಾಕಲಾಗುವುದು ಎಂದು ಸಭೆಯಲ್ಲಿ ಸ್ಪಷ್ಟಪಡಿಸಿದರು.
ರೈತ ಸಂಘದ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ಎಚ್.ಎನ್ ವ್ಯಾಲಿ ಯೋಜನೆಯಡಿ ಚಿಕ್ಕಬಳ್ಳಾಪುರದ 44 ಕೆರೆಗಳು, ಬೆಂಗಳೂರು ನಗರ, ಗ್ರಾಮಾಂತರದ 21 ಕೆರೆಗಳು ಸೇರಿ ಒಟ್ಟು 65 ಕೆರೆಗಳಿಗೆ ಮೊದಲ ಹಂತದಲ್ಲಿ 210 ಎಂ.ಎಲ್.ಡಿ ನೀರು ಹರಿಸಬೇಕಿತ್ತು.
ಆದರೆ 130 ಎಂ.ಎಲ್.ಡಿ ಪ್ರಮಾಣದ ನೀರಷ್ಟೆ ಹರಿಯುತ್ತಿದೆ. ಅದರಲ್ಲೂ ರೈತರು ಕಾಲುವೆಗೆ ಮೋಟಾರ್ ಅಳವಡಿಸಿಕೊಂಡಿರುವ ಕಾರಣ ಇದುವರೆಗೂ ಜಿಲ್ಲೆಯ ಯಾವ ಕೆರೆಯೂ ಮುಖ್ಯವಾಗಿ ಶಿಡ್ಲಘಟ್ಟದಲ್ಲಿನ ಯೋಜನೆಯಡಿ ಬರುವ ಯಾವ ಕೆರೆಗೂ ನೀರು ಹರಿದಿಲ್ಲ ಎಂದು ದೂರಿದರು.
ನಿಗಧಿಯಂತೆ 210 ಎಂ.ಎಲ್.ಡಿ ನೀರನ್ನು ಹರಿಸಬೇಕು, ಅಕ್ರಮ ಮೋಟಾರ್‌ಗಳಿಗೆ ಕಡಿವಾಣ ಹಾಕಬೇಕು ಎಂದು ಭಕ್ತರಹಳ್ಳಿ ಬೈರೇಗೌಡ ಅವರು ಸಭೆಯಲ್ಲಿ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು.
ಇದಕ್ಕೆ ಸ್ಪಂದಿಸಿದ ಡಿಸಿ ರವೀಂದ್ರ ಅವರು, 210 ಎಂ.ಎಲ್.ಡಿ ನೀರನ್ನು ಹರಿಸಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡುವೆ. ರೈತರೂ ಸಹ ನಿಮ್ಮ ಒತ್ತಾಯವೂ ಇರಬೇಕು, ಇನ್ನು ಒಂದೆರಡು ಸುತ್ತು ಸಭೆ ನಡೆಸಿ ಅಗತ್ಯ ಮಾಹಿತಿ ಸಂಗ್ರಹಿಸಲಾಗುವುದು.
ಆ ನಂತರ ಪರಿಪೂರ್ಣ ಮಾಹಿತಿಯೊಂದಿಗೆ ಉನ್ನತ ಮಟ್ಟದಲ್ಲಿ ಚರ್ಚಿಸಿ ಅಗತ್ಯಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಿಇಒ ಪ್ರಕಾಶ್ ಜಿ.ಟಿ ನಿಟ್ಟಾಲಿ, ಡಿವೈಎಸ್ಪಿ ಶಿವಕುಮಾರ್, ಬೆಸ್ಕಾಂನ ಇಇ ಆನಂದ್, ಎಚ್.ಎನ್ ವ್ಯಾಲಿ ಯೋಜನೆಯ ಗೋಪಾಲ್, ಸಣ್ಣ ನೀರಾವರಿ ಇಲಾಖೆಯ ಸಂತೋಷ್, ಜಿಲ್ಲೆಯ ಎಲ್ಲ ತಾಲ್ಲೂಕುಗಳ ಇಒಗಳು ಸಭೆಯಲ್ಲಿ ಭಾಗವಹಿಸಿದ್ದರು.
ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ಜಿಲ್ಲಾಧ್ಯಕ್ಷ ರಾಮನಾಥ್, ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಉಪಾಧ್ಯಕ್ಷ ವೀರಾಪುರ ಮುನಿನಂಜಪ್ಪ, ಮರಳುಕುಂಟೆ ರಾಮಾಂಜಿನಪ್ಪ, ತಾದೂರು ಮಂಜುನಾಥ್ ಹಾಜರಿದ್ದರು.